ಸ್ಮಶಾನ ಜಾಗ ಒತ್ತುವರಿ ತೆರವಿಗಾಗಿ ಕಠಿಣ ಕ್ರಮಕೈಗೊಳ್ಳಲು ಕಂದಾಯ ಇಲಾಖೆಗೆ ಹೈಕೋರ್ಟ್‌ ನಿರ್ದೇಶನ

ಒತ್ತುವರಿ ಹಾಗೂ ಅತಿಕ್ರಮ ಪ್ರವೇಶದಿಂದ ರಕ್ಷಣೆ ಮಾಡಲು ಮಂಜೂರಾತಿ ಆದೇಶ ಹಾಗೂ ಆರ್‌ಟಿಸಿ ದಾಖಲೆ ಇಲ್ಲದ ಸ್ಮಶಾನ ಜಾಗಕ್ಕೆ ಕೂಡಲೇ ಕಂದಾಯ ದಾಖಲೆ ಒದಗಿಸುವ ಕೆಲಸವನ್ನು ಕಂದಾಯ ಇಲಾಖೆ ಮಾಡಬೇಕು ಎಂದು ನಿರ್ದೇಶಿಸಿರುವ ಪೀಠ.
Karnataka High Court
Karnataka High Court

ರಾಜ್ಯದಲ್ಲಿನ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಇದಕ್ಕಾಗಿ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ರಾಜ್ಯದಲ್ಲಿ ಯಾವೆಲ್ಲಾ ಗ್ರಾಮಗಳಲ್ಲಿ ಸ್ಮಶಾನ ಜಾಗ ಒತ್ತುವರಿಯಾಗಿದೆ. ಸ್ಮಶಾನಕ್ಕೆ ಜಾಗ ಮಂಜೂರು ಮಾಡಿದ್ದರೂ ಅದರ ಮಾಹಿತಿಯನ್ನು ಕಂದಾಯ ದಾಖಲೆಗಳಲ್ಲಿ ನಮೂದಿಸಿಲ್ಲ ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ವರದಿಯನ್ನು ಅರ್ಜಿದಾರರು ಸಲ್ಲಿಸಿದ್ದಾರೆ. ಆ ವರದಿ ಶಿಫಾರಸ್ಸಿನಂತೆ ಒತ್ತುವರಿಯಾಗಿರುವ ಸ್ಮಶಾನ ಜಾಗವನ್ನು ತೆರವುಗೊಳಿಸಬೇಕು. ಒತ್ತುವರಿ ಹಾಗೂ ಅತಿಕ್ರಮ ಪ್ರವೇಶದಿಂದ ರಕ್ಷಣೆ ಮಾಡಲು ಮಂಜೂರಾತಿ ಆದೇಶ ಹಾಗೂ ಆರ್‌ಟಿಸಿ ದಾಖಲೆ ಇಲ್ಲದ ಸ್ಮಶಾನ ಜಾಗಕ್ಕೆ ಕೂಡಲೇ ಕಂದಾಯ ದಾಖಲೆ ಒದಗಿಸುವ ಕೆಲಸ ಮಾಡಬೇಕು ಎಂದು ಕಂದಾಯ ಇಲಾಖೆಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಸ್ಮಶಾನ ಜಾಗದ ಒತ್ತುವರಿ, ಅತಿಕ್ರಮ ಪ್ರವೇಶದಿಂದ ಮೃತರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ, ಮೃತರ ಹಕ್ಕುಗಳು ಸಹ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಇದರಿಂದ ಸ್ಮಶಾನ ಜಾಗದ ರಕ್ಷಣೆ ಮತ್ತು ಒತ್ತುವರಿ ತೆರವಿಗೆ ಕಂದಾಯ ಇಲಾಖೆ ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ. ರಾಜ್ಯದ ಕೆಲ ಗ್ರಾಮಗಳಿಗೆ ಸ್ಮಶಾನ ಜಾಗ ಮಂಜೂರಾಗಿದ್ದರೂ ಅದಕ್ಕೆ ಆರ್‌ಟಿಸಿ ಇಲ್ಲ. ಮತ್ತಷ್ಟು ಗ್ರಾಮಗಳಲ್ಲಿ ಶವ ಸಂಸ್ಕಾರ ನಡೆಯುತ್ತಿರುವ ಜಾಗಕ್ಕೆ ಅಧಿಕೃತ ಮಂಜೂರಾತಿ ಆದೇಶಗಳು ಇಲ್ಲ. ಈ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಬೇಕಿದೆ ಎಂದು ಅರ್ಜಿದಾರರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಅರ್ಜಿ 2022ರ ಜುಲೈ 28ರಂದು ವಿಚಾರಣೆಗೆ ಬಂದಾಗ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ರಾಜ್ಯದಲ್ಲಿ ಸ್ಮಶಾನ ಜಾಗ ಹೊಂದಿರುವ ಮತ್ತು ಹೊಂದಿರದ ಗ್ರಾಮಗಳ ಕುರಿತು ಜಿಲ್ಲಾವಾರು ಸಮಗ್ರ ಮಾಹಿತಿ ನೀಡಿ ವರದಿ ಸಲ್ಲಿಸಿದ್ದರು. ಅದರಂತೆ ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,099 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಲಾಗಿದೆ. ಇನ್ನೂ 1,454 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ. 1,010 ಗ್ರಾಮಗಳು ಬೇಚರಾಕ್ (ಅಧಿಕೃತವಾಗಿ ಕಂದಾಯ ಸ್ಥಾನಮಾನವಿಲ್ಲದ) ಗ್ರಾಮಗಳಾಗಿವೆ ಎಂದು ಆ ವರದಿಯಲ್ಲಿ ಮಾಹಿತಿ ನೀಡಲಾಗಿತ್ತು.

Also Read
ಶವ ಸಂಸ್ಕಾರಕ್ಕೆ ಜಾಗ: ಹೈಕೋರ್ಟ್‌ಗೆ ಸಮಗ್ರ ಮಾಹಿತಿ ಸಲ್ಲಿಸಿದ ಸರ್ಕಾರ

ಅದನ್ನು ಪರಿಗಣಿಸಿದ್ದ ನ್ಯಾಯಪೀಠ, ಸರ್ಕಾರ ಒದಗಿಸಿರುವ ಮಾಹಿತಿಯನ್ನು ಪರಿಶೀಲಿಸಿ, ವಾಸ್ತವ ಸಂಗತಿ ಏನಿದೆ ಎಂದು ಹೋಲಿಕೆ ಮಾಡಿ ಎರಡು ವಾರಗಳಲ್ಲಿ ವರದಿ ನೀಡುವಂತೆ ಅರ್ಜಿದಾರ ಮಹಮ್ಮದ್ ಇಕ್ಬಾಲ್‌ಗೆ ನಿರ್ದೇಶಿಸಿತ್ತು. ಅದರಂತೆ ಅರ್ಜಿದಾರರು ವರದಿ ಸಲ್ಲಿಸಿದ್ದು, ಅದನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com