ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಅಡಿ ಮೇಲುಸ್ತುವಾರಿಯಲ್ಲಿ ಡಿ.7ಕ್ಕೆ ಕೆಎಸ್‌ಸಿಎ ಚುನಾವಣೆ ನಡೆಸಲು ಹೈಕೋರ್ಟ್‌ ಆದೇಶ

“ಕೆಎಸ್‌ಸಿಎ ಬೈಲಾಗೆ ಯಾರೇ ನೀಡುವ ಯಾವುದೇ ವ್ಯಾಖ್ಯಾನದ ಪ್ರಭಾವಕ್ಕೆ ಒಳಗಾಗದೇ ಹಾಲಿ ಬೈಲಾದ ಪ್ರಕಾರ ಚುನಾವಣಾಧಿಕಾರಿಯು ನ್ಯಾಯಯುತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಬೇಕು” ಎಂದು ಆದೇಶಿಸಿದ ನ್ಯಾಯಾಲಯ.
Justice Subhash Adi & KSCA
Justice Subhash Adi & KSCA
Published on

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಡಿಸೆಂಬರ್‌ 7ರಂದು ಚುನಾವಣೆ ನಡೆಸಲು ನಿರ್ದೇಶಿಸಿರುವ ಹೈಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಉಪಲೋಕಾಯುಕ್ತ ಬಿ ಸುಭಾಷ್‌ ಬಿ. ಅಡಿ ಅವರನ್ನು ಮೇಲ್ವಿಚಾರಕರನ್ನಾಗಿ ನೇಮಿಸಿದೆ.

ಚುನಾವಣಾಧಿಕಾರಿಯು ಕೆಲವೊಂದು ಗೊಂದಲಗಳ ಹಿನ್ನೆಲೆಯಲ್ಲಿ 17.11.2025ರಂದು ಚುನಾವಣೆಯನ್ನು ನವೆಂಬರ್‌ 30ರಿಂದ ಡಿಸೆಂಬರ್‌ 30ರವರೆಗೆ ಮುಂದೂಡಿದ್ದನ್ನು ಪ್ರಶ್ನಿಸಿ ಕೆಎಸ್‌ಸಿಎ ಮತ್ತು ಬಿ ಕೆ ರವಿ ಎಂಬವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Suraj Govindraj
Justice Suraj Govindraj

ಪಕ್ಷಕಾರರ ವಾದ ಆಲಿಸಿದ ನ್ಯಾಯಾಲಯವು “17.11.2025ರಂದು ಚುನಾವಣೆಯನ್ನು ನವೆಂಬರ್‌ 30ರಿಂದ ಡಿಸೆಂಬರ್‌ 30ರವರೆಗೆ ಮುಂದೂಡಿದ್ದ ಚುನಾವಣಾಧಿಕಾರಿಯ ನೋಟಿಸ್‌ ವಜಾಗೊಳಿಸಲಾಗಿದೆ. ಕೆಎಸ್‌ಸಿಎ ಬೈಲಾಗೆ ಯಾರೇ ನೀಡುವ ಯಾವುದೇ ವ್ಯಾಖ್ಯಾನದ ಪ್ರಭಾವಕ್ಕೆ ಒಳಗಾಗದೇ ಹಾಲಿ ಬೈಲಾದ ಪ್ರಕಾರ ಚುನಾವಣಾಧಿಕಾರಿಯು ನ್ಯಾಯಯುತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಡಿಸೆಂಬರ್‌ 7ರಂದು ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯವರೆಗೆ ಮತದಾನವಾಗಬೇಕು. ಆನಂತರ ಫಲಿತಾಂಶ ಪ್ರಕಟಿಸಬೇಕು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಅವರನ್ನು ಚುನಾವಣೆಯ ಉಸ್ತುವಾರಿ ವಹಿಸಲು ಮನವಿ ಮಾಡಲಾಗಿದೆ” ಎಂದು ಆದೇಶಿಸಿತು.

“ಈಗಾಗಲೇ ನಾಮಪತ್ರ ಸ್ವೀಕಾರವಾಗಿದ್ದು, ನಾಮಪತ್ರಗ ಪರಿಶೀಲನೆಯು ನವೆಂಬರ್‌ 24ರಂದು ನಡೆಯಲಿದೆ. ಅಂದು 6 ಗಂಟೆಯೊಳಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕು. ನವೆಂಬರ್‌ 26ರಂದು ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಬೇಕು. ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್‌ 26ಕ್ಕೆ ಪ್ರಕಟಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿತು.

ಅರ್ಜಿದಾರರ ಪರ ಹಿರಿಯ ವಕೀಲರಾದ ಜಯಕುಮಾರ್‌ ಎ. ಪಾಟೀಲ್‌ ಮತ್ತು ಉದಯ್‌ ಹೊಳ್ಳ ಅವರು “ಚುನಾವಣಾಧಿಕಾರಿ 17.11.2025ರಂದು ಹೊರಡಿಸಿರುವ ಪತ್ರದ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿದೂಗಿಸಲು ಚುನಾವಣಾ ವೇಳಾಪಟ್ಟಿಯಲ್ಲಿ ಸ್ಪಲ್ಪ ಬದಲಾವಣೆ ಮಾಡಿ ಚುನಾವಣೆ ನಡೆಸಬೇಕು. ಚುನಾವಣೆ ಪ್ರಕ್ರಿಯೆ ಮೇಲ್ವಿಚಾರಣೆಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಬೇಕು. ಚುನಾವಣೆ ವಿಳಂಬವಾದರೆ ಯಾವುದೇ ಟೂರ್ನಿಯಲ್ಲಿ ರಾಜ್ಯದ ತಂಡ ಭಾಗವಹಿಸಲು ಅನರ್ಹವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ಸರ್ಕಾರವು ಸೊಸೈಟಿ ಕಾಯಿದೆಯ ಅನ್ವಯ ಆಡಳಿತಾಧಿಕಾರಿ ನೇಮಕ ಮಾಡಬಹುದು” ಎಂದರು. ವಕೀಲ ಎಸ್‌ ಸೂರಜ್‌ ಅವರು ಅರ್ಜಿದಾರರ ಪರವಾಗಿ ವಕಾಲತ್ತು ವಹಿಸಿದ್ದರು.

Also Read
'ಒಂಭತ್ತು ವರ್ಷ ಗರಿಷ್ಠ ಅವಧಿʼ ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ನಿರ್ಣಯ ಎತ್ತಿ ಹಿಡಿದ ಹೈಕೋರ್ಟ್‌; ಚುನಾವಣೆ ಸರಾಗ

ಚುನಾವಣಾಧಿಕಾರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ನ್ಯಾಯಾಲಯ ನಿಗದಿಪಡಿಸಿದ ವೇಳಾಪಟ್ಟಿಗೆ ಅನುಗುಣವಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯ ಉಸ್ತುವಾರಿಯಡಿ ಚುನಾವಣೆ ನಡೆಸಲಾಗುವುದು” ಎಂದರು.

ಮಧ್ಯಪ್ರವೇಶಿಕೆ ಕೋರಿರುವವರ ಪರವಾಗಿ ಹಿರಿಯ ವಕೀಲ ಅರುಣ್‌ ಕುಮಾರ್‌ ಮತ್ತು ವಕೀಲ ಮನು ಪ್ರಭಾಕರ್‌ ಕುಲಕರ್ಣಿ ಅವರು ವಾದಿಸಿದರು.

Kannada Bar & Bench
kannada.barandbench.com