ಮುಡಾ ಮಾಜಿ ಆಯುಕ್ತರ ಸಮನ್ಸ್‌ ರದ್ದತಿ: ಆದೇಶಕ್ಕಿಲ್ಲ ತಡೆ; ತನಿಖೆ ಮುಂದುವರಿಸಲು ಇಡಿಗೆ ಹೈಕೋರ್ಟ್ ಅನುಮತಿ

ನಟೇಶ್‌ ಅವರ ಮನೆ ಜಫ್ತಿ ಮತ್ತು ಶೋಧದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳು ಮತ್ತು ಅವರ ಹೇಳಿಕೆ ದಾಖಲಿಸಿಕೊಂಡಿರುವುದನ್ನು ಬಾಕಿ ತನಿಖೆಗೆ ಕಾನೂನಿನ ಅನ್ವಯ ಇ ಡಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ವಿಭಾಗೀಯ ಪೀಠ ಹೇಳಿದೆ.
ED & Karnataka HC
ED & Karnataka HC
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ಅವರಿಗೆ 14 ಬದಲಿ ನಿವೇಶನ (ಈಗ ವಾಪಸ್‌ ಮಾಡಲಾಗಿದೆ) ಹಂಚಿಕೆ ಮಾಡಿದ ಸಂದರ್ಭದಲ್ಲಿ ಮುಡಾ ಆಯುಕ್ತರಾಗಿದ್ದ ಡಾ. ಡಿ ಬಿ ನಟೇಶ್‌ ಅವರಿಗೆ ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿ ಏಕಸದಸ್ಯ ಪೀಠ ಮಾಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ. ಆದರೆ, ಪ್ರಕರಣದಲ್ಲಿ ಇತರೆ ಆರೋಪಿಗಳ ವಿರುದ್ಧದ ತನಿಖೆಯನ್ನು ಏಕಸದಸ್ಯ ಪೀಠ ತಡೆಯಲಾಗದು ಎಂದಿದ್ದು, ತನಿಖೆಗೆ ಅನುಮತಿಸಿದೆ. ಈ ಹಿನ್ನೆಲೆಯಲ್ಲಿ ಇ ಡಿ ದಾಖಲಿಸಿದ್ದ ಮುಡಾ ಪ್ರಕರಣದಲ್ಲಿನ ಇತರೆ ಆರೋಪಿಗಳಿಗೆ ಮತ್ತೆ ತನಿಖೆಯ ಭೀತಿ ತಲೆದೋರಿದೆ.

ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ.

ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂಬ ಕೋರಿಕೆಯನ್ನು ಪುರಸ್ಕರಿಸಲಾಗದು. ಆದರೆ, ಪ್ರಕರಣದಲ್ಲಿ ಇತರೆ ಆರೋಪಿಗಳ ವಿರುದ್ಧದ ತನಿಖೆಯನ್ನು ನಿರ್ಬಂಧಿಸಲಾಗದು. ಹೀಗಾಗಿ, ತನಿಖೆ ಮುಂದುವರಿಸಲು ಅನುಮತಿಸಲಾಗಿದೆ. ನಟೇಶ್‌ ಅವರ ಮನೆ ಜಫ್ತಿ ಮತ್ತು ಶೋಧದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳು ಮತ್ತು ಅವರ ಹೇಳಿಕೆ ದಾಖಲಿಸಿಕೊಂಡಿರುವುದನ್ನು ಬಾಕಿ ತನಿಖೆಗೆ ಕಾನೂನಿನ ಅನ್ವಯ ಇ ಡಿ ಬಳಕೆ ಮಾಡಿಕೊಳ್ಳಬಹುದಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

Also Read
ಮುಡಾ ಮಾಜಿ ಆಯುಕ್ತ ನಟೇಶ್‌ ಸಮನ್ಸ್‌ ರದ್ದತಿ ಆದೇಶಕ್ಕೆ ತಡೆ ಕೋರಿದ ಇ ಡಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ನಟೇಶ್‌ ಪ್ರಕರಣ ಬಾಕಿ ಉಳಿದಿರುವುದರಿಂದ ಅವರಿಗೆ ಯಾವುದೇ ಪೂರ್ವಾಗ್ರಹ ಉಂಟಾಗುವುದಿಲ್ಲ. ಈಗಾಗಲೇ ತನಿಖೆ ಸಂಸ್ಥೆ ಮುಂದೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಬಹುದೇ ಎಂಬ ವಿಚಾರವನ್ನು ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ವಿಸ್ತೃತ ನೆಲೆಯಲ್ಲಿ ಪರಿಗಣಿಸಬೇಕಿದೆ. ಆಕ್ಷೇಪಾರ್ಹ ಏಕಸದಸ್ಯ ಪೀಠದ ಆದೇಶದ ಹೊರತಾಗಿ ಪಿಎಂಎಲ್‌ಎ ಅಡಿ ಕಾನೂನಿನ ಅನ್ವಯ ತನಿಖೆಗೆ ಅನುಮತಿಸಲಾಗಿದೆ. ಹೀಗಾಗಿ, ಜಾರಿ ನಿರ್ದೇಶನಾಲಯವು ಕಾನೂನಿನ ಅನ್ವಯ ತನಿಖೆ ನಡೆಸುವ ಅರ್ಹತೆ ಹೊಂದಿದೆ. ಈ ನೆಲೆಯಲ್ಲಿ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

Kannada Bar & Bench
kannada.barandbench.com