

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ವಾರ್ಡ್‌ಗಳ ಹೆಸರು ಬದಲಾವಣೆಗೆ ಅನುಸರಿಸುವ ಮಾನದಂಡಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಜಿಬಿಎ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್ ಹೆಸರನ್ನು ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಿಸಿರುವುದನ್ನು ಆಕ್ಷೇಪಿಸಿ ಎಚ್ ಸಿ ಬಸವರಾಜಪ್ಪ ಸೇರಿ ಹೆಮ್ಮಿಗೆಪುರ ಹಾಗೂ ಸುತ್ತಲಿನ ಪ್ರದೇಶಗಳ 15 ಮಂದಿ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲರು,“ಜಿಬಿಎ ಅಸ್ತಿತ್ವಕ್ಕೆ ಬಂದು ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ನಡೆಯಿತು. ಬಿಬಿಎಂಪಿ ರಚನೆ ಆದಾಗಿಂದಲೂ ಹೆಮ್ಮಿಗೆಪುರ ವಾರ್ಡ್ ಅಸ್ತಿತ್ವದಲ್ಲಿದೆ. ಜಿಬಿಎ ರಚನೆ ಬಳಿಕ 2025ರ ಸೆಪ್ಟೆಂಬರ್ 30ರಂದು ಹೊರಡಿಸಲಾದ ಕರಡು ಅಧಿಸೂಚನೆಯಲ್ಲಿ ಹೆಮ್ಮಿಗೆಪುರ ವಾರ್ಡ್ ಎಂದೇ ಇತ್ತು. ಆಕ್ಷೇಪಣೆ ಆಲಿಸಿದ ಬಳಿಕ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಿ ಹೆಮ್ಮಿಗೆಪುರ ವಾರ್ಡ್ ಎಂದು ಹೆಸರು ಅಂತಿಮಗೊಳಿಸಲಾಯಿತು. ಆದರೆ, ಡಿಸೆಂಬರ್ 1ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿ ಯಾವುದೇ ಆಕ್ಷೇಪಣೆಗಳನ್ನೂ ಕೇಳದೆ ಹೆಸರನ್ನು ಹೆಮ್ಮಿಗೆಪುರ ವಾರ್ಡಿನಿಂದ ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಿಸಲಾಯಿತು. ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ರಾಜಕೀಯ ಕಾರಣಗಳಿಗೆ ಯಶವಂತಪುರ ಹಾಲಿ ಶಾಸಕ ಎಸ್ ಟಿ ಸೋಮಶೇಖರ್ ಅವರ ಅಣತಿಯಂತೆ ಹೆಸರು ಬದಲಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ನಿರ್ದಿಷ್ಠ ಭಾಗ ಮತ್ತು ಸಮುದಾಯದ ಮತಗಳನ್ನು ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಆರೋಪಿಸಿದರು.
ಸರ್ಕಾರದ ಪರ ವಕೀಲರು “ಹೆಸರು ಬದಲಿಸಲು ಜಿಬಿಎ ಕಾಯಿದೆಯಲ್ಲಿ ಅವಕಾಶವಿದೆ. ಅದಾಗ್ಯೂ ಹೆಚ್ಚಿನ ಮಾಹಿತಿಯನ್ನು ಸರ್ಕಾರದಿಂದ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು” ಎಂದರು.
ವಾರ್ಡ್ ಮರುವಿಂಗಡಣೆ, ಮೀಸಲಾತಿ ನಿಗದಿ ಇವೆಲ್ಲವೂ ಕಾನೂನು ಪ್ರಕ್ರಿಯೆಗಳು ಎಂಬುದೇನು ಸರಿ. ಆದರೆ, ವಾರ್ಡ್‌ಗಳ ಹೆಸರು ಬದಲಿಸುವುದು ಏತಕ್ಕಾಗಿ? ಹಾಗಾಗಿ, ವಾರ್ಡ್‌ಗಳ ಹೆಸರು ಬದಲಾವಣೆಗೆ ಅನುಸರಿಸುವ ಮಾನದಂಡಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿದ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು.