
ಕಾಲ್ತುಳಿತ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ, ನೋಟಿಸ್ ಜಾರಿಗೊಳಿಸಿ ರಿಜಿಸ್ಟ್ರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಕಾಲ್ತುಳಿತ ಪ್ರಕರಣದ ಸಂಬಂಧ ದಾಖಲಿಸಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ತನಿಖೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಸ್ತುಸ್ಥಿತಿ ವರದಿಯನ್ನು ಪರಿಶೀಲಿಸಿದ ಪೀಠವು ಕೆಎಸ್‌ಸಿಎ, ಡಿಎನ್‌ಎ ಮತ್ತು ಆರ್‌ಸಿಬಿಯನ್ನು ಪ್ರತಿವಾದಿಯನ್ನಾಗಿಸಿ, ನೋಟಿಸ್ ಜಾರಿ ಮಾಡಲು ರಿಜಿಸ್ಟ್ರಿಗೆ ನಿರ್ದೇಶಿಸಿತು. ಅಲ್ಲದೇ, ಸೂಕ್ತ ಸಂದರ್ಭದಲ್ಲಿ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯನ್ನು ನೇಮಕ ಮಾಡಲಾಗುವುದು ಎಂದಿತು.
ಇದಕ್ಕೂ ಮುನ್ನ, ಶಶಿಕಿರಣ್ ಶೆಟ್ಟಿ ಅವರು “ಈಗ ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಯಾವುದರಿಂದಲೂ ತಪ್ಪಿಸಿಕೊಳ್ಳುವುದಿಲ್ಲ. ಮ್ಯಾಜಿಸ್ಟೀರಿಯಲ್ ತನಿಖಾ ವರದಿ ವಾರದಲ್ಲಿ ಬರಲಿದೆ. ೨೫ ದಿನಗಳಲ್ಲಿ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರ ನೇತೃತ್ವದ ವಿಚಾರಣಾ ಆಯೋಗದ ವರದಿ ಬರಲಿದೆ. ಕೆಲವು ಮಾಹಿತಿ ನೀಡಿದ್ದೇವೆ. ಅವುಗಳು ಮಾಧ್ಯಮದಲ್ಲಿ ಪ್ರಕಟವಾಗಿ ಪೂರ್ವಾಗ್ರಹ ಉಂಟಾಗುವುದು ಬೇಕಿಲ್ಲ” ಎಂದರು.
ಸಂತ್ರಸ್ತರೊಬ್ಬರ ಪರಿಹಾರ ಹೆಚ್ಚಳ ಕೋರಿ ಮಧ್ಯಪ್ರವೇಶಿಕೆ ಕೋರಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ನ್ಯಾಯಾಲಯದ ಮುಂದೆ ಸರ್ಕಾರ ಏಕೆ ಹಿಂಜರಿಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಈ ಬೆಕ್ಕು ಮತ್ತು ಇಲಿಯ ಆಟ ಸರ್ಕಾರಕ್ಕೆ ಸಹಾಯ ಮಾಡುವುದಿಲ್ಲ. ವಾದಕ್ಕೆ ಹೇಳುವುದಾದರೆ ಪೀಠದ ಮುಂದೆ ಸರ್ಕಾರ ತಪ್ಪು ಹೇಳಿಕೆ ನೀಡಿದರೆ ಅದು ನಮಗೆ ತಿಳಿಯುವುದಿಲ್ಲ. ಈ ಕಾರಣಕ್ಕಾಗಿ ಮುಚ್ಚಿದ ಲಕೋಟೆಯ ವರದಿಯನ್ನು ಬಹಿರಂಗಪಡಿಸಬೇಕು” ಎಂದರು.
ವಕೀಲರೊಬ್ಬರು “ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸುವ ವರದಿಯನ್ನು ಬಹಿರಂಗಪಡಿಸಬೇಕು. ಸಾರ್ವಜನಿಕ ಹಿತಾಸಕ್ತಿ ಅಡಗಿರುವುದರಿಂದ ಸಂಪೂರ್ಣವಾದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಆದ್ಯತೆ ನೀಡಬೇಕಿದೆ. ಹೀಗಾಗಿ, ವರದಿಯನ್ನು ಬಹಿರಂಗಪಡಿಸಬೇಕು” ಎಂದರು.
ವಕೀಲ ಜಿ ಆರ್ ಮೋಹನ್ ಅವರು “ಮೂರು ರೀತಿಯ ತನಿಖೆಗಳು ನಡೆಯುತ್ತಿವೆ. ಆದರೆ, ಒಂದೇ ಒಂದು ವರದಿಯೂ ನ್ಯಾಯಾಲಯ ಮುಂದೆ ಬಂದಿಲ್ಲ. ದುರ್ಘಟನೆಯ ದಿನ ಎಷ್ಟು ಮುಂದೆ ಕ್ರೀಡಾಂಗಣದ ಮುಂದೆ ಇದ್ದರು ಎಂಬ ಮಾಹಿತಿ ಇಲ್ಲ. ಸಂಪೂರ್ಣವಾಗಿ ಅಂದು ಗುಪ್ತದಳ ವಿಫಲವಾಗಿತ್ತು” ಎಂದರು.
ಸಂತ್ರಸ್ತರೊಬ್ಬರಿಗೆ ಪರಿಹಾರ ಹೆಚ್ಚಳಕ್ಕೆ ಸಂಬಂಧಿಸಿದ ಮಧ್ಯಪ್ರವೇಶಿಕ ಅರ್ಜಿಯನ್ನು ಅಡ್ವೊಕೇಟ್ ಜನರಲ್‌ಗೆ ನೀಡಲು ಸೂಚಿಸಿದ ಪೀಠವು ಅದಕ್ಕೆ ಪ್ರತಿಕ್ರಿಯಿಸಲು ಸೂಚಿಸಿತು.
ಇನ್ನು, ಆರ್‌ಸಿಬಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಕೆ ನಂದಕುಮಾರ್ ಅವರು “ಕಾಲ್ತುಳಿತ ಪ್ರಕರಣದ ಮಾರನೇಯ ದಿನಕ್ಕೆ ಸಂತ್ರಸ್ತರಿಗೆ ಪರಿಹಾರ ಘೋಷಣ ಮಾಡಲಾಗಿದೆ” ಎಂದರು.
ಎಲ್ಲ ಅಂಶಗಳನ್ನು ಆಕ್ಷೇಪಣೆಯ ಮೂಲಕ ಸಲ್ಲಿಸಬೇಕು ಎಂದು ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿತು.