

ಬೇರೊಂದು ಪ್ರಕರಣದಲ್ಲಿ ಸುಳ್ಳು ಸಾಕ್ಷಿ ನುಡಿಯುವಂತೆ ಬೆದರಿಕೆ ಹಾಕಿದ ಸಂಬಂಧಿತ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಈಚೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದತಿ ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲ ಎಂ ಆರ್ ಬಾಲಕೃಷ್ಣ ಅವರು “ಹಾಲಿ ಪ್ರಕರಣದಲ್ಲಿ ತಿಮರೋಡಿ ಅವರು ಯಾವುದೇ ಪಾತ್ರವಿಲ್ಲ. ಕಿರುಕುಳ ನೀಡುವ ಉದ್ದೇಶದಿಂದ ಹಾಲಿ ಪ್ರಕರಣ ದಾಖಲಿಸಲಾಗಿದೆ” ಎಂದಿದ್ದರು.
ದೂರುದಾರರ ಪರ ವಕೀಲರು “ತಿಮರೋಡಿ ಬೆಂಬಲಿಗ ಸತೀಶ್ ಕುಮಾರ್ ರೈ ಮದುಮಲೆ ಅವರು ಬೆದರಿಕೆ ಹಾಕಿರುವ ಕರೆಯ ಲಿಖಿತ ರೂಪವಿದ್ದು, ಅದರಲ್ಲಿ ಈ ಹಿಂದೆ ದೂರು ದಾಖಲಿಸಿರುವುದಕ್ಕೆ ಬೆದರಿಕೆ ಹಾಕಿದ್ದಾರೆ. ಇದನ್ನು ವಾರದಲ್ಲಿ ನ್ಯಾಯಾಲಯ ಮುಂದೆ ಹಾಜರುಪಡಿಸಲಾಗುವುದು” ಎಂದರು.
ಇದನ್ನು ಆಲಿಸಿದ ಪೀಠವು ಕರೆಯ ಲಿಖಿತ ರೂಪವನ್ನು ಸಲ್ಲಿಸಲು ದೂರುದಾರರಿಗೆ ಆದೇಶಿಸಿದ ನ್ಯಾಯಾಲಯವು ಮುಂದಿನ ವಿಚಾರಣೆವರೆಗೆ ತಿಮರೋಡಿ ವಿರುದ್ಧದ ಬೆದರಿಕೆ ಪ್ರಕರಣಕ್ಕೆ ತಡೆ ನೀಡಿತು. ಅಲ್ಲದೇ, ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಮಹೇಶ್ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಫೋನ್‌ನಿಂದ ಕರೆ ಮಾಡಿ ಸತೀಶ್ ಕುಮಾರ್ ರೈ ಎಂಬವರು ಬೆದರಿಸಿದ್ದಾರೆ ಎಂದು ಪುತ್ತೂರಿನ ಒಲಮೊಗರುವಿನ ಸುಂದರ ರೈ ಮಂದಾರ ದೂರು ನೀಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟದಾಗಿ ಮಾತನಾಡಿ, ಅಶ್ಲೀಲವಾಗಿ ಯಕ್ಷಗಾನದ ಹಾಡು ರಚಿಸಿ ಪ್ರಸಾರ ಮಾಡಲಾಗಿದೆ. ಅತ್ಯಂತ ಕೀಳು ಅಭಿರುಚಿಯಿಂದ ಕೂಡಿದ ಪದಗಳನ್ನು ಬಳಕೆ ಮಾಡಿ ತಮಗೆ ಬೆದರಿಕೆ ಹಾಕಲಾಗಿದೆ ಎಂದು ಸುಂದರ ರೈ ದೂರಿನಲ್ಲಿ ತಿಳಿಸಿದ್ದರು. ಇದನ್ನು ಆಧರಿಸಿ ಪುತ್ತೂರಿನ ಗ್ರಾಮಾಂತರ ಪೊಲೀಸರು ಬಿಎನ್‌ಎಸ್ ಸೆಕ್ಷನ್‌ಗಳಾದ 351(2), 232 ಅಡಿ ಮಹೇಶ್ ತಿಮರೋಡಿ, ಸತೀಶ್ ಕುಮಾರ್ ರೈ, ಯೂಟ್ಯೂಬ್ ಚಾನಲ್ ಕುಡ್ಲೆ ರ್ಯಾಂಪೇಜ ಬಜ್, ಪ್ರಸನ್ನ ರವಿ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.