ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಚ್ಚಿದ ಲಕೋಟೆಯಿಂದ ತೆರೆಯದಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಸಿದ ಬಳಿಕ ದತ್ತಾಂಶ ಸೋರಿಕೆಯಾಗಿದೆ. ಹೀಗಾಗಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಚ್ಚಿದ ಲಕೋಟೆಯಿಂದ ತೆರೆಯದಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ
Published on

ರಾಜ್ಯದಲ್ಲಿ ಜಾತಿಗಳ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಿ  ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಿಂದ ತೆರೆಯದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಸಮೀಕ್ಷೆಯ ಸಿಂಧುತ್ವವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ, ಅಖಿಲ‌ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಹಿರಿಯ ವಕೀಲ ಕೆ ಎನ್‌ ಸುಬ್ಬಾರೆಡ್ಡಿ ಸೇರಿದಂತೆ ಹಲವು ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಆಗ ಅರ್ಜಿದಾರರ ಪರ ವಕೀಲರು, ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷಾ ವರದಿಯನ್ನು ‌ಸರ್ಕಾರಕ್ಕೆ ಸಲ್ಲಿಸಿದೆ.  ವರದಿಯಲ್ಲಿನ ದತ್ತಾಂಶದಲ್ಲಿ ಗೌಪ್ಯತೆ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸೋರಿಕೆಯಾಗಬಾರದು ಮತ್ತು ದತ್ತಾಂಶ ಹಂಚಿಕೊಳ್ಳಬಾರದು ಎಂದು ಸರ್ಕಾರಕ್ಕೆ ಈ ಹಿಂದೆ ನ್ಯಾಯಾಲಯದ ಆದೇಶಿಸಿತ್ತು. ಆದರೂ ಸಹ ಆಯೋಗ ವರದಿ ಸಲ್ಲಿಸಿದ ಬಳಿಕ ದತ್ತಾಂಶ ಸೋರಿಕೆಯಾಗಿದೆ. ಹೀಗಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಿವರಿಸಿದರು.

Also Read
[ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ] ದತ್ತಾಂಶ ಸಂರಕ್ಷಣೆ ಕುರಿತು ಆಯೋಗದ ಅಫಿಡವಿಟ್‌ ಸಲ್ಲಿಕೆ: ಸರ್ಕಾರದ ವಿವರಣೆ

ರಾಜ್ಯ ಸರ್ಕಾರ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಹಿಂದುಳಿದ ವರ್ಗಗಳ ಆಯೋಗ ದತ್ತಾಂಶ ಹಂಚಿಕೊಂಡಿಲ್ಲ‌ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆಗ ಪೀಠವು ಮುಚ್ಚಿದ ಲಕೋಟೆಯಲ್ಲಿರುವ ವರದಿಯನ್ನು ತೆರೆಯದಂತೆ ಸರ್ಕಾರಕ್ಕಡ ಮೌಖಿಕ ಸೂಚನೆ  ನೀಡಿ ವಿಚಾರಣೆ ಆಗಸ್ಟ್‌ 20ಕ್ಕೆ ಮುಂದೂಡಿತು.

Kannada Bar & Bench
kannada.barandbench.com