ಮುಡಾ ಪ್ರಕರಣ: ಮಧ್ಯಂತರ ಆದೇಶ ವಿಸ್ತರಿಸಿದ ಹೈಕೋರ್ಟ್‌; ರಾಜ್ಯಪಾಲರಿಂದ ಸಹಜ ನ್ಯಾಯತತ್ವದ ಉಲ್ಲಂಘನೆ ಎಂದ ಸಿಂಘ್ವಿ

ದಾವೆಗೆ ಆಕ್ಷೇಪಣೆ ಸಲ್ಲಿಸದ ರಾಜ್ಯಪಾಲರು ಮತ್ತು ಐದನೇ ಪ್ರತಿವಾದಿ/ದೂರುದಾರ ಪ್ರದೀಪ್‌ ಕುಮಾರ್.‌ ಅಬ್ರಹಾಂ, ಸ್ನೇಹಮಯಿ ಕೃಷ್ಣರಿಂದ ಆಕ್ಷೇಪಣೆ ಸಲ್ಲಿಕೆ.
CM Siddaramaiah and Gov Thawar Chand Gehlot, Karnataka HC
CM Siddaramaiah and Gov Thawar Chand Gehlot, Karnataka HC
Published on

“ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಶೇಷ ನ್ಯಾಯಾಲಯವು ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣೆ ಮುಂದೂಡಬೇಕು, ಆತುರದ ಕ್ರಮಕೈಗೊಳ್ಳಬಾರದು” ಎಂದು ಆಗಸ್ಟ್‌ 19ರಂದು ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ವಿಸ್ತರಿಸಿದೆ.

ದೂರುದಾರ ಸಾಮಾಜಿಕ ಕಾರ್ಯಕರ್ತರಾದ ಟಿ ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಜೆಡಿಎಸ್‌ ಕಾನೂನು ಘಟಕದ ಪ್ರದೀಪ್‌ ಕುಮಾರ್‌ ಅವರ ಅರ್ಜಿ ಆಧರಿಸಿ ರಾಜ್ಯಪಾಲರು ನೀಡಿರುವ ಅಭಿಯೋಜನಾ ಮಂಜೂರಾತಿ ವಜಾ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ವಾದ ಆಲಿಸಿದ ನ್ಯಾಯಾಲಯವು ರಾಜ್ಯಪಾಲರ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ದೂರುದಾರರ ಪರ ವಕೀಲರು ಶನಿವಾರ (ಆಗಸ್ಟ್‌ 31) ವಾದ ಮಂಡಿಸಲಿದ್ದಾರೆ. ಅಲ್ಲಿಯವರೆಗೆ ಆಗಸ್ಟ್‌ 19ರ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಆದೇಶಿಸಿತು.

ಇದಕ್ಕೂ ಮುನ್ನ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ದೂರುದಾರ ಮತ್ತು ಮೂರನೇ ಪ್ರತಿವಾದಿಯಾದ ಟಿ ಜೆ ಅಬ್ರಹಾಂ ಅವರು ತಮ್ಮ ಅಫಿಡವಿಟ್‌ನಲ್ಲಿ ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಬೇಕಿಲ್ಲ ಎಂದಿದ್ದಾರೆ. ಇನ್ನೊಬ್ಬ ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಅನುಮತಿ ಕೋರಿರುವ ವಿಚಾರವನ್ನು ನಮ್ಮ ಗಮನಕ್ಕೆ ತರಲಾಗಿಲ್ಲ. ಅಲ್ಲದೇ, ಅಭಿಯೋಜನಾ ಮಂಜೂರಾತಿ ನೀಡುವಾಗ ರಾಜ್ಯಪಾಲರು ಚಲಾಯಿಸಿರುವ ವಿವೇಚನಾಧಿಕಾರದ ಹಿಂದೆ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆ ಕಂಡು ಬರುತ್ತಿಲ್ಲ. ಹೀಗಾಗಿ, ಆಕ್ಷೇಪಾರ್ಹವಾದ ರಾಜ್ಯಪಾಲರ ಅಭಿಯೋಜನಾ ಮಂಜೂರಾತಿ ಆದೇಶವನ್ನು ವಜಾ ಮಾಡಬೇಕು” ಎಂದು ಕೋರಿದರು.

ಮುಂದುವರಿದು, “ಅಬ್ರಹಾಂ ಅವರು ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಬಳಿಕ, ಖಾಸಗಿ ದೂರು ದಾಖಲಿಸುವುದಕ್ಕೂ ಮುನ್ನ ರಾಜ್ಯಪಾಲರಲ್ಲಿ ಅಭಿಯೋಜನಾ ಮಂಜೂರಾತಿ ಕೋರಿದ್ದಾರೆ. ಇನ್ನು, ರಾಜ್ಯಪಾಲರು ಅಬ್ರಹಾಂ ದೂರು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ಆದರೆ, ಅಭಿಯೋಜನಾ ಮಂಜೂರಾತಿ ನೀಡುವಾಗ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ ಕುಮಾರ್‌ ಅವರಿಗೆ ಅನುಮತಿಸಿದ್ದಾರೆ. ಆದರೆ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ ಕುಮಾರ್‌ ಅಭಿಯೋಜನಾ ಮಂಜೂರಾತಿ ಕೋರಿರುವ ವಿಚಾರವನ್ನು ಶೋಕಾಸ್‌ ನೋಟಿಸ್‌ ನೀಡುವ ಮೂಲಕ ತಿಳಿಸಿಲ್ಲ. ಇಲ್ಲಿ ಸಹಜ ನ್ಯಾಯ ತತ್ವವನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ” ಎಂದು ಆಕ್ಷೇಪಿಸಿದರು.

“ಅಬ್ರಹಾಂಗೆ ಅರ್ಜಿ ಹಿಂಪಡೆಯಲು ಸೂಚಿಸಿ, ರಾಜ್ಯಪಾಲರು ದಂಡ ವಿಧಿಸಬೇಕಿತ್ತು. ಈಗ ಈ ನ್ಯಾಯಾಲಯದ ಸಮಯ ವ್ಯರ್ಥ ಮಾಡುತ್ತಿರುವುದಕ್ಕೆ ಅಬ್ರಹಾಂಗೆ ದಂಡ ವಿಧಿಸಬೇಕು” ಎಂದು ಕೋರಿದರು.

ಸುದೀರ್ಘ ಒಂದೂವರೆ ತಾಸು ವಾದಿಸಿದ ಸಿಂಘ್ವಿ “ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಮತ್ತು ಮುರುಗೇಶ್‌ ನಿರಾಣಿ ವಿರುದ್ಧ ಅಭಿಯೋಜನಾ ಮಂಜೂರಾತಿ ಕೋರಿ ಸಲ್ಲಿಕೆಯಾಗಿರುವ ಮನವಿಗಳು ಬಹುಕಾಲದಿಂದ ಬಾಕಿ ಉಳಿದಿದ್ದರೂ ಅವುಗಳನ್ನು ರಾಜ್ಯಪಾಲರು ನಿರ್ಧರಿಸಿಲ್ಲ. ಆದರೆ, ಸಿದ್ದರಾಮಯ್ಯ ಪ್ರಕರಣದಲ್ಲಿ ಸಂಪುಟದ ಸಲಹೆಯನ್ನು ತಳ್ಳಿಹಾಕಿದ್ದಾರೆ. ಆ ಮೂಲಕ ವಿವೇಚನೆಯನ್ನು ಸರಿಯಾದ ಕ್ರಮದಲ್ಲಿ ಬಳಕೆ ಮಾಡಿಲ್ಲ” ಎಂದರು.

ಆರಂಭದಲ್ಲಿ ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಪಿ ಎಸ್‌ ಪ್ರದೀಪ್‌ ಕುಮಾರ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ರಾಜ್ಯಪಾಲರ ಅಭಿಯೋಜನಾ ಮಂಜೂರಾತಿ ಪ್ರಶ್ನಿಸಿರುವ ದಾವೆಯು ಶುದ್ಧ ಕಾನೂನಿನ ಪ್ರಶ್ನೆಯಾಗಿದೆ. ಹೀಗಾಗಿ, ಯಾವುದೇ ಆಕ್ಷೇಪಣೆ ಸಲ್ಲಿಸಲು ಉಳಿದಿಲ್ಲ. ಅರ್ಜಿದಾರರೇ ಎಲ್ಲಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಆದ್ದರಿಂದ, ಯಾವುದೇ ದಾಖಲೆ ಸಲ್ಲಿಸಬೇಕಾದ ಅಗತ್ಯವಿಲ್ಲ” ಎಂದರು.

Also Read
[ಮುಡಾ ಪ್ರಕರಣ] ವಿಶೇಷ ನ್ಯಾಯಾಲಯ ವಿಚಾರಣೆ ಮುಂದೂಡಬೇಕು, ಆತುರದ ನಿರ್ಧಾರ ಕೈಗೊಳ್ಳಬಾರದು: ಹೈಕೋರ್ಟ್‌

ರಾಜ್ಯಪಾಲ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಕಿರಿಯ ವಕೀಲ “ಇಡೀ ಪ್ರಕರಣವು ಶುದ್ಧ ಕಾನೂನಿನ ಪ್ರಶ್ನೆ ಒಳಗೊಂಡಿರುವುದರಿಂದ ಆಕ್ಷೇಪಣೆ ಸಲ್ಲಿಸಬೇಕಾಗುವುದಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಅಡಿ ಅಭಿಯೋಜನಾ ಮುಂಜೂರಾತಿ ನೀಡಿರುವುದಕ್ಕೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಲಿಖಿತ ವಾದಾಂಶ ಸಲ್ಲಿಸಲಾಗುವುದು” ಎಂದರು.

ಸಿಂಘ್ವಿ ಅವರು “ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಆಕ್ಷೇಪಣೆ ಒಂದು ದಿನದ ಹಿಂದೆ ದೊರತಿದೆ. ಅಗತ್ಯಬಿದ್ದರೆ ಪ್ರತ್ಯುತ್ತರ ಸಲ್ಲಿಸುವ ಅವಕಾಶ ಕಲ್ಪಿಸಬೇಕು” ಎಂದರು. ಈ ಎಲ್ಲಾ ಅಂಶಗಳನ್ನು ನ್ಯಾಯಾಲಯವು ಆದೇಶದಲ್ಲಿ ಅಡಕಗೊಳಿಸಿದೆ. 

Kannada Bar & Bench
kannada.barandbench.com