ಅಪರಾಧಿಗಳಿಗೆ ಕಾನೂನು ಪರಿಣಾಮಗಳನ್ನು ವಿವರಿಸುವುದು ಕಡ್ಡಾಯಗೊಳಿಸಿ ಪೆರೋಲ್‌ ಮಾರ್ಗಸೂಚಿ ರೂಪಿಸಿದ ಹೈಕೋರ್ಟ್‌

ಬಂಧೀಖಾನೆ ಇಲಾಖೆಯು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೂಡಿ ಮಾಹಿತಿಯನ್ನು ಒಳಗೊಂಡ ಕರಪತ್ರ ಅಥವಾ ಭಿತ್ತಿಪತ್ರಗಳನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಮುದ್ರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
prisoners in jail
prisoners in jail
Published on

ಪೆರೋಲ್‌ ಆದೇಶ ಜಾರಿಗೊಳಿಸುವಾಗ ಅಥವಾ ಮಂಜೂರು ಮಾಡುವಾಗ ಜೈಲು ಪ್ರಾಧಿಕಾರ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ರೂಪಿಸಿದೆ.

ಅಪರಾಧಿಗಳಿಗೆ ಕಾನೂನಿನ ಪರಿಣಾಮ ಮತ್ತು ಪೆರೋಲ್‌ ಷರತ್ತುಗಳನ್ನು ಉಲ್ಲಂಘಿಸಿದರೆ ಎದುರಿಸಬೇಕಾದ ಗಂಭೀರ ಪರಿಣಾಮಗಳ ಕುರಿತು ಜೈಲು ಪ್ರಾಧಿಕಾರವು ಅರಿವು ಮೂಡಿಸಬೇಕು ಎಂದು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠವು ನಿರ್ದೇಶಿಸಿದೆ.

Justice Sachin Shankar Magadum
Justice Sachin Shankar Magadum

ಹಲವು ಪ್ರಕರಣಗಳಲ್ಲಿ ಪೆರೋಲ್‌ ಮೇಲೆ ಬಿಡುಗಡೆಯಾದ ಅಪರಾಧಿಗಳು ಆನಂತರ ಶರಣಾಗುವುದಕ್ಕೆ ಸಂಬಂಧಿಸಿದಂತೆ ವಿಧಿಸಿರುವ ಕಠಿಣ ಷರತ್ತುಗಳ ಬಗ್ಗೆ ಅರಿವಿಲ್ಲದೇ ಅದನ್ನು ಪಾಲಿಸದಿದ್ದರೆ ಮತ್ತೊಂದು ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ಎದುರಿಸಬೇಕಾಗಿರುವುದನ್ನು ಪರಿಗಣಿಸಿ ನ್ಯಾಯಾಲಯವು ಮಾರ್ಗಸೂಚಿ ರೂಪಿಸಿದೆ.

“ಪೆರೋಲ್‌ ಮೇಲೆ ಅಪರಾಧಿಗಳನ್ನು ಬಿಡುಗಡೆ ಮಾಡುವಾಗ ನಿಯೋಜಿತ ಮೇಲ್ವಿಚಾರಕರು ಅಥವಾ ಪೆರೋಲ್‌ ಜಾರಿ ಅಧಿಕಾರಿಯು ಕಡ್ಡಾಯವಾಗಿ ಅಪರಾಧಿಗೆ ಆತನಿಗೆ ಅರ್ಥವಾಗುವ ಭಾಷೆಯಲ್ಲಿ ಮರಳಿ ಶರಣಾಗದಿದ್ದರೆ ಕರ್ನಾಟಕ ಜೈಲು ತಿದ್ದುಪಡಿ ಕಾಯಿದೆ ಸೆಕ್ಷನ್‌ 58ರ ಅಡಿ ಶಿಕ್ಷೆ ಗುರಿಯಾಗುವುದೂ ಸೇರಿ ಪರಿಣಾಮಗಳ ಬಗ್ಗೆ ವಿವರಿಸಬೇಕು. ಅಲ್ಲದೇ, ಪೆರೋಲ್‌ ಷರತ್ತುಗಳನ್ನು ಉಲ್ಲಂಘಿಸಿದರೆ ಆನಂತರ ಕಾನೂನು ಪ್ರಕ್ರಿಯೆಯ ಪರಿಣಾಮಗಳನ್ನು ಎದುರಿಸುವುದಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಂದ ಲಿಖಿತ ಮುಚ್ಚಳಿಕೆ ಪಡೆಯಬೇಕು. ಪೆರೋಲ್‌ ಆದೇಶದ ಜೊತೆಗೆ ಕಾಯಿದೆ ಸೆಕ್ಷನ್‌ 58 ಕ್ಕೆ ಸಂಬಂಧಿತ ಅಧಿಕಾರಿಯ ಸಹಿ ಹಾಕಿಸಿ ಅದರ ಪ್ರತಿಯನ್ನು ಅವರಿಗೆ ಒದಗಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಬಂಧೀಖಾನೆ ಇಲಾಖೆಯು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೂಡಿ ಮಾಹಿತಿಯನ್ನು ಒಳಗೊಂಡ ಕರಪತ್ರ ಅಥವಾ ಭಿತ್ತಿಪತ್ರಗಳನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಮುದ್ರಿಸಬೇಕು. ಇದರಲ್ಲಿ ಅಪರಾಧಿಗಳ ಹಕ್ಕು, ಕರ್ತವ್ಯ ಮತ್ತು ಹೊಣೆಗಾರಿಕೆಗಳ ಬಗ್ಗೆ ಮಾಹಿತಿ ಒಳಗೊಂಡಿರಬೇಕು. ಇದರಲ್ಲಿ ಪೆರೋಲ್‌ ನಿಯಮಗಳನ್ನು ಉಲ್ಲಂಘಿಸಿದರೆ ಎದುರಿಸಬೇಕಾದ ಪರಿಣಾಮಗಳ ಮಾಹಿತಿಯನ್ನು ಒಳಗೊಂಡಿರಬೇಕು. ಇದನ್ನು ಎಲ್ಲಾ ಜೈಲುಗಳು ಮತ್ತು ಅಲ್ಲಿನ ಕೈದಿಗಳು ಹಾಗೂ ಅವರ ಕುಟುಂಬಸ್ಥರಿಗೆ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪೆರೋಲ್‌ ಷರತ್ತುಗಳ ಬಗ್ಗೆ ಎಲ್ಲಾ ಅಪರಾಧಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳು ಅರಿವು ಮೂಡಿಸಬೇಕು. ಇದನ್ನು ಉಲ್ಲಂಘಿಸಿದರೆ ಎದುರಾಗುವ ಕಾನೂನು ಪರಿಣಾಮಗಳ ಕುರಿತು ಜೈಲಿನ ವ್ಯಾಪ್ತಿಯಲ್ಲಿ ಅರಿವು ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಬಾಗಲಕೋಟೆಯ ರೇವೂರದ 47 ವರ್ಷದ ನಿವಾಸಿಯೊಬ್ಬರಿಗೆ 2022ರ ಮಾರ್ಚ್‌ 9ರಂದು 30 ದಿನಗಳ ಪೆರೋಲ್‌ ಮಂಜೂರು ಮಾಡಲಾಗಿತ್ತು. ಆನಂತರ ಅದನ್ನು 60 ದಿನಗಳಿಗೆ ವಿಸ್ತರಿಸಲಾಗಿತ್ತು. ನಿರ್ದಿಷ್ಟ ಪೆರೋಲ್‌ ಅವಧಿ ಮುಗಿದ ಮೇಲೂ ಅವರ ಶರಣಾಗದಿದ್ದರಿಂದ ಅವರನ್ನು ಬಂಧಿಸಿ ಕರೆತರಲಾಗಿತ್ತು. ಆನಂತರ ಕರ್ನಾಟಕ ಜೈಲುಗಳ ತಿದ್ದುಪಡಿ ಕಾಯಿದೆ ಸೆಕ್ಷನ್‌ 58ರ ಅಡಿ ಎರಡು ವರ್ಷ ಗರಿಷ್ಠ ಶಿಕ್ಷೆ 1,000 ರೂಪಾಯಿ ದಂಡ ವಿಧಿಸಲಾಗಿತ್ತು. ಕೊರೊನಾ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಉಲ್ಬಣವಾಗಿದ್ದರಿಂದ ಶರಣಾಗಲು ಸಾಧ್ಯವಾಗಿರಲಿಲ್ಲ ಎಂದಿದ್ದರು.

ಆದರೆ, ಪೀಠವು “ಅರ್ಜಿದಾರೆಯು ತನಗೆ ಗಂಭೀರ ಆರೋಗ್ಯ ಸಮಸ್ಯೆ ಇತ್ತು ಎಂಬುದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟಿರಲಿಲ್ಲ ಎಂಬುದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಿದೆ” ಎಂದಿದೆ.

ಪ್ರಕರಣದ ಹಿನ್ನೆಲೆ: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ–2012) ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಬಾಗಲಕೋಟೆ ಜಿಲ್ಲೆಯ 47 ವರ್ಷದ ಅಪರಾಧಿ ಮಹಿಳೆ 2022ರ ಮಾರ್ಚ್ 9ರಂದು ಪೆರೋಲ್‌ ಮೇಲೆ ಒಂದು ತಿಂಗಳ ಅವಧಿಗೆ ಬಿಡುಗಡೆಯಾಗಿದ್ದರು. ನಂತರ ಪೆರೋಲ್‌ ಅವಧಿಯನ್ನು ‍ಪುನಾ 30 ದಿನಗಳವರೆಗೆ ವಿಸ್ತರಿಸಲಾಗಿತ್ತು.

ಇದರನ್ವಯ ಮಹಿಳೆ 2022ರ ಜೂನ್‌ 8ರಂದು ವಿಜಯಪುರ ಜಿಲ್ಲಾ ಕಾರಾಗೃಹಕ್ಕೆ ಶರಣಾಗಬೇಕಾಗಿತ್ತು. ಆದರೆ, ಶರಣಾಗದೆ ಪೆರೋಲ್‌ ಷರತ್ತುಗಳನ್ನು ಉಲ್ಲಂಘಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ 2023ರ ಆಗಸ್ಟ್‌ನಲ್ಲಿ ಮಹಿಳೆಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು ₹1 ಸಾವಿರ ದಂಡ ವಿಧಿಸಿತ್ತು.

ಈ ಆದೇಶವನ್ನು ವಿಜಯಪುರ ಜಿಲ್ಲಾ 4ನೇ ಸತ್ರ ನ್ಯಾಯಾಲಯ ಎತ್ತಿಹಿಡಿದಿತ್ತು. ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಪರಾಧಿ ಮಹಿಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com