ಡಿಮ್ಹಾನ್ಸ್‌ನಲ್ಲಿ ಎಂಆರ್‌ಐ ಯಂತ್ರ ಅಳವಡಿಕೆ, ಮೇಲ್ವಿಚಾರಕಿ ನೇಮಕ; 1995ರ ಮನವಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಕಳೆದ ವಿಚಾರಣೆಯಲ್ಲಿ ಎಂಆರ್‌ಐ ಯಂತ್ರ ಅಳವಡಿಸದಿರುವುದು ಆಘಾತಕಾರಿ ವಿಚಾರ.‌ ನೀವು ಸೂಕ್ಷ್ಮತೆ ಕಳೆದುಕೊಂಡಿದ್ದೀರಿ. ಏ.21ಕ್ಕೆ ವಿಚಾರಣೆ ನಿಗದಿಪಡಿಸಿದ್ದು, ಅದರೊಳಗೆ ಎಂಆರ್‌ಐ ಯಂತ್ರ ಕಾರ್ಯನಿರ್ವಹಿಸಬೇಕು ಎಂದು ಗಡುವು ವಿಧಿಸಿದ್ದ ಪೀಠ.
DIMHANS, MRI Machines and Karnataka HC
DIMHANS, MRI Machines and Karnataka HC

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್‌) ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರ ಅಳವಡಿಕೆ ಮತ್ತು ವೈದ್ಯಕೀಯ ಮೇಲ್ವಿಚಾರಕರನ್ನು ನೇಮಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಪಾಲನೆ ಮಾಡಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಗುರುವಾರ ಕರ್ನಾಟಕ ಹೈಕೋರ್ಟ್‌ ಇತ್ಯರ್ಥಪಡಿಸಿತು.

“ಕಳೆದ ವಿಚಾರಣೆಯಲ್ಲಿ ಎಂಆರ್‌ಐ ಯಂತ್ರ ಅಳವಡಿಸದಿರುವುದು ಅತ್ಯಂತ ಆಘಾತಕಾರಿ ವಿಚಾರ.‌ ನೀವು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೀರಿ. ಏಪ್ರಿಲ್‌ 21ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ. ಅದರೊಳಗೆ ಎಂಆರ್‌ಐ ಯಂತ್ರ ಕಾರ್ಯನಿರ್ವಹಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಪೀಠವು ಗಡುವು ವಿಧಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

1995ರ ಸೆಪ್ಟೆಂಬರ್‌ 5ರಂದು ಸುಪ್ರೀಂ ಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ನ್ಯಾಯಾಲಯದ ಬಹುತೇಕ ಆದೇಶಗಳನ್ನು ಪಾಲಿಸಿರುವುದರಿಂದ ಮನವಿ ವಿಲೇವಾರಿ ಮಾಡಲಾಗಿದೆ ಎಂದಿತು.

Also Read
ಸುಸೌಕರ್ಯವಿರುವ ಕಚೇರಿಯಲ್ಲಿ ಕೂರುವ ನಿಮಗೆ ಜನರ ಸಮಸ್ಯೆ ಅರ್ಥವಾಗದು: ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

“ಡಿಮ್ಹಾನ್ಸ್‌ಗೆ ಎಂಆರ್‌ಐ ಯಂತ್ರದ ಅವಶ್ಯತೆ ಇದ್ದು, ಒಂದಲ್ಲಾ ಒಂದು ಕಾರಣಕ್ಕೆ ಎಂಆರ್‌ಐ ತಪಾಸಣಾ ಯಂತ್ರವನ್ನು ಅಳವಡಿಸಲಾಗಿರಲಿಲ್ಲ. ಏಪ್ರಿಲ್‌ 20ರಂದು ಸಲ್ಲಿಸಲಾಗಿರುವ ಅನುಪಾಲನಾ ವರದಿಯಲ್ಲಿ 1.5 ಟೆಸ್ಲಾ ಎಂಆರ್‌ಐ ಯಂತ್ರವನ್ನು ಅಳವಡಿಸಲಾಗಿದ್ದು, ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಫೋಟೊಗಳು ಹಾಗೂ ಡಾ. ಎನ್‌ ಸರಸ್ವತಿ ಅವರನ್ನು ಡಿಮ್ಹಾನ್ಸ್‌ನ ವೈದ್ಯಕೀಯ ಮೇಲ್ವಿಚಾರಕಿಯನ್ನಾಗಿ ನೇಮಕ ಮಾಡಿರುವ ಆದೇಶವನ್ನು ಅನುಪಾಲನಾ ವರದಿಯ ಜೊತೆ ಸಲ್ಲಿಸಲಾಗಿದೆ. ನ್ಯಾಯಾಲಯದ ಬಹುತೇಕ ಆದೇಶಗಳನ್ನು ಪಾಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಿದ್ದು, ನಿರ್ಧಾರ ಮಾಡಲು ಯಾವುದೇ ವಿಚಾರ ಬಾಕಿ ಉಳಿದಿಲ್ಲವಾದ್ದರಿಂದ ಮನವಿ ಇತ್ಯರ್ಥಪಡಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ನ್ಯಾಯಾಲಯವು ಮನವಿ ಇತ್ಯರ್ಥಪಡಿಸಿರುವುದರಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಅವರ ವೇತನ ತಡೆ ಹಿಡಿಯುವುದಕ್ಕೆ ಸಂಬಂಧಿಸಿದ ಹಿಂದಿನ ಆದೇಶ ಜಾರಿಯಾಗುವುದಿಲ್ಲ ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿತು.

ರಾಜ್ಯ ಸರ್ಕಾರದ ಪರವಾಗಿ ಎಎಜಿ ಧ್ಯಾನ್‌ ಚಿನ್ನಪ್ಪ, ವಿಶೇಷ ವಕೀಲೆ ರೇವತಿ ಆದಿನಾಥ್‌ ನರ್ದೆ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com