ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಿಸ್ತರಿಸಿದೆ.
ಸಂಘದ ಅಧ್ಯಕ್ಷ ಸ್ಥಾನಕ್ಕೆ ಆರು ವಾರಗಳಲ್ಲಿ ಹೊಸದಾಗಿ ಚುನಾವಣೆ ನಡೆಸುವಂತೆ ಏಪ್ರಿಲ್ 28ರಂದು ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಹಿಂದಿನ ಅಧ್ಯಕ್ಷ ಎನ್ ಎಚ್ ಶ್ರೀಪಾದರಾವ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು “ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಶ್ರೀಪಾದರಾವ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಆ ಚುನಾವಣೆಯನ್ನು ರದ್ದುಪಡಿಸಿರುವ ಏಕಸದಸ್ಯ ಪೀಠವು ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶಿಸಿದೆ. ರಜಾಕಾಲೀನ ವಿಭಾಗೀಯ ಪೀಠವು ಅಧ್ಯಕ್ಷ ಸ್ಥಾನಕ್ಕೆ ಇಂದಿನವರೆಗೆ ಚುನಾವಣೆ ನಡೆಸದಂತೆ ಮಧ್ಯಂತರ ಆದೇಶ ಮಾಡಿದೆ. ಆದ್ದರಿಂದ, ಮೇಲ್ಮನವಿ ಇತ್ಯರ್ಥವಾಗುವವರೆಗೆ ಹಿಂದಿನ ಚುನಾವಣೆ ರದ್ದುಪಡಿಸಿರುವ ಆದೇಶಕ್ಕೆ ತಡೆ ನೀಡಬೇಕು” ಎಂದು ಕೋರಿದರು.
ಕನ್ನಡಲ್ಲಿರುವ ಎಲ್ಲ ದಾಖಲೆಗಳ ಭಾಷಾಂತರ ಪ್ರತಿ ಸಲ್ಲಿಸಿದ ನಂತರ ಮೇಲ್ಮನವಿ ವಿಚಾರಣೆ ನಡೆಸುವುದಾಗಿ ತಿಳಿಸಿದ ಪೀಠವು ಅದಕ್ಕಾಗಿ ಅರ್ಜಿದಾರರಿಗೆ ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿತು. ಅಲ್ಲಿಯ ತನಕ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ಮೇ 17ರಂದು ನೀಡಿರುವ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಎಚ್ ಕೆ ಬಸಪ್ಪ ಹಾಗೂ ಟಿ ಶಿವಶಂಕರಪ್ಪ ಎಂಬುವರನ್ನು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸರ್ಕಾರ ನಾಮನಿರ್ದೇಶನ ಮಾಡಿತ್ತು. ಆರ್ಥಿಕ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಈ ಇಬ್ಬರ ನಾಮ ನಿರ್ದೇಶನ ಅನೂರ್ಜಿತಗೊಳಿಸಿ 2021ರ ಡಿಸೆಂಬರ್ 31ರಂದು ಆದೇಶಿಸಿದ್ದ ಸರ್ಕಾರ, ಅವರ ಸ್ಥಾನಕ್ಕೆ ಹರೀಶ್ ಮತ್ತು ವಿಕ್ರಂ ಪಾಟೀಲ್ ಅವರನ್ನು ನಾಮ ನಿರ್ದೇಶನ ಮಾಡಿತ್ತು.
ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಶಿವಶಂಕರಪ್ಪ ಹಾಗೂ ಬಸಪ್ಪ, ನಾಮ ನಿರ್ದೇಶನ ಅನೂರ್ಜಿತಗೊಳಿಸುವ ಮುನ್ನ ಜಾರಿ ಮಾಡಿದ್ದ ನೋಟಿಸ್‌ಗೆ ಉತ್ತರಿಸಲು ಸೂಕ್ತ ಕಾಲಾವಕಾಶ ನೀಡಿಲ್ಲ. ನಾಮನಿರ್ದೇಶನ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ, ಶ್ರೀಪಾದರಾವ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ಆಕ್ಷೇಪಿಸಿದ್ದರು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಅರ್ಜಿದಾರರನ್ನು ಅನರ್ಹಗೊಳಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿತ್ತಲ್ಲದೆ, ಮುಂದಿನ ಆರು ವಾರಗಳಲ್ಲಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀಪಾದರಾವ್ ಮೇಲ್ಮನವಿ ಸಲ್ಲಿಸಿದ್ದಾರೆ.