[ಕಾಲ್ತುಳಿತ ಪ್ರಕರಣ] ವಿಚಾರಣಾ ಆಯೋಗಗಳಲ್ಲಿ ಭಿನ್ನತೆ ಕಂಡರೆ ಸುಮ್ಮನೆ ಬಿಡಲ್ಲ: ಸರ್ಕಾರಕ್ಕೆ ಹೈಕೋರ್ಟ್‌ ಎಚ್ಚರಿಕೆ

ವಿಜಯೋತ್ಸವದ ಹಿನ್ನೆಲೆಯಲ್ಲಿ ನಡೆದಿರುವ ದುರಂತಕ್ಕೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರ/ ಸಂವಹನಗಳನ್ನು (ಆಫ್‌ಲೈನ್‌ ಮತ್ತು ಆನ್‌ಲೈನ್‌, ವಾಟ್ಸಾಪ್‌ ಸಂದೇಶವೂ ಸೇರಿ) ಮುಖ್ಯ ಕಾರ್ಯದರ್ಶಿ ಕಸ್ಟಡಿಗೆ ನೀಡುವಂತೆ ಆದೇಶಿಸಿರುವ ಹೈಕೋರ್ಟ್‌.
[ಕಾಲ್ತುಳಿತ ಪ್ರಕರಣ] ವಿಚಾರಣಾ ಆಯೋಗಗಳಲ್ಲಿ ಭಿನ್ನತೆ ಕಂಡರೆ ಸುಮ್ಮನೆ ಬಿಡಲ್ಲ: ಸರ್ಕಾರಕ್ಕೆ ಹೈಕೋರ್ಟ್‌ ಎಚ್ಚರಿಕೆ
Published on

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತನಿಖೆಗಳನ್ನು ಏಕೆ ನಡೆಸಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಎರಡು ವಿಚಾರಣಾ ಆಯೋಗಗಳಲ್ಲಿ ಭಿನ್ನತೆ ಪತ್ತೆಯಾದರೆ ರಾಜ್ಯ ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುರುವಾರ ಎಚ್ಚರಿಸಿರುವ ಕರ್ನಾಟಕ ಹೈಕೋರ್ಟ್‌ ವಿಚಾರಣಾ ಆಯೋಗದ ತನಿಖೆ ಆದರೂ ಅದು ನ್ಯಾಯಾಲಯಕ್ಕೆ ಅನ್ವಯಿಸಲ್ಲ ಎಂದು ಸ್ಪಷ್ಟಪಡಿಸಿದೆ.

ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಜಯೋತ್ಸವದ ಹಿನ್ನೆಲೆಯಲ್ಲಿ ನಡೆದಿರುವ ದುರಂತಕ್ಕೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರ/ ಸಂವಹನಗಳನ್ನು (ಆಫ್‌ಲೈನ್‌ ಮತ್ತು ಆನ್‌ಲೈನ್‌, ವಾಟ್ಸಾಪ್‌ ಸಂದೇಶವೂ ಸೇರಿ) ಮುಖ್ಯ ಕಾರ್ಯದರ್ಶಿ ಕಸ್ಟಡಿಗೆ ನೀಡಬೇಕು. ಮ್ಯಾಜಿಸ್ಟ್ರೀರಿಯಲ್ ವಿಚಾರಣೆ ಮತ್ತು ನ್ಯಾಯಾಂಗ ವಿಚಾರಣಾ ಆಯೋಗದ ವಿಚಾರಣಾ ವ್ಯಾಪ್ತಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಹೈಕೋರ್ಟ್ ಕೇಳಿದ್ದ 9 ಪ್ರಶ್ನೆಗಳಿಗೆ ಉತ್ತರ ನೀಡಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಎಲ್ಲಾ ದಾಖಲೆಗಳು ಕನ್ನಡದಲ್ಲಿದ್ದು, ಎರಡು ದಿನಗಳಲ್ಲಿ ಇಂಗ್ಲಿಷ್‌ಗೆ ಅನುವಾದಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಮ್ಯಾಜಿಸ್ಟೀರಿಯಲ್‌ ಮತ್ತು ನಿವೃತ್ತ ನ್ಯಾಯಮೂರ್ತಿ ಮೈಕೆಲ್‌ ಕುನ್ಹಾ ನೇತೃತ್ವದ ವಿಚಾರಣಾ ಆಯೋಗಕ್ಕೆ ವಿಚಾರಣಾ ವ್ಯಾಪ್ತಿ ನಿಗದಿಪಡಿಸಲಾಗಿದೆಯೇ? ಸಾಕಷ್ಟು ಸಂವಹನ ನಡೆದಿರುವುದರಿಂದ ಇದನ್ನು ಕೇಳಲಾಗುತ್ತಿದೆ ಎಂದಿತು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಇಲ್ಲ. ಆದರೆ, ಎಲ್ಲಾ ದಾಖಲೆಗಳನ್ನೂ ಸಲ್ಲಿಸಲಾಗಿದೆ. ನ್ಯಾಯಾಲಯ ಏನು ಸೂಚಿಸುತ್ತದೆ. ಅದಕ್ಕೆ ನಾಳೆಯೊಳಗೆ ಉತ್ತರಿಸಲಾಗುವುದು. ಎರಡು ಆಯೋಗಗಳಿಗೆ ವಿಚಾರಣಾ ವ್ಯಾಪ್ತಿ ಸ್ಪಷ್ಟಪಡಿಸಲಾಗಿದೆ. ಎಲ್ಲಾ ಹೇಳಿಕೆಗಳಿಗೂ ಪೂರಕವಾಗಿ ದಾಖಲೆಗಳನ್ನು ಒದಗಿಸಲಾಗಿದೆ” ಎಂದರು.

ಈ ನಡುವೆ ಪೀಠವು “ಎಲ್ಲಾ ದಾಖಲೆಗಳನ್ನು ಸಂರಕ್ಷಿಸಿಡಲು ರಾಜ್ಯ ಸರ್ಕಾರವು ಯಾರಿಗಾದರೂ ಉಸ್ತುವಾರಿ ನೀಡಿದೆಯೇ? ಸರ್ಕಾರದ ಇಲಾಖೆಗಳು ಆದೇಶದಲ್ಲಿ ತಿದ್ದುಪಡಿ ಮಾಡಬಹುದು. ಹೀಗಾಗಿ, ರಾಜ್ಯ ಸರ್ಕಾರದ ಅತ್ಯುನ್ನತ ಅಧಿಕಾರಿಯಾಗಿರುವ ಮುಖ್ಯ ಕಾರ್ಯದರ್ಶಿ ಉಸ್ತುವಾರಿಗೆ ಎಲ್ಲಾ ದಾಖಲೆಗಳನ್ನು ನೀಡಬೇಕು. ತನಿಖೆ ಏನೇ ಆದರೂ ಅದು ನಮಗೆ ಅನ್ವಯ (ಬೈಂಡಿಂಗ್‌) ಅಲ್ಲ” ಎಂದಿತು.

ಇನ್ನು, ನ್ಯಾಯಾಂಗ ವಿಚಾರಣಾ ಆಯೋಗದ ವರದಿ ಬಂದ ಬಳಿಕ ಮಧ್ಯಪ್ರವೇಶಿಕೆ ಅರ್ಜಿ ಸಲ್ಲಿಕೆ ಮಾಡಿರುವವರ ಪೈಕಿ ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಬಹುದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಾರ್ಗಸೂಚಿಯನ್ನು ಪಾಲಿಸಲಾಗಿದೆಯೇ ಎಂಬುದು ವಾಸ್ತವಿಕ ಅಂಶಗಳನ್ನು ಒಳಗೊಂಡ ಪ್ರಶ್ನೆಯಾಗಿದೆ. ಅವುಗಳನ್ನು ಸಾಬೀತುಪಡಿಸಬೇಕಿದೆ. ಎಲ್ಲವನ್ನೂ ನ್ಯಾಯಾಲಯ ಪರಿಶೀಲಿಸಬಹುದಾಗಿದ್ದು, ಏನನ್ನೂ ಬಚ್ಚಿಡುವುದಿಲ್ಲ. ಭವಿಷ್ಯದಲ್ಲಿ ಇಂಥ ದುರ್ಘಟನೆಯಾಗದಂತೆ ತಡೆಯಬಹುದು ಎಂಬುದರ ವಿಚಾರದಲ್ಲಿ ನಾವು ಪಾರದರ್ಶಕವಾಗಿದ್ದೇವೆ” ಎಂದರು.

ಬೆಂಗಳೂರು ಪೊಲೀಸ್‌ ಆಯುಕ್ತರಾಗಿದ್ದ ಬಿ ದಯಾನಂದ್‌ ಸೇರಿ ಐವರು ಅಧಿಕಾರಿಗಳ ವಾದ ಆಲಿಸದೇ ಅವರನ್ನು ಅಮಾನತು ಮಾಡಲಾಗಿದೆ ಎಂದು ವಕೀಲರೊಬ್ಬರು ವಾದಿಸಲು ಮುಂದಾದರು. ಇದಕ್ಕೆ ನ್ಯಾಯಾಲಯ ಅವಕಾಶ ನೀಡಲಿಲ್ಲ.

ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳನ್ನು 2014ರಿಂದಲೂ ರಾಜ್ಯದಲ್ಲಿ ಪಾಲಿಸಲಾಗುತ್ತಿಲ್ಲ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ್‌ ಕೊಂಡಜ್ಜಿ ಪ್ರತಿನಿಧಿಸಿದ್ದ ವಕೀಲ ಕೆ ದಿವಾಕರ್‌ ಪೀಠದ ಗಮನಸೆಳೆದರು.

ಹಿರಿಯ ವಕೀಲ ಎಂ ಬಿ ನರಗುಂದ್‌ ಅವರು “ಕೋವಿಡ್‌ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಸಾಕಷ್ಟು ಮಂದಿ ಮೃತಪಟ್ಟಿದ್ದರು. ಈ ಘಟನೆಯ‌ ಮೇಲೆ ಹೈಕೋರ್ಟ್‌ ನಿಗಾ ಇಟ್ಟಿತ್ತು. ಈ ಪ್ರಕರಣದಲ್ಲೂ ಹಾಗೇ ಮಾಡಬೇಕು” ಎಂದು ಕೋರಿದರು.

Kannada Bar & Bench
kannada.barandbench.com