ಹಿರಿಯ ಐಪಿಎಸ್ ಅಧಿಕಾರಿ ಭೀಮಾಶಂಕರ್ ಎಸ್. ಗುಳೇದ್ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಅಕ್ರಮ ಹಣ ವರ್ಗಾವಣೆ, ಬೇನಾಮಿ ಹಾಗೂ ಭ್ರಷ್ಟಾಚಾರ ಆರೋಪದ ಅಡಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ.
ಎರಡು ಖಾಸಗಿ ದೂರುಗಳನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇಯ ಪರಿಗಣಿಸಿರುವುದನ್ನು ವಜಾ ಮಾಡುವಂತೆ ಕೋರಿ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಗುಳೇದ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ದೂರುದಾರರ ಪತ್ನಿಯೇ ಅಕ್ರಮ ಸಂಬಂಧದ ಚಿತ್ರ ಮತ್ತು ವಿಡಿಯೊಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗಿರುವಾಗ ಆರೋಪಿ ಗುಳೇದ್ ಅವರು ಅವುಗಳನ್ನು ನಾಶ ಮಾಡಿದ್ದಾರೆ ಎಂದು ಹೇಳಲಾಗದು. ಮೊಬೈಲ್‌ನಲ್ಲಿನ ಕೆಲವು ಅಹಿತಕರ ಚಿತ್ರಗಳಿಗೆ ಪತಿ-ಪತ್ನಿಯರ ನಡುವೆ ಕಲಹವಾಗಿದ್ದು, ಅದಕ್ಕೆ ಗುಳೇದ್ ಅವರು ಬೆದರಿಕೆ ಹಾಕಿದ್ದಾರೆ ಎನ್ನುವುದನ್ನು ಒಪ್ಪಲಾಗದು. ಸೂಕ್ತ ದಾಖಲೆಗಳ ಕೊರತೆಯ ನಡುವೆ ವಿಚಾರಣಾಧೀನ ನ್ಯಾಯಾಲಯವು ಸಂಜ್ಞೇಯ ಪರಿಗಣಿಸಿದೆ. ಆದ್ದರಿಂದ ಐಪಿಸಿ ಸೆಕ್ಷನ್ 201 ಮತ್ತು 506 ಇಲ್ಲಿ ಅನ್ವಯಿಸುವುದಿಲ್ಲ," ಎಂದು ನ್ಯಾಯಾಲಯ ಹೇಳಿದೆ.
ಮುಂದುವರೆದು, "ಪತ್ನಿ ಮತ್ತು ಆರೋಪಿ ಗುಳೇದ್ ಅವರು ದೈಹಿಕ ಸಂಬಂಧ ಹೊಂದಿರುವ ಚಿತ್ರಗಳು ಪತ್ನಿಯ ಮೊಬೈಲ್‌ನಲ್ಲಿ ಪತ್ತೆಯಾಗಿದ್ದು, ಅವುಗಳನ್ನು ತನ್ನ ಮೊಬೈಲ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾಗಿ ದೂರುದಾರ ಪತಿಯೇ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ, ಐಪಿಸಿ ಸೆಕ್ಷನ್ 354A ಅನ್ವಯಿಸುವುದಿಲ್ಲ. ಗುಳೇದ್ ಮತ್ತು ದೂರುದಾರನ ಪತ್ನಿ ಇಬ್ಬರೂ ವಯಸ್ಕರಾಗಿದ್ದಾರೆ. ಪರಿಸ್ಥಿತಿ ಈ ರೀತಿ ಇರುವಾಗ ಮ್ಯಾಜಿಸ್ಟ್ರೇಟ್ ಅವರು ಐಪಿಸಿ ಸೆಕ್ಷನ್ 354A ಅಡಿ ಸಂಜ್ಞೇಯ ಪರಿಗಣಿಸುವುದು ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67(ಎ) ಅನ್ವಯಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಹೀಗಾಗಿ, ಪ್ರಕರಣವನ್ನು ಬದಿಗೆ ಸರಿಸಲಾಗಿದೆ" ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಇನ್ನು, ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಪಿಎಂಎಲ್ ಕಾಯಿದೆ ಸೆಕ್ಷನ್ 45ರ ಅಡಿ ಪ್ರತಿವಾದಿಯಾಗಿರುವ ದೂರುದಾರ ಸಲ್ಲಿಸಿರುವ ದೂರು ಊರ್ಜಿತವಲ್ಲ. ವಿಚಾರಣಾಧೀನ ನ್ಯಾಯಾಲಯವು ಸಂಜ್ಞೇಯ ಪರಿಗಣಿಸುವಂತಿಲ್ಲ ಮತ್ತು ಸಾಕ್ಷ್ಯ ದಾಖಲು ಮಾಡಲು ಆದೇಶ ಮಾಡಲಾಗದು. ಪಿಎಂಎಲ್ ಕಾಯಿದೆ ಸೆಕ್ಷನ್ 3, 4 ಮತ್ತು 5ರ ಅಡಿ ಜಾರಿ ನಿರ್ದೇಶನಾಲಯದ ನಿರ್ದೇಶಕರು ದೂರು ದಾಖಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13ರ ಅಡಿ ಅಪರಾಧ ಪರಿಗಣಿಸಬೇಕಾದರೆ ಸರ್ಕಾರಿ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 19 ಮತ್ತು ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಇದಲ್ಲದೇ, ದೂರುದಾರರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ ಅಥವಾ ಪೊಲೀಸರು ದೂರಿಗೆ ಸ್ಪಂದಿಸದಿದ್ದಾಗ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಆನಂತರ ನ್ಯಾಯಾಲಯದ ಮೆಟ್ಟಿಲೇರಿಲ್ಲ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಗುಳೇದ್ ಅವರ ವಿರುದ್ಧ ತನಿಖೆ ನಡೆಸಿದ್ದು, ಅವರ ವಿರುದ್ಧ ಯಾವುದೇ ವಿಚಾರಗಳು ಕಂಡುಬರದ ಹಿನ್ನೆಲೆಯಲ್ಲಿ ವಿಚಾರಣೆ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ ಎಂದಬುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ಪತಿಯ ವಿರುದ್ಧ ಪತ್ನಿಯು ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಆರೋಪ ಮಾಡಿ 2018ರ ಜುಲೈ 17ರಂದು ದೂರು ದಾಖಲಿಸಿದ್ದು, ಅದು ತನಿಖಾ ಹಂತದಲ್ಲಿದೆ. ಇದಲ್ಲದೇ, ಪತಿಯ ವಿರುದ್ಧ ವಿಚ್ಛೇದನ ಕೋರಿ ಪತ್ನಿಯು 2018ರ ಆಗಸ್ಟ್ 28ರಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಪ್ರಕರಣದಲ್ಲಿ ವಿಚ್ಛೇದನ ನೀಡುವಂತೆ ಪತಿಯೂ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಪ್ರಕರಣವೂ ನ್ಯಾಯಾಲಯದ ಮುಂದಿದೆ. ಪತಿಯ ವಿರುದ್ಧ ಪತ್ನಿಯೇ ದೂರು ದಾಖಲಿಸಿರುವಾಗ ಗುಳೇದ್ ವಿರುದ್ಧ ಸಾಕ್ಷ್ಯ ನುಡಿಯುವುದು ಅಥವಾ ಹೇಳಿಕೆ ದಾಖಲಿಸುವ ಸನ್ನಿವೇಶ ಸೃಷ್ಟಿಯಾಗದು. ಪತ್ನಿಗೆ ಬೆದರಿಕೆ ಹಾಕಿ ಸ್ವಯಂ ಹೇಳಿಕೆ ನೀಡಲು ನ್ಯಾಯಾಲಯಕ್ಕೆ ಕರೆತಂದಿರುವಂತೆ ಕಾಣುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಒಂದು ಪ್ರಕರಣದಲ್ಲಿ ಗುಳೇದ್ ವಿರುದ್ಧ ಪತ್ನಿಯೇ ಹೇಳಿಕೆ ನೀಡಿದ್ದಾಳೆ ಎಂದು ಪತಿ ಹೇಳುತ್ತಿದ್ದಾರೆ. ಇನ್ನೊಂದು ಖಾಸಗಿ ದೂರಿನಲ್ಲಿ ಪತ್ನಿ ಮತ್ತು ಗುಳೇದ್ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಪತ್ನಿಯೇ ವರದಕ್ಷಿಣೆ ಕಿರುಕುಳ ಮತ್ತು ವಿಚ್ಚೇದನ ದೂರು ದಾಖಲಿಸಿದ್ದಾರೆ. ಇದರಿಂದ ಹೊರಬರಲು ಪತಿಯು ಗುಳೇದ್ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಿಸಿರುವಂತಿದೆ. ಹೀಗಾಗಿ, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದಿರುವ ಪ್ರಕರಣದಲ್ಲಿ ವಿಚಾರಾಣಾಧೀನ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವುದು ಮತ್ತು ಸ್ವಯಂ ಹೇಳಿಕೆ ದಾಖಲಿಸಲು ದಿನಾಂಕ ನಿಗದಿಪಡಿಸಿರುವುದು ಕಾನೂನುಬಾಹಿರ. ಹೀಗಾಗಿ, ಎರಡೂ ಪ್ರಕರಣಗಳನ್ನು ವಜಾ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ದಾವಣಗೆರೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭೀಮಾಶಂಕರ್ ಗುಳೇದ್ ಅವರು ಕಾರ್ಯಕ್ರಮವೊಂದಕ್ಕೆ ಫೋಟೊಗ್ರಾಫರ್ ಸೇವೆ ಕೋರಲು ದೂರುದಾರ ಎಂಜಿನಿಯರ್ ಸ್ಥಾಪಿಸಿದ್ದ ಸ್ಟುಡಿಯೊಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಟುಡಿಯೊದ ಸಹ ಪಾಲುದಾರೆಯಾದ ಪತ್ನಿ ಜೊತೆಗೆ ಗುಳೇದ್ ಅವರ ಸ್ನೇಹ ಬೆಳೆಸಿ, ಆನಂತರ ಇಬ್ಬರು ಲೈಂಗಿಕ ಸಂಬಂಧ ಬೆಳೆಸಿದ್ದರು. ಇದನ್ನು ಪತ್ನಿಯ ಮೊಬೈಲ್‌ನಲ್ಲಿ ಗುಳೇದ್ ಸೆರೆ ಹಿಡಿದಿದ್ದರು. ಇದು ತನಗೆ ಗೊತ್ತಾಗಿತ್ತು ಎಂದು ದೂರುದಾರ ಪತಿ ಆರೋಪಿಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಇನ್ನೊಂದು ಪ್ರಕರಣದಲ್ಲಿ, ಗುಳೇದ್ ಮತ್ತು ಇನ್ನಿತರ ಮೂವರು ಕರ್ನಾಟಕ ರಾಜ್ಯ ಹಣಕಾಸು ಆಯೋಗದ (ಕೆಎಸ್‌ಎಫ್‌ಸಿ) ಇಬ್ಬರು ಅಧಿಕಾರಿಗಳು ಸೇರಿಕೊಂಡು ಪತ್ನಿಗೆ ಸಾಲ ಕೊಡಿಸಿದ್ದರು. ಆ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದು, ಬೇನಾಮಿ ಹೆಸರಿನಲ್ಲಿ ನ್ಯೂ ಪ್ರೊ ಸ್ಟುಡಿಯೊ ಮತ್ತು ಈವೆಂಟ್ಸ್ ಉದ್ಯಮ ಆರಂಭಿಸಿದ್ದರು ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಖಾಸಗಿ ದೂರನ್ನು ಆಧರಿಸಿ ಗುಳೇದ್, ದೂರುದಾರನ ಪತ್ನಿ ಮತ್ತು ಕೆಎಸ್‌ಎಫ್‌ಸಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 7, 11, 12, 13, 1(ಎ), 1(ಬಿ) ಮತ್ತು 13 (2), ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್ 3, 4, 5 ಹಾಗೂ ಬೇನಾಮಿ ಕಾಯಿದೆ ಅಡಿ ಪ್ರಕರಣ ದಾಖಲಿಸಲು ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಎರಡೂ ಪ್ರಕರಣಗಳನ್ನು ಹೈಕೋರ್ಟ್ ವಜಾ ಮಾಡಿದೆ.