
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿಯನ್ನು ಗುರುವಾರ ಮುಚ್ಚಿದ ಲಕೋಟೆಯಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕಾಲ್ತುಳಿತ ಪ್ರಕರಣದ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ನಮ್ಮ ಪ್ರತಿಕ್ರಿಯೆ ಸಲ್ಲಿಸಲಾಗಿಲ್ಲ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿದ್ದು, ಒಂದು ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರು ಸೇರಿ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್‌ಸಿಬಿ, ಡಿಎನ್‌ಎ ಅಧಿಕಾರಿಗಳ ಜಾಮೀನು ಅರ್ಜಿಗಳು ಬಾಕಿ ಇದ್ದು, ಇಲ್ಲಿ ಹೇಳುವುದನ್ನು ಅವರು ಅಲ್ಲಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ” ಎಂದರು.
ಅದಕ್ಕೆ ಪೀಠವು “ನ್ಯಾಯಾಲಯದ ನಿರ್ದೇನಕ್ಕೆ ನೀವು ಪ್ರತಿಕ್ರಿಯೆ ಸಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದೀರಾ?” ಎಂದಿತು.
ಇದಕ್ಕೆ ಎಜಿ ಅವರು “ದಯಮಾಡಿ ಈ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕು. ಕೆಲವು ವಿಚಾರಗಳಿವೆ ಸ್ವಾಮಿ” ಎಂದರು.
ಆಗ ಮತ್ತೆ ಪೀಠವು “ಸಮಸ್ಯೆ ಏನಿದೆ?” ಎಂದು ಮರು ಪ್ರಶ್ನಿಸಿತು. ಇದಕ್ಕೆ ಎಜಿ ಅವರು ““ಮುಕ್ತ ನ್ಯಾಯಾಲಯದಲ್ಲಿ ಹೇಳುವುದರಿಂದ ಪೂರ್ವಾಗ್ರಹ ಉಂಟಾಗಲಿದೆ. ಸ್ವತಂತ್ರ ವಿಚಾರಣಾ ಆಯೋಗದಿಂದ ವರದಿ ಬರಲಿ. ನಾವು ಪಕ್ಷಪಾತಿಗಳಾಗಿದ್ದೇವೆ ಎನಿಸಬಾರದು. ಇದು ಒಂದು ತಿಂಗಳ ವಿಚಾರವಷ್ಟೆ” ಎಂದರು.
ಆಗ ಹೈಕೋರ್ಟ್ “ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿ” ಎಂದಿತು. ಇದಕ್ಕೆ ಎಜಿ ಅವರು “ಕಳೆದ ವಿಚಾರಣೆಯಲ್ಲಿ ಪ್ರಕರಣವನ್ನು ಸಿಐಡಿಗೆ ನೀಡಲಾಗಿದೆ ಎಂದು ಹೇಳಿದ್ದೇನೆ. ಆ ದಿನವೇ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಇದನ್ನು ಆರೋಪಿಗಳು ಜಾಮೀನು ಅರ್ಜಿಯಲ್ಲಿ ಬಳಸಿಕೊಳ್ಳುತ್ತಾರೆ” ಎಂದರು. ಇದಕ್ಕೆ ಪೀಠವು “ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿ” ಎಂದಿತು.
ವಕೀಲ ದಿವಾಕರ್ ಅವರು ವಿಧಾನ ಪರಿಷತ್ ಮಾಜಿ ಸದಸ್ಯರೊಬ್ಬರು ಪ್ರಕರಣದಲ್ಲಿ ಮಧ್ಯಪ್ರವೇಶಿಕೆ ಕೋರುತ್ತಿದ್ದಾರೆ ಎಂದರು. ಈ ನಡುವೆ, ವಕೀಲರೊಬ್ಬರು ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಬೇಕು. ಅವರೇ ನಿಜವಾದ ದೋಷಿಗಳು ಎಂದರು.
ಇದಕ್ಕೆ ಪೀಠವು “ಸರ್ಕಾರ ಸ್ಥಿತಿಗತಿ ವರದಿ ಸಲ್ಲಿಸಲಿದೆ” ಎಂದು ಹೇಳಿತು.
ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಪ್ರಕರಣದಲ್ಲಿ ಸಂತ್ರಸ್ತರಾಗಿರುವವರೂ ವಾದಿಸಲು ಬಯಸಿದ್ದಾರೆ” ಎಂದರು.
ಎಲ್ಲರ ವಾದಗಳನ್ನು ಆಲಿಸಿದ ಪೀಠವು “ಮುಚ್ಚಿದ ಲಕೋಟೆಯಲ್ಲಿ ಅಡ್ವೊಕೇಟ್ ಜನರಲ್ ಅವರು ಪ್ರತಿಕ್ರಿಯೆಯನ್ನು ನೇರವಾಗಿ ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಆದೇಶಿಸಿತು.
ಮಧ್ಯಪ್ರವೇಶಿಕೆ ಕೋರಿರುವ ಅರ್ಜಿಗಳ ಸಂಬಂಧ ಏನನ್ನೂ ಹೇಳುವುದಿಲ್ಲ. ಸರ್ಕಾರ ಪ್ರತಿಕ್ರಿಯೆ ಸಲ್ಲಿಸಲಿ, ಆನಂತರ ಮಧ್ಯಪ್ರವೇಶಿಸಿಕೆ ಅರ್ಜಿಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿ, ನ್ಯಾಯಾಲಯವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.