ಮುತಾಲಿಕ್ ಹೂಡಿರುವ ಮಾನಹಾನಿ ಪ್ರಕರಣ: ರದ್ದತಿ ಕೋರಿದ್ದ ಶಾಸಕ ಸುನಿಲ್‌ ಕುಮಾರ್‌ ಅರ್ಜಿ ವಜಾ

“ಚುನಾವಣೆಯಲ್ಲಿ ಒಬ್ಬರನ್ನು ಒಬ್ಬರು ನಿಂದಿಸುವ ಮೂಲಕ ಚುನಾವಣೆ ಮಾಡಲಾಗುತ್ತಿದೆ. ಯಾವ ಪಕ್ಷ ಏನು ಮಾಡಿದೆ? ಯಾವ ಸರ್ಕಾರ ಏನು ಮಾಡಿದೆ? ಎಂಬ ವಿಚಾರದ ಮೇಲಲ್ಲ. ಈ ರೀತಿಯ ಕೆಸರೆರಚಾಟ ನಿಲ್ಲಬೇಕು” ಎಂದ ನ್ಯಾಯಾಲಯ.
V Sunil Kumar, Pramod Muthalik and Karnataka HC
V Sunil Kumar, Pramod Muthalik and Karnataka HC
Published on

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿ ಸುನಿಲ್‌ ಕುಮಾರ್‌ ವಿರುದ್ದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೂಡಿರುವ ಮಾನಹಾನಿ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ಬಿಜೆಪಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸುನಿಲ್‌ ಕುಮಾರ್‌ ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಮಾನಹಾನಿಗೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

“ಚುನಾವಣೆಯಲ್ಲಿ ಒಬ್ಬರನ್ನು ಒಬ್ಬರು ನಿಂದಿಸುವ ಮೂಲಕ ಚುನಾವಣೆ ಮಾಡಲಾಗುತ್ತಿದೆ. ಯಾವ ಪಕ್ಷ ಏನು ಮಾಡಿದೆ, ಯಾವ ಸರ್ಕಾರ ಏನು ಮಾಡಿದೆ ಎಂಬ ವಿಚಾರದ ಮೇಲಲ್ಲ. ಈ ರೀತಿಯ ಕೆಸರೆರಚಾಟ ನಿಲ್ಲಬೇಕು ಎಂದು ನಿನ್ನೆ ಪ್ರಕರಣವೊಂದರ ವಿಚಾರಣೆಯ ವೇಳೆ ಹೇಳಿದ್ದೆ” ಎಂದು ನ್ಯಾ. ನಾಗಪ್ರಸನ್ನ ನೆನಪಿಸಿದರು.

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅರ್ಜಿದಾರ ಸುನಿಲ್‌ ಕುಮಾರ್‌ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್‌ ಮುತಾಲಿಕ್‌ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸುನಿಲ್‌ ಕುಮಾರ್‌ ಗೆಲುವು ಸಾಧಿಸಿದ್ದರು. ಚುನಾವಣಾ ಫಲಿತಾಂಶದ ನಂತರ 2023ರ ಮೇ 14ರಂದು ಕಾರ್ಕಳದ ಬಂಡಿಮಠ ಬಸ್‌ ನಿಲ್ದಾಣ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸುನಿಲ್‌ ಕುಮಾರ್‌, 'ಪ್ರಮೋದ್ ಮುತಾಲಿಕರೇ ಹಣಕ್ಕೋಸ್ಕರ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಯನ್ನು ಟೈಗರ್‌ ಗ್ಯಾಂಗಿನ ನೆಪದಲ್ಲಿ ಎಷ್ಟು ಬಾರಿ ಮಾಡಿಸಿದ್ದೀರಾ ನೀವು. ಆ ಹತ್ಯೆಯನ್ನು ಮಾಡಿದಂತಹವರು ಇವತ್ತಿಗೂ ಸಹ ಕಲಬುರಗಿ ಜೈಲಿನಲ್ಲಿ ಇದ್ದಾರೆ’ ಎಂದು ಹೇಳಿಕೆ ನೀಡಿದ್ದರು.

Also Read
ಮುತಾಲಿಕ್‌ರಿಂದ ಮಾನಹಾನಿ ಪ್ರಕರಣ: ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ವಿರುದ್ಧದ ವಾರೆಂಟ್‌ಗೆ ತಡೆ ನೀಡಿದ ಹೈಕೋರ್ಟ್‌

ಇದರಿಂದ ಸುನಿಲ್‌ ಕುಮಾರ್‌ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದ ಪ್ರಮೋದ್‌ ಮುತಾಲಿಕ್‌ 2023ರ ಸೆಪ್ಟೆಂಬರ್‌ 7ರಂದು ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಇದರ ಸಂಜ್ಞೇ ಪರಿಗಣಿಸಿದ್ದ ನ್ಯಾಯಾಲಯವು ಕ್ರಿಮಿನಲ್‌ ಮಾನಹಾನಿ ಪ್ರಕರಣವನ್ನಾಗಿ ಪರಿವರ್ತಿಸಿತ್ತು. ಇದನ್ನು ವಜಾ ಮಾಡುವಂತೆ ಸುನಿಲ್‌ ಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com