"ಬೆಂಗಳೂರಿನಲ್ಲಿರುವ 20 ಲಕ್ಷ ಅಕ್ರಮ ವಲಸಿಗರ ವಿರುದ್ಧ ಕೈಗೊಂಡಿರುವ ಕ್ರಮವೇನು?" ವರದಿ ಸಲ್ಲಿಸಿ ಎಂದ ಹೈಕೋರ್ಟ್‌

ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳಲ್ಲಿ ಒಂದಕ್ಕೆ ತಡೆ ನೀಡಿರುವ ಹೈಕೋರ್ಟ್‌, ಇನ್ನೊಂದರಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
Justice M Nagaprasanna and Karnataka HC
Justice M Nagaprasanna and Karnataka HC
Published on

ಅಕ್ರಮ ವಲಸಿಗರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಮೌಖಿಕವಾಗಿ ಬುಧವಾರ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ. ಅಕ್ರಮ ವಲಸಿಗರ ಸಂಬಂಧ ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದರ ಕುರಿತು ಮುಂದಿನ ವಿಚಾರಣೆಯ ವೇಳೆಗೆ ರಾಜ್ಯ ಸರ್ಕಾರವು ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಬಾಂಗ್ಲಾ ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ಹೋರಾಟ ಮಾಡಿರುವುದಕ್ಕೆ ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪುನೀತ್‌ ಕೆರೆಹಳ್ಳಿ ಅಲಿಯಾಸ್‌ ಪುನೀತ್‌ ಕುಮಾರ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಎಫ್‌ಆರ್‌ಆರ್‌ಒನಲ್ಲಿ ನೋಂದಣಿ ಮಾಡಿಸದ ಜನರನ್ನು ಪತ್ತೆ ಮಾಡುವುದು ರಾಜ್ಯ ಸರ್ಕಾರದ ಕೆಲಸ. ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಪುನೀತ್‌ ತೋರಿಸಿದ್ದಾರೆ. ಅದಕ್ಕೆ ನೀವು ಅವರ ವಿರುದ್ಧ ಪ್ರಕರಣ ದಾಖಲಿಸಿದರೆ ಹೇಗೆ? ವಿದೇಶದಿಂದ ಬಂದಿರುವವರು ಬೆಂಗಳೂರಿನ ಎಲ್ಲಾ ಕಡೆ ನೆಲೆಸಿದ್ದಾರೆ. ಯಾರ ಬಳಿಯೂ ವೀಸಾ, ಪರ್ಮಿಟ್‌ ಇಲ್ಲ. ಅದಾಗ್ಯೂ, ಅವರು ಇಲ್ಲಿ ನೆಲೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಪುನೀತ್‌ ಅದನ್ನು ತೋರಿಸಿದ್ದಕ್ಕೆ ನಿಮಗೆ ಸಮಸ್ಯೆಯೇ?” ಎಂದು ಸರ್ಕಾರಕ್ಕೆ ಚಾಟಿ ಬೀಸಿತು.

ಆಗ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಪುನೀತ್‌ ದಾಖಲೆ ತೋರಿಸಲಿ. ಅಕ್ರಮ ವಲಸಿಗರನ್ನು ಗುರುತಿಸಲು ವಿಧಾನವಿದೆ. ನೇರವಾಗಿ ಅಲ್ಲಿಗೆ ಹೋಗಿ ಪುನೀತ್‌ ಹಲ್ಲೆ ನಡೆಸಲಾಗದು. ಅಕ್ರಮ ವಲಸಿಗರನ್ನು ಬಂಧನದಲ್ಲಿ ಇಡಲಾಗಿದೆ. ದೇಶದಿಂದ ಹೊರಗೆ ಕಳುಹಿಸುವುದರ ಕುರಿತು ಎಫ್‌ಆರ್‌ಆರ್‌ಒ ಕ್ರಮಕೈಗೊಳ್ಳಬೇಕು. ಬಾಂಗ್ಲಾದೇಶದ ವಲಸಿಗರ ಕುರಿತು ಎಫ್‌ಆರ್‌ಆರ್‌ಒಗೆ ಮಾಹಿತಿ ನೀಡಲಾಗಿದೆ” ಎಂದರು.

ಇದಕ್ಕೆ ಪೀಠವು “ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಸರ್ಕಾರದ ಕೆಲಸ. ಪುನೀತ್‌ ಅದನ್ನು ಬಿಂಬಿಸಿದ್ದಾರೆ ಅಷ್ಟೆ. ತನಿಖೆ ನಡೆಸಿ, ಸರ್ಕಾರ ಪ್ರಕರಣ ದಾಖಲಿಸಬೇಕು. ಪುನೀತ್‌ ಅಲ್ಲಿ ಹಲ್ಲೆ ನಡೆಸಿಲ್ಲ, ಅದನ್ನು ಬಿಂಬಿಸಿದ್ದಾರೆ ಅಷ್ಟೆ. ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ಸರ್ಕಾರ ಏನಾದರೂ ಕ್ರಮಕೈಗೊಂಡಿದೆಯೇ? ಯಾವ ಕ್ರಮಕೈಗೊಂಡಿದ್ದೀರಿ? ಅವಧಿ ಮೀರಿ ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂಬ ಮಾಹಿತಿ ಸಲ್ಲಿಸಬೇಕು. ಯಾವಾಗ ಅವರನ್ನು ದೇಶದಿಂದ ಹೊರಗೆ ಕಳುಹಿಸುತ್ತೀರಿ? ಎಫ್‌ಆರ್‌ಆರ್‌ಒಗೆ ಸಮನ್ಸ್‌ ಜಾರಿ ಮಾಡಲಾಗುವುದು. ಒಂದು ದೇಶ ಅಥವಾ ಇನ್ನೊಂದು ದೇಶದ ಬಗ್ಗೆ ನಾನು ಮಾತನಾಡುತ್ತಿಲ್ಲ. ಅಕ್ರಮ ವಲಸಿಗರು ಎಲ್ಲಾ ಕಡೆ ಇದ್ದಾರೆ” ಎಂದಿತು.

Also Read
ಅಧಿಕೃತ ವೀಸಾ, ಪಾಸ್‌ಪೋರ್ಟ್‌ ಹೊಂದಿಲ್ಲದ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ: ಹೈಕೋರ್ಟ್‌ ಕಳವಳ

ಅಂತಿಮವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಸುಮಾರು 20 ಲಕ್ಷ ಅಕ್ರಮ ವಲಸಿಗರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ನಿರ್ದೇಶಿಸಿತು. ಅಲ್ಲದೇ, ಒಂದು ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧದ ತನಿಖೆಗೆ ತಡೆ ನೀಡಿದ್ದು, ಇನ್ನೊಂದು ಪ್ರಕರಣದಲ್ಲಿ ಪುನೀತ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com