ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ರಾಜ್ಯದ ವಿವಿಧೆಡೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಪರವಾಗಿ ಮೇಲ್ಮನವಿ ಸಲ್ಲಿಸಿರುವುದು ಮತ್ತು ಅವರಿಗೆ ಉಚಿತ ಕಾನೂನು ನೆರವು ನೀಡಿರುವ ವಿಚಾರಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೊಂದಿಗೆ ಸಮನ್ವಯ ಸಾಧಿಸಿ, ಸಮಗ್ರ ವರದಿ ಸಲ್ಲಿಸುವಂತೆ ಮೂರು ಪೀಠಗಳ ಹೈಕೋರ್ಟ್‌ನ ಕಾನೂನು ಸೇವಾ ಸಮಿತಿಗಳಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ನಿರ್ದೇಶಿಸಿದೆ.
ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳು ಎಂದು ಜೀವಾವಧಿ ಶಿಕ್ಷೆ ವಿಧಿಸಿ ಧಾರವಾಡದ ಪ್ರಧಾನ ಜಿಲ್ಲಾ ನ್ಯಾಯಾಲಯವು 2019ರ ಜೂನ್‌ನಲ್ಲಿ ತೀರ್ಪು ನೀಡಿತ್ತು. ಇದಾದ ಸುಮಾರು ಎರಡು ವರ್ಷಗಳ ಬಳಿಕ ಎರಡನೇ ಆರೋಪಿ ಶಂಕರಪ್ಪ ಪರವಾಗಿ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಕಾಲತ್ತು ಹಾಕಿದ್ದ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿದಾರರ ಪರವಾಗಿ ಅಮಿಕಸ್ ಕ್ಯೂರಿಯನ್ನು ನೇಮಿಸಿತ್ತು. ಇದೇ ಪ್ರಕರಣದಲ್ಲಿ ಮೊದಲ ಅಪರಾಧಿಯ ಪರವಾಗಿ ಮೇಲ್ಮನವಿ ಸಲ್ಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಜಿ ಬಸವರಾಜ ಅವರ ನೇತೃತ್ವದ ಪೀಠವು ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.
ಹಲವು ರೀತಿಯ ಅಪರಾಧ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾದವರಿಗೆ ಉಚಿತ ಕಾನೂನು ಸೇವೆ ಒದಗಿಸಲು ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ಜಾರಿಗೊಳಿಸಲಾಗಿದೆ. ಈ ಕಾಯಿದೆಯ ಸೆಕ್ಷನ್ 12ರ ಅಡಿ ಪ್ರಕರಣದಲ್ಲಿ ತಮ್ಮನ್ನು ರಕ್ಷಣೆ (ಡಿಫೆಂಡ್) ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಸೇವೆ ಪಡೆಯಲು ಅರ್ಹರಾಗಿರುತ್ತಾರೆ. ಸೆಕ್ಷನ್ 12ರ ಅನ್ವಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕರ್ತವ್ಯ ನಿರ್ವಹಿಸಬೇಕಿದೆ. ಹಾಲಿ ಪ್ರಕರಣದಲ್ಲಿ ಮೊದಲ ಆರೋಪಿಯು ಅಪರಾಧಿ ಎಂದು ಸಾಬೀತಾಗಿದ್ದು, ಕಸ್ಟಡಿಯಲ್ಲಿರುವ ಆ ವ್ಯಕ್ತಿಗೆ ಮೇಲ್ಮನವಿ ಸಲ್ಲಿಸಲು ಕಾನೂನು ಸೇವೆ ಒದಗಿಸಲಾಗಿಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಮೇಲ್ಮನವಿ ಸಲ್ಲಿಸುವ ಹಕ್ಕು ಶಾಸನಬದ್ಧ ಹಕ್ಕಾಗಿದ್ದು, ಕ್ರಿಮಿನಲ್ ಪ್ರಕರಣಗಳಲ್ಲಿ ಇದಕ್ಕೆ ಚಾಲನೆ ನೀಡಬೇಕಿದೆ. ಅಪರಾಧಿಗಳು ತಮ್ಮ ಪರವಾಗಿ ಸ್ವಂತ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅಂಥವರಿಗೆ ಉಚಿತ ಕಾನೂನು ನೆರವು ಕಲ್ಪಿಸುವ ಮೂಲಕ ಮೇಲ್ಮನವಿ ಸಲ್ಲಿಸಲು ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಮೊದಲ ಅಪರಾಧಿಯಾಗಿರುವ ಅಲ್ತಾಫ್‌ಗೆ ಉಚಿತ ಕಾನೂನು ನೆರವು ಕಲ್ಪಿಸಲಾಗಿದೆಯೇ, ಅವರ ಪರವಾಗಿ ಏಕೆ ಮೇಲ್ಮನವಿ ಸಲ್ಲಿಸಿಲ್ಲ ಎಂಬುದನ್ನು ತಿಳಿದು ಧಾರವಾಡದ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯು ವರದಿ ಸಲ್ಲಿಸಬೇಕು.
ಯಾವೆಲ್ಲಾ ಪ್ರಕರಣಗಳಲ್ಲಿ ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಲಾಗಿದೆ. ಆ ಪ್ರಕರಣದಲ್ಲಿ ಎಷ್ಟು ಮಂದಿ ಆರೋಪಿಗಳಿದ್ದಾರೆ. ಪ್ರತಿ ಪ್ರಕರಣದಲ್ಲಿ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದಾರೆಯೇ, ಕ್ರಿಮಿನಲ್ ಮೇಲ್ಮನವಿ ಸಂಖ್ಯೆ, ಅಂಥ ಮೇಲ್ಮನವಿಗಳನ್ನು ಖಾಸಗಿ ವಕೀಲರು ಸಲ್ಲಿಸಿದ್ದಾರೆಯೇ ಅಥವಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಿರುವ ವಕೀಲರು ಸಲ್ಲಿಸಿದ್ದಾರೆಯೇ, ಒಂದೊಮ್ಮೆ ಮೇಲ್ಮನವಿ ಸಲ್ಲಿಸದಿದ್ದರೆ, ಏತಕ್ಕಾಗಿ ಮೇಲ್ಮನವಿ ಸಲ್ಲಿಸಲಾಗಿಲ್ಲ. ಉಚಿತ ಕಾನೂನು ಸೇವೆ ದೊರಕಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಧಾರವಾಡ ಪೀಠದ ವ್ಯಾಪ್ತಿಗೆ ಬರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಂದ ಪಡೆಯುವಂತೆ ಧಾರವಾಡದ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ.
ಅಪರಾಧಿ ಎಂದು ಸಾಬೀತಾಗಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಸ್ಟಡಿಯಲ್ಲಿರುವ ವ್ಯಕ್ತಿಗೆ ಉಚಿತ ಕಾನೂನು ನೆರವು ನೀಡದಿರುವುದು, ಇದಕ್ಕೆ ಕಾರಣ ಮತ್ತು ಕಸ್ಟಡಿಯಲ್ಲಿರುವ ಅಪರಾಧಿಗಳ ವಿಚಾರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕೈಗೊಳ್ಳಲು ಉದ್ದೇಶಿಸಿರುವ ಕ್ರಮದ ಮಾಹಿತಿಯನ್ನು ಧಾರವಾಡ ಪೀಠದ ವ್ಯಾಪ್ತಿಗೆ ಬರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಿ, ಮಾಹಿತಿ ಸಂಗ್ರಹಿಸುವಂತೆ ಧಾರವಾಡದ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಗೆ ನಿರ್ದೇಶಿಸಲಾಗಿದೆ.
ಮೇಲಿನ ನಿರ್ದೇಶನಗಳು ಈ ನ್ಯಾಯಾಲಯದ ಇತರೆ ಪೀಠಗಳಿಗೆ ಅನ್ವಯಿಸಲಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಪ್ರಧಾನ ಪೀಠ ಮತ್ತು ಕಲಬುರ್ಗಿ ಪೀಠದ ಹೈಕೋರ್ಟ್ ಕಾನೂನು ಸೇವಾ ಸಮಿತಿಗಳ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಬರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳೊಂದಿಗೆ ಸಮನ್ವಯ ಸಾಧಿಸಿ ಮೇಲಿನ ನಿರ್ದೇಶನಗಳಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಬೇಕು.
ಅಕ್ಟೋಬರ್ 27ರ ಒಳಗೆ ಮೇಲೆ ನಿರ್ದೇಶಿಸಲಾಗಿರುವ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ಎಲ್ಲಾ ಜಿಲ್ಲೆಗಳ ಸದಸ್ಯ ಕಾರ್ಯದರ್ಶಿ ಅವರಿಗೆ ಅನುಪಾಲಿಸಲು ಇದನ್ನು ಕಳುಹಿಸಿಕೊಡಬೇಕು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರೂ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಆದೇಶ ಪಾಲಿಸುವ ನಿಟ್ಟಿನಲ್ಲಿ ಈ ಆದೇಶವನ್ನು ರಿಜಿಸ್ಟ್ರಾರ್ ಅವರು ಕಳುಹಿಸಿಕೊಡಬೇಕು.
ತಪ್ಪಿತಸ್ಥರು ಎಂದು ಆದೇಶ ಮಾಡಿರುವ ಎಲ್ಲಾ ಪ್ರಕರಣಗಳು, ಎಷ್ಟು ಮಂದಿಯನ್ನು ಅಪರಾಧಿಗಳು ಎಂದು ಘೋಷಿಸಲಾಗಿದೆ ಮತ್ತು ಅದರ ಬಗ್ಗೆ ವಿವರಣೆ, ಅಂಥ ಎಲ್ಲಾ ಪ್ರಕರಣಗಳಲ್ಲಿನ ಅಪರಾಧಿಗಳ ಪರವಾಗಿ ಮೇಲ್ಮನವಿ ಸಲ್ಲಿಸಲಾಗಿದೆಯೇ, ಮೇಲ್ಮನವಿಯ ಸಂಖ್ಯೆ ಅಥವಾ ಪ್ರತಿ ಅಪರಾಧಿಯ ಪರವಾಗಿ ಸಲ್ಲಿಸಲಾಗಿರುವ ಮೇಲ್ಮನವಿಯ ಸಂಖ್ಯೆ, ಮೇಲ್ಮನವಿಯನ್ನು ಖಾಸಗಿ ವಕೀಲರು ಸಲ್ಲಿಸಿದ್ದಾರೆಯೇ ಅಥವಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಿರುವ ವಕೀಲರು ಸಲ್ಲಿಸಿದ್ದಾರೆಯೇ, ಮೇಲ್ಮನವಿ ಸಲ್ಲಿಸದಿದ್ದರೆ ಅದಕ್ಕೆ ಕಾರಣಗಳು, ಉಚಿತ ಕಾನೂನು ನೆರವು ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ನಿಗಾ ಇಡಲು ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಮತ್ತು ಸೆಂಟ್ರಲ್ ಪ್ರೋಸೆಸ್ ಕೋಆರ್ಡಿನೇಟರ್ (ಸಿಪಿಸಿ) ಅಗತ್ಯ ಸಾಫ್ಟ್‌ವೇರ್ ರೂಪಿಸಬೇಕು. ಮೇಲಿನ ವಿಚಾರಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಹದಿನೈದು ದಿನಗಳಿಗೆ ಒಮ್ಮೆ ಕೆಎಸ್‌ಎಲ್‌ಎಸ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಮತ್ತು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್‌ನ ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿಗೆ ಇಮೇಲ್ ರವಾನೆಯಾಗಬೇಕು.
ಇದಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿಯನ್ನು ಅಕ್ಟೋಬರ್ 27ರ ಒಳಗೆ ಕಂಪ್ಯೂಟರ್ ಮತ್ತಿ ಸಿಪಿಸಿ ರಿಜಿಸ್ಟ್ರಾರ್ ಅವರು ಸಲ್ಲಿಸಬೇಕು ಎಂದು ಪೀಠವು ಆದೇಶ ಮಾಡಿದೆ.