ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್) ಸುತ್ತಮುತ್ತಲಿನ 28 ಕಲ್ಲುಗಣಿಗಾರಿಕೆ ಘಟಕಗಳ ಪರವಾನಗಿ ರದ್ದುಗೊಳಿಸಿ ಮಂಡ್ಯ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾ ಮಾಡಿದೆ. ಆದರೆ, ಟ್ರಯಲ್ ಸ್ಫೋಟ ನಡೆಸುವವರೆಗೆ ಉದ್ಯಮವನ್ನು ಪುನಾರಂಭಿಸಲಾಗದು. ಈ ಸಂಬಂಧದ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ನಡೆಸಲಾಗುವುದು ಎಂದು ಪೀಠ ಹೇಳಿದೆ.
ಮಂಡ್ಯ ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಲು ಗಣಿಗಾರಿಕೆ ಘಟಕ ಸೇರಿದಂತೆ 28 ಕಲ್ಲು ಗಣಿಗಾರಿಕೆ ಕಂಪೆನಿಗಳ ಪರವಾನಗಿ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಗಣಿಗಾರಿಕಾ ಘಟಕಗಳ ಮಾಲೀಕರು ಪ್ರತ್ಯೇಕವಾಗಿ ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.
“ಮಂಡ್ಯ ಜಿಲ್ಲಾಧಿಕಾರಿ ಕಲ್ಲು ಗಣಿಗಾರಿಕೆ ಘಟಕಗಳಿಗೆ ನೀಡಲಾಗಿದ್ದ ಪರವಾನಗಿಯನ್ನು ರದ್ದಪಡಿಸುವ ಮುನ್ನ ಕಲ್ಲು ಗಣಿಗಾರಿಕೆಯ ಘಟಕಗಳ ಮಾಲೀಕರ ಅಹವಾಲು ಆಲಿಸಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಯ ಆದೇಶ ರದ್ದುಪಡಿಸಲಾಗುತ್ತಿದೆ. ಆದರೆ, ಮತ್ತೆ ಕಲ್ಲು ಗಣಿಗಾರಿಕೆ ಘಟಕಗಳ ಮಾಲೀಕರಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಬೇಕು. ಘಟಕಗಳ ಮಾಲೀಕರ ಅಹವಾಲು ಆಲಿಸಿದ ನಂತರ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳಬಹುದು” ಎಂದು ಆದೇಶದಲ್ಲಿ ಪೀಠ ತಿಳಿಸಿದೆ.
“ಜಿಲ್ಲಾಧಿಕಾರಿಯ ಗಮನಕ್ಕೆ ತರದೇ ಹಿರಿಯ ಭೂವಿಜ್ಞಾನಿಯು ಪರವಾನಗಿ ನೀಡಿದ್ದಾರೆ ಎಂದು ಕಾರಣ ನೀಡಿ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿಯೇ ಪರವಾನಗಿ ನೀಡಿದ್ದರು” ಎಂದು ಅರ್ಜಿದಾರರು ತಕರಾರು ಎತ್ತಿದ್ದರು.
ಅರ್ಜಿದಾರರ ಪರ ವಕೀಲ ಎಲ್ ಚಿದಾನಂದಯ್ಯ ಅವರು “ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆ ನೀಡಲಾಗಿದ್ದ ಪರವಾನಗಿ ರದ್ದುಪಡಿಸಿ ಜಿಲ್ಲಾ ಕಲ್ಲು ಗಣಿಗಾರಿಕೆ ನಿಯಂತ್ರಣ ಮತ್ತು ಪರವಾನಗಿ ಪ್ರಾಧಿಕಾರದ ಮುಖ್ಯಸ್ಥರೂ ಆಗಿರುವ ಮಂಡ್ಯ ಜಿಲ್ಲಾಧಿಕಾರಿ 2021ರ ಜುಲೈ 31ರಂದು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಕಲ್ಲು ಗಣಿಗಾರಿಕೆ ನಿಯಂತ್ರಣ ಕಾಯಿದೆಯ ಸೆಕ್ಷನ್ 10 ಅನ್ನು ಜಿಲ್ಲಾಧಿಕಾರಿ ತಮ್ಮ ಆದೇಶದ ಮೂಲಕ ಉಲ್ಲಂಘಿಸಿದ್ದಾರೆ. ಸೆಕ್ಷನ್ 10ರ ಪ್ರಕಾರ ಪರವಾನಗಿ ರದ್ದು ಮಾಡುವಾಗ ನೋಟಿಸ್ ಜಾರಿ ಮಾಡಿ, ಪ್ರತಿವಾದಿಗಳ ಅಹವಾಲು ಆಲಿಸಬೇಕು. ಆದರೆ, ಹಿರಿಯ ಭೂವಿಜ್ಞಾನಿ ನೋಟಿಸ್ ನೀಡಿದ್ದು, ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಇಲ್ಲಿ ನೈಸರ್ಗಿಕ ನ್ಯಾಯದಾನದ ನಿಯಮವನ್ನು ಉಲ್ಲಂಘಿಸಲಾಗಿದೆ” ಎಂದು ವಾದಿಸಿದ್ದರು. ಈ ವಾದವನ್ನು ಪೀಠ ಪುರಸ್ಕರಿಸಿದೆ.
ಇತರೆ ಅರ್ಜಿದಾರರನ್ನು ವಕೀಲರಾದ ರವೀಂದ್ರ ಗಜಾನನ ಕೊಳ್ಳೆ, ವಿ ಜಿ ಭಾನುಪ್ರಕಾಶ್ ಪ್ರತಿನಿಧಿಸಿದ್ದರು.