

ರಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವಿಡಿಯೋ ರೆಕಾರ್ಡಿಂಗ್ ಮತ್ತು ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ರೀಡಾ ಕ್ಲಬ್‌ನ ಸದಸ್ಯರಾಗಿರುವ ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆಗಿರುವ ಕೆ ಎನ್ ಶಾಂತಕುಮಾರ್ ಅವರು ಕ್ಲಬ್‌ನ ₹200 ಚಂದಾ ಹಣ ಪಾವತಿಸಿರುವುದಕ್ಕೆ ಸಮಯದ ಮುದ್ರೆ ಒಳಗೊಂಡ ಪ್ರಿಂಟ್‌ಔಟ್ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಚುನಾವಣಾಧಿಕಾರಿಗೆ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ನಾಳೆಯವರೆಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸದಂತೆ ಚುನಾವಣಾಧಿಕಾರಿಯನ್ನು ನಿರ್ಬಂಧಿಸಿದೆ.
ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ರೀಡಾ ಕ್ಲಬ್ ₹200 ಚಂದಾ ಪಾವತಿಸಿಲ್ಲ ಎಂದು ತಮ್ಮ ನಾಮಪತ್ರ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಹಾಗೂ ತಮ್ಮ ಉಮೇದುವಾರಿಕೆ ಎತ್ತಿ ಹಿಡಿಯಲು ಚುನಾವಣಾಧಿಕಾರಿಗೆ ನಿರ್ದೇಶನ ಕೋರಿ ಪತ್ರಿಕೋದ್ಯಮಿ ಕೆ ಎನ್ ಶಾಂತಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ರೀಡಾ ಕ್ಲಬ್‌ನ ಸದಸ್ಯರಾದ ಶಾಂತಕುಮಾರ್ ಅವರು ನಾಮಪತ್ರ ಪರಿಶೀಲನೆ ಮತ್ತು ಅದನ್ನು ತಿರಸ್ಕರಿಸುವ ಮುನ್ನ ₹200 ಚಂದಾ ಹಣ ಪಾವತಿಸಿದ್ದಾರೆಯೇ? ಚಂದಾ ಹಣ ಪಾವತಿಸಿರುವ ವಿಚಾರವನ್ನು ಚುನಾವಣಾಧಿಕಾರಿಯ ಗಮನಕ್ಕೆ ತರಲಾಗಿದೆಯೇ? ಎರಡು ಸರಳ ವಿಚಾರಗಳನ್ನು ಖಾತರಿಪಡಿಸಿಕೊಳ್ಳಬೇಕಿದೆ. ಈ ಸೀಮಿತ ವಿಚಾರಕ್ಕೆ ಸಂಬಂಧಿಸಿದಂತೆ ನಾಮಪತ್ರ ಪರಿಶೀಲನಾ ಪ್ರಕ್ರಿಯೆ ವಿಡಿಯೋವನ್ನು ಕೆಎಸ್‌ಸಿಎ ಅಥವಾ ಬಿ ಕೆ ವೆಂಕಟೇಶ್ ಪ್ರಸಾದ್ ಅವರು ಸಲ್ಲಿಸಬೇಕು. ಚಂದಾ ಹಣವನ್ನು ಶಾಂತಕುಮಾರ್ ಅವರು ಪಾವತಿಸಿರುವ ಸಮಯದ ಮುದ್ರೆ ಒಳಗೊಂಡ ಪ್ರಿಂಟ್‌ಔಟ್ ಅನ್ನೂ ಚುನಾವಣಾಧಿಕಾರಿ ಸಲ್ಲಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅಲ್ಲದೇ, “ಇಂದು ಪ್ರಕಟಿಸಬೇಕಿದ್ದ ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಣದಲ್ಲಿರುವವರ ಪಟ್ಟಿಯನ್ನು ನಾಳೆವರೆಗೆ ಪ್ರಕಟಿಸದಂತೆ ಚುನಾವಣಾಧಿಕಾರಿಗೆ ಮನವಿ ಮಾಡಲಾಗಿದೆ. ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿ, ಉಮೇದುವಾರಿಕೆ ಹಿಂಪಡೆದಿರುವ ಕಲ್ಪನಾ ವೆಂಕಟಾಚಾರ್ ಅವರ ನಾಮಪತ್ರವೂ ಅದರಲ್ಲಿ ಸೇರಲಿದೆ. ಕೆಎಸ್‌ಸಿಎ, ಬಿ ಕೆ ವೆಂಕಟೇಶ್ ಪ್ರಸಾದ್ ಮತ್ತು ಕಲ್ಪನಾ ವೆಂಕಟಾಚಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಇದಕ್ಕೂ ಮುನ್ನ, ಶಾಂತಕುಮಾರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಬಾಕಿ ಉಳಿಸಿಕೊಂಡಿದ್ದ ₹200 ಚಂದಾ ಹಣವನ್ನು ಶಾಂತಕುಮಾರ್ ನವೆಂಬರ್ 24ರಂದು ಪಾವತಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಇಂದು ನಾಮಪತ್ರ ಪರಿಶೀಲನೆಯಾಗಿದೆ. ಅದಕ್ಕೂ ಮುನ್ನವೇ ಚಂದಾ ಹಣ ಪಾವತಿಸಿದ್ದರೂ ಅದನ್ನು ಪರಿಗಣಿಸದೇ ಶಾಂತಕುಮಾರ್ ನಾಮಪತ್ರ ತಿರಸ್ಕರಿಸಲಾಗಿದೆ” ಎಂದು ಆಕ್ಷೇಪಿಸಿದರು.
“ರಶೀದಿ ಹಾಜರುಪಡಿಸಿರುವ ವಿಡಿಯೋ ರೆಕಾರ್ಡಿಂಗ್, ವಾದ ಮಂಡನೆ ಮತ್ತು ದಾಖಲೆಯೂ ಇದೆ. ಅದನ್ನು ತರಿಸಿ, ಪರಿಶೀಲಿಸಿ ನ್ಯಾಯಾಲಯ ನಿರ್ಧರಿಸಬಹುದು” ಎಂದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ಬಿ ಕೆ ವೆಂಕಟೇಶ್ ಪ್ರಸಾದ್ ಮತ್ತು ಕಲ್ಪನಾ ವೆಂಕಟಾಚಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ನಾಮಪತ್ರ ಸಲ್ಲಿಸಿರುವ ದಿನವೇ ಚಂದಾ ಹಣ ಪಾವತಿಸಿರುವ ರಸೀದಿಯನ್ನು ಸಲ್ಲಿಸಬೇಕಿತ್ತು. ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ಅವರನ್ನು ನೇಮಕ ಮಾಡಲಾಗಿದೆ. ಒಂದೊಮ್ಮೆ ಶಾಂತಕುಮಾರ್ ಅವರು ಚಂದಾ ಹಣ ಪಾವತಿಸಿದ್ದರೆ ಈ ಸಂಬಂಧಿತ ದಾಖಲೆಯನ್ನು ನ್ಯಾ. ಅಡಿ ಅವರ ಮುಂದೆ ಇಡಬಹುದಿತ್ತು. ಇದನ್ನು ಮಾಡಲಾಗಿಲ್ಲ. ಹೀಗಾಗಿ, ಅವರ ನಾಮಪತ್ರ ತಿರಸ್ಕರಿಸಿರುವುದು ಸರಿಯಾಗಿದೆ” ಎಂದರು.
ಮುಂದುವರಿದು ನಾವದಗಿ ಅವರು “ಎಲ್ಲವೂ ಅರ್ಜಿಯ ಅಂತಿಮ ನಿರ್ಧಾರಕ್ಕೆ ಒಳಪಟ್ಟಿದೆ ಎಂದು ಹೇಳಿ, ಕಣದಲ್ಲಿರುವವರ ಪಟ್ಟಿ ಪ್ರಕಟಿಸಲು ಅನುಮತಿಸಬೇಕು” ಎಂದರು.
ಆಗ ಪೀಠವು “ಹೀಗೆ ಮಾಡುವುದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಇಲ್ಲಿ ಸೂಕ್ಷ್ಮ ವಿಚಾರಗಳಾಗಿವೆ. ಇದು ನಿಮಗೂ ತಿಳಿದಿದೆ. ಕಣದಲ್ಲಿರುವವರ ಪಟ್ಟಿಯನ್ನು ಚುನಾವಣಾಧಿಕಾರಿ ಪ್ರಕಟಿಸಿ, ನ್ಯಾಯಾಲಯ ಅದನ್ನು ವಜಾಗೊಳಿಸಿದರೆ? ಈಗ ಕಲ್ಪನಾ ಅವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಇಂಥ ಸಂದರ್ಭದಲ್ಲಿ ವೆಂಕಟೇಶ್ ಪ್ರಸಾದ್ ವಿಜಯಿ ಎಂದು ಘೋಷಿಸಲಾಗುತ್ತದೆ. ನಾಳೆ ನ್ಯಾಯಾಲಯದ ಅದನ್ನು ಬದಿಗೆ ಸರಿಸಿದರೆ ನಿಮ್ಮ ಕಕ್ಷಿದಾರರಿಗೂ ಅನನುಕೂಲವಾಗುತ್ತದೆ” ಎಂದರು.
ಇದಕ್ಕೆ ನಾವದಗಿ ಅವರು “ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಚುನಾವಣಾಧಿಕಾರಿ ಪ್ರತಿನಿಧಿಸಿರುವ ವಕೀಲರಿಗೆ ದಾಖಲೆಗಳನ್ನು ಹಾಜರುಪಡಿಸಲು ನಿರ್ದೇಶಿಸಬೇಕು. ಏಕೆಂದರೆ ವ್ಯವಸ್ಥಾಪನಾ ಸಮಿತಿ ಸದಸ್ಯರು ಪ್ರತಿವಾದಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ” ಎಂದರು.
ಆಗ ಪೀಠವು “ಚುನಾವಣಾಧಿಕಾರಿಯ ಮುಂದೆ ರಶೀದಿ ಹಾಜರುಪಡಿಸಲಾಗಿದೆ ಎಂದು ಅರ್ಜಿದಾರರು ಗಂಭೀರ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಈ ಸಂಬಂಧಿತ ದಾಖಲೆಯು ಯಾರ ಕಸ್ಟಡಿಯಲ್ಲಿದೆಯೋ ಅವರು ನ್ಯಾಯಾಲಯಕ್ಕೆ ಸಲ್ಲಿಸಬಹುದು” ಎಂದು ನ್ಯಾಯಾಲಯ ಹೇಳಿತು.
ಚುನಾವಣಾಧಿಕಾರಿ, ಕೆಎಸ್‌ಸಿಎ, ಬಿ ಕೆ ವೆಂಕಟೇಶ್ ಪ್ರಸಾದ್ ಮತ್ತು ಕಲ್ಪನಾ ವೆಂಕಟಾಚಾರ್ ಅವರಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಶಾಂತಕುಮಾರ್ ಅವರು ಪ್ರತಿನಿಧಿಸಿರುವ ಕ್ಲಬ್‌ನ ಸದಸ್ಯತ್ವದ ಹಿಂಬಾಕಿ ಇದೆ ಎಂಬ ಕಾರಣಕ್ಕೆ 24.11.2025ರಂದು ತಮ್ಮ ನಾಮಪತ್ರ ತಿರಸ್ಕೃರಿಸಿರುವ ಆದೇಶವನ್ನು ವಜಾಗೊಳಸಿಬೇಕು. ಕೆಎಸ್‌ಸಿಎ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆ ಸಿಂಧುವಾಗಿದೆ ಎಂದು ಆದೇಶಿಸಲು ಚುನಾವಣಾಧಿಕಾರಿಗೆ ನಿರ್ದೇಶಿಸಬೇಕು, ಚುನಾವಣಾ ಕ್ಯಾಲೆಂಡರ್‌ನ ನಿಯಮಾನುಸಾರ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಲು ಆದೇಶಿಸಬೇಕು ಹಾಗೂ ನಿಯಮ 6(A) (I) ಪ್ರಕಾರ ಕೆಎಸ್‌ಸಿಎ ಬೈಲಾ ನಿಬಂಧನೆಯ ಕ್ಲಾಸ್ 3B(D)(B)ಯು ಆಡಳಿತ ಮಂಡಳಿಯ ಹುದ್ದೆಗೆ ಸ್ಪರ್ಧಿಸುವವರೆಗೆ ಅನ್ವಯಿಸಿಲ್ಲ ಎಂದು ಆದೇಶಿಸಬೇಕು ಎಂದು ಹೈಕೋರ್ಟ್‌ಗೆ ಶಾಂತಕುಮಾರ್ ಮನವಿ ಮಾಡಿದ್ದಾರೆ.