ಕೆಆರ್‌ಎಸ್‌ ಡ್ಯಾಮ್‌ ಸುರಕ್ಷತೆ: 15 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಲು ಸರ್ಕಾರ, ಕಾವೇರಿ ನಿಗಮಕ್ಕೆ ನಿರ್ದೇಶನ

“ಕಾಮಗಾರಿಗೆ ಅಗೆಯುವುದರಿಂದ ಜಲಾಶಯಕ್ಕೆ ಹಾನಿಯಾಗುವುದಿಲ್ಲವೇ? ಜಲಾಶಯಕ್ಕೆ ಸುರಕ್ಷತೆ ಸಮಿತಿಯ ಅನುಮತಿ ಏಕೆ ಪಡೆದಿಲ್ಲ? ಮನರಂಜನಾ ಪಾರ್ಕ್ ಕಾಮಗಾರಿಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆಯೇ?” ಎಂದು ಪ್ರಶ್ನಿಸಿದ ನ್ಯಾಯಾಲಯ.
ಕೆಆರ್‌ಎಸ್‌ ಡ್ಯಾಮ್‌ ಸುರಕ್ಷತೆ: 15 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಲು ಸರ್ಕಾರ, ಕಾವೇರಿ ನಿಗಮಕ್ಕೆ ನಿರ್ದೇಶನ
Published on

ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯದ ಸುರಕ್ಷತೆಗೆ ಸಂಬಂಧಿಸಿದಂತೆ 15 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ಕಾವೇರಿ ನಿಗಮಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. ಅಲ್ಲದೇ, ಕಾವೇರಿ ಆರತಿಗೆ ಆಕ್ಷೇಪಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಬಳಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಆಯೋಜಿಸುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ರೈತ ನಾಯಕಿ ಮಂಡ್ಯ ಜಿಲ್ಲೆಯ ಸುನಂದಾ ಜಯರಾಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ್‌ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶಿವಪ್ರಕಾಶ್‌ ಅವರು “ಕೆಆರ್‌ಎಸ್‌ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪಿಸಲಾಗುತ್ತಿದೆ. ಕಾಮಗಾರಿಗೆ ಪೂರಕವಾಗಿ ಫೋಟೊ ಸಲ್ಲಿಕೆ ಮಾಡಲಾಗಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಕಾವೇರಿ ಪ್ರತಿಮೆ ಸ್ಥಾಪಿಸಲು ಮಾತ್ರ ಟೆಂಡರ್ ನೀಡಲಾಗಿದೆ. ಕಾವೇರಿ ಪ್ರತಿಮೆ ಸ್ಥಾಪನೆಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆ. ಮನರಂಜನಾ ಪಾರ್ಕ್ ಟೆಂಡರ್ ಪೂರ್ಣಗೊಂಡಿಲ್ಲ” ಎಂದರು.

Also Read
ಕಾವೇರಿ ಆರತಿ: ತಾಂತ್ರಿಕ ಸಲಹೆ ಪಡೆದಿಲ್ಲ ಎಂದು ಆಕ್ಷೇಪ, ದಾಖಲೆ ಸಲ್ಲಿಸಲು ಸೂಚಿಸಿದ ಹೈಕೋರ್ಟ್

ಆಗ ಪೀಠವು “ಕಾಮಗಾರಿಗೆ ಅಗೆಯುವುದರಿಂದ ಜಲಾಶಯಕ್ಕೆ ಹಾನಿಯಾಗುವುದಿಲ್ಲವೇ? ಜಲಾಶಯಕ್ಕೆ ಸುರಕ್ಷತೆ ಸಮಿತಿಯ ಅನುಮತಿ ಏಕೆ ಪಡೆದಿಲ್ಲ? ಮನರಂಜನಾ ಪಾರ್ಕ್ ಕಾಮಗಾರಿಗೆ ತಾಂತ್ರಿಕ ತಜ್ಙರ ಅನುಮತಿ ಪಡೆಯಲಾಗಿದೆಯೇ? ಕಾವೇರಿ ಪ್ರತಿಮೆ ಸ್ಥಾಪಿಸುವಾಗ ತಜ್ಙರ ಸಲಹೆ ಪಾಲಿಸಲಾಗಿದೆಯೇ? ಎಂಬ ಅಂಶಗಳನ್ನು ಒಳಗೊಂಡು ಎರಡು ವಾರದಲ್ಲಿ ಅಫಿಡವಿಟ್‌ ಸಲ್ಲಿಸಬೇಕು” ಎಂದು ಆದೇಶಿಸಿತು.

ಅಲ್ಲದೇ, ಕೇಂದ್ರ, ರಾಜ್ಯ ಸರ್ಕಾರ, ರಾಷ್ಟ್ರೀಯ ಜಲಾಶಯ ಸುರಕ್ಷತಾ ಪ್ರಾಧಿಕಾರ, ಜಲಸಂಪನ್ಮೂಲ, ಪ್ರವಾಸೋದ್ಯಮ ಇಲಾಖೆ, ಕಾವೇರಿ ನೀರಾವರಿ ನಿಗಮ, ಜಿಲ್ಲಾಡಳಿತ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿತು. ಕೆಆರ್‌ಎಸ್‌ ಸುರಕ್ಷತೆಗೆ ಸಂಬಂಧಿಸಿದಂತೆ 15 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಬೇಕು. ಇದಕ್ಕೆ ಅರ್ಜಿದಾರರು ಆನಂತರ ಪ್ರತ್ಯುತ್ತರ ಸಲ್ಲಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆ ಮಂದೂಡಿತು.

Kannada Bar & Bench
kannada.barandbench.com