ನಾಡಧ್ವಜ: ಪ್ರತ್ಯೇಕ ಧ್ವಜಕ್ಕಾಗಿ ನಿರ್ದೇಶನ ಕೋರಿದ್ದ ಅರ್ಜಿ ವಜಾ, ನ್ಯಾಯಾಲಯದ ವ್ಯಾಪ್ತಿಗೆ ಬಾರದು ಎಂದ ಹೈಕೋರ್ಟ್‌

ಹಳದಿ, ಬಿಳಿ ಮತ್ತು ಕೆಂಪು ವರ್ಣಗಳ ನಡುವೆ ಗಂಡಭೇರುಂಡ ಚಿಹ್ನೆ ಹೊಂದಿರುವ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 2018ರ ಮಾರ್ಚ್‌ 8ರಂದು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದರು. ಇದಕ್ಕೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಕೋರಲಾಗಿತ್ತು.
ನಾಡಧ್ವಜ: ಪ್ರತ್ಯೇಕ ಧ್ವಜಕ್ಕಾಗಿ ನಿರ್ದೇಶನ ಕೋರಿದ್ದ ಅರ್ಜಿ ವಜಾ, ನ್ಯಾಯಾಲಯದ ವ್ಯಾಪ್ತಿಗೆ ಬಾರದು ಎಂದ ಹೈಕೋರ್ಟ್‌
Published on

ಕರ್ನಾಟಕವು ಪ್ರತ್ಯೇಕ ಧ್ವಜ ಹೊಂದಲು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಅದನ್ನು ಶುಕ್ರವಾರ ವಜಾ ಮಾಡಿತು.

ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ನಡೆಸಿತು.

“ಪ್ರತ್ಯೇಕ ನಾಡ ಧ್ವಜ ಹೊಂದುವ ವಿಚಾರವು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ತಪ್ಪಾಗಿ ಅರ್ಥೈಸಿಕೊಂಡು ಪಿಐಎಲ್‌ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ. ಮನವಿಯ ಊರ್ಜಿತತ್ವಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ಉಮಾಪತಿ ಅವರು “ಹಿರಿಯ ಪತ್ರಕರ್ತ ಪಾಟೀಲ್‌ ಪುಟ್ಟಪ್ಪ ಅವರು ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹಿಂದಿನ ಅಡ್ವೊಕೇಟ್‌ ಜನರಲ್‌ (ಪ್ರೊ.ರವಿವರ್ಮ ಕುಮಾರ್‌) ಅಭಿಪ್ರಾಯ ಆಧರಿಸಿ ರಾಜ್ಯ ಸರ್ಕಾರವು ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಹೊಂದಲು ಕವಿಗಳು, ಹೋರಾಟಗಾರರನ್ನು ಒಳಗೊಂಡ ಒಂಭತ್ತು ಸದಸ್ಯರ ತಜ್ಞರ ಸಮಿತಿ ರಚಿಸಿತ್ತು. ಸಮಿತಿ ನೀಡಿದ್ದ ವರದಿಯನ್ನು ಅಂದಿನ ಸಂಪುಟ ಒಪ್ಪಿಕೊಂಡಿತ್ತು. ಈಗ ಸಮಿತಿಯ ವರದಿಯನ್ನು ನ್ಯಾಯಾಲಯದ ಮುಂದೆ ಇಡಬೇಕು. ಆನಂತರ ಅದನ್ನು ಪೀಠವು ಪರಿಗಣಿಸಬೇಕು” ಎಂದು ಕೋರಿದರು.

“ಕರ್ನಾಟಕವು ತನ್ನದೇ ಆದ ಧ್ವಜ ಹೊಂದಬೇಕು ಎಂಬ ಕೂಗು ಇದೆ. ಈಗ ರಾಜ್ಯದ ಒಂದೊಂದು ಕಡೆ ಒಂದೊಂದು ಧ್ವಜಾರೋಹಣ ಮಾಡಲಾಗುತ್ತಿದೆ. ಇದರಿಂದ ಗೊಂದಲ ಇದೆ. ಪ್ರತ್ಯೇಕ ಧ್ವಜ ಹೊಂದಲು ರಾಜ್ಯ ಸರ್ಕಾರ ಬೆಂಬಲ ಸೂಚಿಸಿದೆ. ಇದಕ್ಕೆ ಯಾವುದೇ ಕಾಯಿದೆ ಅಡಿ ನಿಷೇಧವಿಲ್ಲ. ಪ್ರತ್ಯೇಕ ಧ್ವಜ ಸೂಕ್ಷ್ಮ ವಿಚಾರವಾಗಿದ್ದು, ಸಂವಿಧಾನಬಾಹಿರವಾದದ್ದನ್ನು ನಾವು ಕೋರುತ್ತಿಲ್ಲ” ಎಂದರು.

ಆಗ ಪೀಠವು “ನಿಮಗೆ ಈಗ ವಿಸ್ತೃತ ಆದೇಶ ಬೇಕೆ?” ಎಂದಿತು.

ಆಗ ಉಮಾಪತಿ ಅವರು “ನಿನ್ನೆಯಷ್ಟೇ ರಾಜ್ಯ ಸರ್ಕಾರ ವಿಸ್ತೃತವಾದ ಆಕ್ಷೇಪಣೆ ಸಲ್ಲಿಸಿದೆ. ಇದಕ್ಕೆ ವಿಸ್ತೃತವಾದ ಪ್ರತ್ಯುತ್ತರ ದಾಖಲಿಸುವುದು ನನ್ನ ಕರ್ತವ್ಯ. ಆಕ್ಷೇಪಣೆಯಲ್ಲಿ ಎಲ್ಲಿಯೂ ರಾಜ್ಯ ಸರ್ಕಾರ ನಮ್ಮ ಅರ್ಜಿ ಅನೂರ್ಜಿತವಾಗುತ್ತದೆ ಎಂದು ಹೇಳಿಲ್ಲ. ನಮ್ಮೆಲ್ಲಾ ವಾದವನ್ನು ಸರ್ಕಾರ ಒಪ್ಪಿದೆ. ಹಿಂದಿನ ಎಲ್ಲಾ ಎಜಿಗಳು ನಮ್ಮ ಬೇಡಿಕೆಗೆ ಬೆಂಬಲಿಸಿದ್ದಾರೆ” ಎಂದರು.

“ನಮ್ಮದು ಒಕ್ಕೂಟ ದೇಶವಾಗಿದ್ದು, ಪ್ರತಿ ರಾಜ್ಯವೂ ತನ್ನದೇ ಆದ ಧ್ವಜ ಹೊಂದುವ ಹಕ್ಕು ಹೊಂದಿದೆ. 2014ರಿಂದ ನಾವು ಈ ವಿಚಾರಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನೇರವಾಗಿ ನಾವು ನ್ಯಾಯಾಲಯದ ಮುಂದೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರ ಮಾರ್ಚ್‌ 8ರಂದು ಪ್ರತ್ಯೇಕ ಧ್ವಜವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದಾರೆ. ಆದರೆ, ಆನಂತರ ಯಾವುದೇ ಬೆಳವಣಿಗೆಯಾಗಲಿಲ್ಲ. ಹೀಗಾಗಿ, ನ್ಯಾಯಾಲಯದ ಮುಂದೆ ಬಂದಿದ್ದೇವೆ. 2014ರಿಂದ ಹಲವು ಮನವಿಗಳನ್ನು ಸರ್ಕಾರಕ್ಕೆ ನೀಡಿದ್ದೇವೆ. ಈ ಅರ್ಜಿಯ ಬಳಿಕ ರಾಜ್ಯ ಸರ್ಕಾರವು ಕೇಂದ್ರ ಗೃಹ ಇಲಾಖೆಗೆ ಅನುಮತಿ ಕೋರಿತ್ತು. ಆದರೆ, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಅನುಮತಿ ಕೋರುವ ಅಗತ್ಯವಿಲ್ಲ. ಈ ಕುರಿತು ಮುಂದಿನ ವಿಚಾರಣೆಯಲ್ಲಿ ಸ್ಪಷ್ಟನೆ ನೀಡಬಹುದು. ಈಗ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿರುವುದರಿಂದ ಕೇಂದ್ರವನ್ನು ಇಲ್ಲಿ ಪ್ರತಿವಾದಿ ಮಾಡಿ, ಪ್ರತ್ಯುತ್ತರ ಸಲ್ಲಿಸಲಾಗುವುದು” ಎಂದರು.

“ನ್ಯಾಯಾಲಯ ನಿರ್ದೇಶನ ನೀಡದ ಹೊರತು ರಾಜ್ಯ ಸರ್ಕಾರವು ಕಾರ್ಯೋನ್ಮುಖವಾಗುವುದಿಲ್ಲ. ದಯಮಾಡಿ ಸಾರ್ವಜನಿಕರ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಜನರು ನ್ಯಾಯಾಂಗದ ಮೇಲಿನ ಭರವಸೆ ಕಳೆದುಕೊಳ್ಳಲಿದ್ದಾರೆ” ಎಂದರು.

Also Read
ಕರ್ನಾಟಕದಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು: ನ್ಯಾ. ಹೇಮಂತ್‌ ಚಂದನಗೌಡರ್‌

ಆಗ ಪೀಠವು “ನೀವು ನಿಮ್ಮ ಬಾವುಟ ಹಾರಿಸಿದ್ದೀರಿ. ನಾವು ನಮ್ಮ ಆದೇಶ ಮಾಡಿದ್ದೇವೆ” ಎಂದಿತು.

ಪ್ರತ್ಯೇಕ ಧ್ವಜಕ್ಕೆ ಕಾನೂನಿನ ಮಾನ್ಯತೆ ಹಾಗೂ ಧ್ವಜದ ವಿನ್ಯಾಸದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌ ನೇತೃತ್ವದ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. 2018ರ ಮಾರ್ಚ್‌ 8ರಂದು ಹಳದಿ, ಬಿಳಿ ಮತ್ತು ಕೆಂಪು ವರ್ಣಗಳ ನಡುವೆ ಗಂಡಭೇರುಂಡ ಚಿಹ್ನೆ ಹೊಂದಿರುವ ಧ್ವಜವನ್ನು ಮುಖ್ಯಮಂತ್ರಿ ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದರು.

Kannada Bar & Bench
kannada.barandbench.com