ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೇಕಲ್ ಗ್ರಾಮದ ಗುಂಡೇನಹಳ್ಳಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅರಣ್ಯ ನಾಶ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ಸಂಬಂಧ ಲೋಕಾಯುಕ್ತ ತನಿಖೆಗೆ ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಕರ್ನಾಟಕ ಲೋಕಾಯುಕ್ತ ಕಾಯಿದೆಯ ಸೆಕ್ಷನ್ 9ರ ಅಡಿ ಸಂಬಂಧಪಟ್ಟವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಆದೇಶಿಸಿದ್ದು, ಸೆಕ್ಷನ್ 12ರ ಅಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿದೆ.
ಕಲ್ಲು ಗಣಿಗಾರಿಕೆ/ಕ್ವಾರಿ ಚಟುವಟಿಕೆಯಿಂದಾಗಿ ಅರಣ್ಯ ಇಲಾಖೆಯು ಸರ್ಕಾರದ ಬೊಕ್ಕಸದಿಂದ ವೆಚ್ಚ ಮಾಡಿ ನೆಟ್ಟು ಬೆಳೆಸಿದ್ದ ಸುಮಾರು 9,500 ಗಿಡ-ಮರಗಳನ್ನು ನಾಶಪಡಿಸಲಾಗಿದೆ. ಈ ಅರಣ್ಯವನ್ನು ಅಭಿವೃದ್ಧಿ ಪಡಿಸಿ ಅರಣ್ಯ ಇಲಾಖೆಯು ಬನಹಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿತ್ತು ಎಂದು ರವೀಂದ್ರ ಮತ್ತಿತರ ನಾಲ್ವರು ಅರ್ಜಿದಾರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಪೀಠ ನಡೆಸಿತು. ಇಷ್ಟು ಮಾತ್ರವಲ್ಲದೇ ರಾಜ್ಯ ಸರ್ಕಾರವು ಕಾನೂನುಬಾಹಿರವಾಗಿ ಗಣಿಗಾರಿಕೆ/ಕ್ವಾರಿ ನಡೆಸುತ್ತಿರುವವರಿಂದ 106 ಕೋಟಿ ರೂಪಾಯಿ ದಂಡ ವಸೂಲಿ ಮಾಡಲು ವಿಫಲವಾಗಿದೆ ಎಂದು ಅರ್ಜಿದಾರರ ಪರ ವಕೀಲ ದಳವಾಯಿ ವೆಂಕಟೇಶ್ ನ್ಯಾಯಾಲಯದ ಗಮನಸೆಳೆದರು.
ವಿಚಾರಣೆಯ ಸಂದರ್ಭದಲ್ಲಿ ಪಂಚಾಯಿತಿ ಪರ ವಕೀಲ ನಾರಾಯಣ ರೆಡ್ಡಿ ಅವರು ಅರಣ್ಯೀಕರಿಸಿರುವುದು ಮತ್ತು ಅದನ್ನು ಒಪ್ಪಂದದ ಮೂಲಕ ಪಂಚಾಯಿತಿಗೆ ವರ್ಗಾಯಿಸಿರುವುದನ್ನು ನಿರಾಕರಿಸಿದರು. ಆದರೆ, 1999ರಲ್ಲಿ ಅರಣ್ಯ ಅಭಿವೃದ್ಧಿಪಡಿಸಿ ಪಂಚಾಯಿತಿಗೆ ವರ್ಗಾಯಿಸಲಾಗಿದೆ ಎಂಬುದನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದೆ. ಹಿಂದೆ ನ್ಯಾಯಾಲಯ ತನಿಖೆಗೆ ಆದೇಶಿಸಿದ್ದು, ಆಗ ಸಲ್ಲಿಸಿದ ವರದಿಯಲ್ಲಿ ಅರಣ್ಯ ಅಭಿವೃದ್ಧಿಪಡಿಸಿದ್ದು ಮತ್ತು ಅದನ್ನು ಪಂಚಾಯಿತಿಗೆ ವರ್ಗಾಯಿಸಿದ್ದ ಎರಡೂ ವಿಚಾರಗಳನ್ನು ಖಾತರಿಪಡಿಸಿದೆ.
“ವಸ್ತುಸ್ಥಿತಿ ಅಧ್ಯಯನ ಮಾಡುವಂತೆ ಆದೇಶ ಮಾಡಿದ್ದ ಈ ನ್ಯಾಯಾಲಯದ ಆದೇಶವು ಅರಣ್ಯೀಕರಣ ಮಾಡಲಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ. ಕಾನೂನುಬಾಹಿರ ಗಣಿಕಾರಿಕೆಯಿಂದ ಅರಣ್ಯ ಮಾಯವಾಗಿದೆ. ಗ್ರಾಮ ಪಂಚಾಯಿತಿಯ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಲೋಕಾಯುಕ್ತ ಕಾಯಿದೆಯ ನಿಬಂಧನೆಗಳ ಅಡಿ ಪ್ರಾಥಮಿಕ ತನಿಖೆ ನಡೆಸಿ, ಆನಂತರ ಕಾನೂನಿನ ಪ್ರಕಾರ ಮುಂದುವರಿಯುವುದು ಸೂಕ್ತ ಎಂಬುದು ಈ ನ್ಯಾಯಾಲಯ ಅಚಲ ನಿಲುವಾಗಿದೆ” ಎಂದು ಪೀಠ ಹೇಳಿದೆ.
ಈ ಮಧ್ಯೆ, ರಾಜ್ಯ ಸರ್ಕಾರದ ಪರ ವಕೀಲರು “37 ಎಕರೆ ಭೂಮಿಯನ್ನು ಅರಣ್ಯೀಕರಣಿಸುವ ಉದ್ದೇಶದಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ” ಎಂದು ಹೇಳಿದರು. ಆಗ ಪೀಠವು ಆರು ತಿಂಗಳಲ್ಲಿ ಗಿಡ ನೆಟ್ಟು ಮರ-ಗಿಡಗಳಿಗೆ ರಕ್ಷಣ ಒದಗಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ (ಡಿಸಿಎಫ್) ಆದೇಶಿಸಿತು. ಡಿಸಿಎಫ್ ವೆಂಕಟೇಶ್ ಅವರನ್ನು ಸದ್ಯದ ಹುದ್ದೆಯಿಂದ ವರ್ಗಾಯಿಸದಂತೆ ರಾಜ್ಯ ಸರ್ಕಾರಕ್ಕೆ ಪೀಠ ಆದೇಶ ಮಾಡಿತು.