ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಅಳವಡಿಸಿರುವ ಕಾವೇರಿ-II ತಂತ್ರಾಂಶಕ್ಕೆ ಹೆಚ್ಚು ಪ್ರಚಾರ ನೀಡಿ: ಹೈಕೋರ್ಟ್‌

ಕಾವೇರಿ II ತಂತ್ರಾಂಶದ ಕಾರ್ಯನಿರ್ವಹಣೆ ಮತ್ತು ಅಲ್ಲಿ ಜಾರಿ ಮಾಡಿರುವ ವ್ಯವಸ್ಥೆಗೆ ಹೆಚ್ಚು ಪ್ರಚಾರ ನೀಡಬೇಕು. ತಂತ್ರಾಂಶ ಬಳಕೆ ಮಾಡುವುದರ ಕುರಿತು ಕಂದಾಯ ಇಲಾಖೆಯು ಜನರಲ್ಲಿ ಅರಿವು ಮೂಡಿಸುವ ಕುರಿತು ಯೋಚಿಸಬೇಕು ಎಂದ ನ್ಯಾಯಾಲಯ.
Justices G Narendar and C M Poonacha
Justices G Narendar and C M Poonacha

“ಬಜೆಟ್‌ ಅಧಿವೇಶನದ ಬಳಿಕ ಸಬ್‌ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಲೋಪ ಸರಿಪಡಿಸಲು ಗುರಿಕೇಂದ್ರಿತ ಪ್ರಯತ್ನ ನಡೆಸಲಾಗುವುದು” ಎಂಬ ರಾಜ್ಯ ಸರ್ಕಾರದ ಹೇಳಿಕೆಗೆ ಮೆಚ್ಚುಗೆ ಸೂಚಿಸಿರುವ ಕರ್ನಾಟಕ ಹೈಕೋರ್ಟ್‌, “ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ದಾಖಲೆಗಳ ನೋಂದಣಿಗಾಗಿ ಅಳವಡಿಸಿರುವ ಕಾವೇರಿ - II ತಂತ್ರಾಂಶದ ಕಾರ್ಯನಿರ್ವಹಣೆಗೆ ಹೆಚ್ಚು ಪ್ರಚಾರ ನೀಡುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು” ಈಚೆಗೆ ಆದೇಶಿಸಿದೆ.

ಮೂವರು ಆರೋಪಿತ ಸಬ್‌ ರಿಜಿಸ್ಟ್ರಾರ್‌ಗಳ ವಿರುದ್ಧ ಕಂದಾಯ ಇಲಾಖೆ ದಾಖಲಿಸಿರುವ ಮೂರು ಅರ್ಜಿಗಳು ಹಾಗೂ ಬೆಂಗಳೂರಿನ ವಿಜಯನಗರದ ನಿವಾಸಿ ಎಂ ಶ್ರೀಹರಿ ಮತ್ತು ಸಬ್‌ರಿಜಿಸ್ಟ್ರಾರ್‌ ವೈ ಎಚ್‌ ಸರೋಜ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿದೆ.

“ಸ್ವಇಚ್ಛೆಯಿಂದ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಅವರು ವಿವಿಧ ಅರ್ಜಿಗಳಲ್ಲಿ ಈ ಹಿಂದೆ ನ್ಯಾಯಾಲಯ ಮಾಡಿರುವ ಆದೇಶಗಳಿಗೆ ಸಂಬಂಧಿಸಿದಂತೆ ಆಗಿರುವ ಬೆಳವಣಿಗೆಗಳ ಕುರಿತು ವಿವರಿಸಿದ್ದಾರೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಕಾವೇರಿ-II ತಂತ್ರಾಂಶ ಅಳವಡಿಸಲಾಗಿದೆ. ಆ ಮೂಲಕ ದಾಖಲೆಗಳ ನೋಂದಣಿಯಲ್ಲಿ ಮಾನವ ಹಸ್ತಕ್ಷೇಪವನ್ನು ನಿಯಂತ್ರಿಸಲಾಗಿದ್ದು, ಬೆರಳಚ್ಚು ಮತ್ತು ದಾಖಲೆಗಳಿಗೆ ಸಹಿ ಮಾಡುವುದಕ್ಕೆ ಮಾತ್ರ ಜನರ ಹಾಜರಿ ಸೀಮಿತಗೊಳಿಸಲಾಗಿದೆ. ನ್ಯಾಯಾಲಯವು ಬೆರಳು ಮಾಡಿರುವ ಲೋಪಗಳನ್ನು ಸಮರೋಪಾದಿಯಲ್ಲಿ ಸರಿಪಡಿಸಲು ಪ್ರಯತ್ನಿಸಲಾಗುತ್ತಿದ್ದು, ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಮೂಲಕ ಜನರಿಗೆ ವ್ಯವಸ್ಥೆಯಿಂದ ಸಮಸ್ಯೆಯಾಗದಂತೆ ಎಚ್ಚರವಹಿಸಿ, ದಾಖಲೆಗಳ ನೋಂದಣಿಯನ್ನು ಸರಳೀಕೃತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಮುಂದುವರಿದು, “ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ದೊಡ್ಡಮಟ್ಟದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೆಲವು ತಿಂಗಳು ಬೇಕು. ದಾವೆದಾರರ ವೈಯಕ್ತಿಕ ಸಮಸ್ಯೆಗಳನ್ನು ಪ್ರತ್ಯೇಕ ಮತ್ತು ತುರ್ತಾಗಿ ಬಗೆಹರಿಸಲಾಗುವುದು. ಬಜೆಟ್‌ ಅಧಿವೇಶ ನಡೆಯುತ್ತಿರುವುದರಿಂದ ಇಲಾಖೆಯು ಆ ಕುರಿತು ಮಗ್ನವಾಗಿದ್ದು, ಅಧಿವೇಶನದ ಬಳಿಕ ಗುರಿಕೇಂದ್ರಿತ ಪ್ರಯತ್ನದ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನ ನಡೆಸಲಾಗುವುದು ಎಂದು ತಿಳಿಸಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

Also Read
[ರಿಪಬ್ಲಿಕ್‌ ಆಫ್‌ ಸಬ್‌ ರಿಜಿಸ್ಟ್ರಾರ್‌] ವ್ಯವಸ್ಥೆ ಸರಿಪಡಿಸಲು ಪ್ರಯತ್ನ: ಹೈಕೋರ್ಟ್‌ಗೆ ಸರ್ಕಾರದ ಭರವಸೆ

“ಸರ್ಕಾರದ ಸಕ್ರಿಯ ಪ್ರಯತ್ನವನ್ನು ಮೆಚ್ಚುತ್ತಲೇ ಅದು ತಳಮಟ್ಟದಲ್ಲಿ ಫಲಿತಾಂಶ ನೀಡಬೇಕು ಎಂಬುದು ನ್ಯಾಯಾಲಯದ ಕಳಕಳಿಯಾಗಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸಮಸ್ಯೆ ಬಗೆಹರಿಸಲು ಪರಿಹಾರ ಸೂಚಿಸಲಾಗಿದೆ. ಆದರೆ, ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರಚಾರ ನೀಡಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಪ್ರಚಾರದ ಕೊರತೆಯ ಹಿನ್ನೆಲೆಯಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅದು ನಿರೀಕ್ಷಿತ ಮಟ್ಟದಲ್ಲಿ ಹೇಗೆ ಫಲಿತಾಂಶ ನೀಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ. ಹೀಗಾಗಿ, ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಅಳವಡಿಸಲಾಗಿರುವ ಕಾವೇರಿ II ತಂತ್ರಾಂಶದ ಕಾರ್ಯನಿರ್ವಹಣೆ ಮತ್ತು ಅಲ್ಲಿ ಜಾರಿ ಮಾಡಿರುವ ವ್ಯವಸ್ಥೆಗೆ ಹೆಚ್ಚು ಪ್ರಚಾರ ನೀಡಬೇಕು. ಅಲ್ಲಿ ಅಳವಡಿಸಿರುವ ಸಾಫ್ಟ್‌ವೇರ್‌ ಅನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಕುರಿತು ಕಂದಾಯ ಇಲಾಖೆಯು ಜನರಲ್ಲಿ ಅರಿವು ಮೂಡಿಸುವ ಕುರಿತು ಯೋಚಿಸಬೇಕು. ಆ ಮೂಲಕ ಅದನ್ನು ಹೆಚ್ಚಿನ ರೀತಿಯಲ್ಲಿ ಫಲಪ್ರದಗೊಳಿಸಬೇಕು” ಎಂದು ಪೀಠವು ಆದೇಶದಲ್ಲಿ ನಿರ್ದೇಶಿಸಿದೆ.

ಇಲಾಖೆಯೇ ಒಪ್ಪಿಕೊಂಡಿರುವಂತೆ ಹುದ್ದೆಯೇ ಇಲ್ಲದ ಕಡೆ ತನ್ನ ಕಕ್ಷಿದಾರ ಜೆ ರಾಘವೇಂದ್ರ ಅವರಿಗೆ ಹುದ್ದೆ ನೀಡಲಾಗಿದೆ ಎಂದು ರಾಘವೇಂದ್ರ ಪರ ವಕೀಲರು ದೂರಿದ್ದಾರೆ. ಇದಕ್ಕೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ವ್ಯಕ್ತಿಗತ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.  

Related Stories

No stories found.
Kannada Bar & Bench
kannada.barandbench.com