ಅರೆ ನ್ಯಾಯಿಕ ಪ್ರಕರಣಗಳ ವಿಚಾರಣೆ, ಆದೇಶ, ತೀರ್ಪನ್ನು ವೆಬ್‌ಹೋಸ್ಟ್‌ ಮಾಡಲು ಬಿಬಿಎಂಪಿಗೆ ಹೈಕೋರ್ಟ್‌ ತಿಂಗಳ ಗಡುವು

ಮುಂದಿನ ವಿಚಾರಣೆಯ ದಿನಾಂಕ ನಿಗದಿ ಮಾಡದಿದ್ದರೆ, ಎಲ್ಲಾ ಪಕ್ಷಕಾರರಿಗೂ ಮುಂದಿನ ವಿಚಾರಣೆಯ ದಿನಾಂಕದ ಮಾಹಿತಿಯನ್ನು ರಿಜಿಸ್ಟರ್‌ ಪೋಸ್ಟ್‌ ಮೂಲಕ ತಿಳಿಸಬೇಕು ಎಂದಿರುವ ನ್ಯಾಯಾಲಯ.
BBMP and Karnataka HC
BBMP and Karnataka HC

ಪ್ರತಿದಿನ ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳು ಹಾಗೂ ಕಂದಾಯ ಇಲಾಖೆಯು ಕಂದಾಯ ಪ್ರಕರಣಗಳ ವಿಚಾರಣೆಯ ದಿನಾಂಕ, ಆದೇಶ, ಕಾಸ್‌ಲಿಸ್ಟ್‌ (ಪ್ರಕರಣಗಳ ಪಟ್ಟಿ), ತೀರ್ಪುಗಳನ್ನು ವೆಬ್‌ಹೋಸ್ಟ್‌ ಮಾಡುತ್ತಿರುವ ರೀತಿಯಲ್ಲಿ ಬಿಬಿಎಂಪಿಯು ಕೂಡ ಇ-ಆಡಳಿತ ಇಲಾಖೆಯ ಜೊತೆಗೂಡಿ ಇಂತಹ ವ್ಯವಸ್ಥೆ ರೂಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಸದಾಶಿವನಗರದ ಎಂ ಉಮಾದೇವಿ ಎಂಬವರು ಅರೆ ನ್ಯಾಯಿಕ ಪ್ರಾಧಿಕಾರಿ ಬಿಬಿಎಂಪಿಯ ಜಂಟಿ ಆಯುಕ್ತರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮಗೆ ಮಾಹಿತಿ ನೀಡದೇ ಆದೇಶ ಮಾಡಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋಂವಿದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಅರೆ ನ್ಯಾಯಿಕ ಪ್ರಾಧಿಕಾರಗಳ ಮುಂದೆ ನಡೆಯುವ ಪ್ರಕರಣಗಳ ಆದೇಶಗಳು, ದಿನನಿತ್ಯ ಆದೇಶಗಳು, ತೀರ್ಪುಗಳನ್ನು ಬಿಬಿಎಂಪಿ ಅಪ್‌ಲೋಡ್‌ ಮಾಡುತ್ತಿಲ್ಲ. ಇದಕ್ಕಾಗಿ, ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳು ಇ-ಕೋರ್ಟ್ಸ್‌ ಪ್ರಾಜೆಕ್ಟ್‌ ಮೂಲಕ ಹಾಗೆಯೇ ಕಂದಾಯ ಇಲಾಖೆಯು ರೆವಿನ್ಯೂ ಕೋರ್ಟ್‌ ಕೇಸಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (rccms.karnataka.gov.in) ಮೂಲಕ ಎಲ್ಲಾ ಪ್ರಕರಣಗಳ ಕಾಸ್‌ಲಿಸ್ಟ್‌, ಪ್ರತಿ ಪ್ರಕರಣದಲ್ಲಿ ಪ್ರತಿದಿನ ಮಾಡಿದ ಆದೇಶಗಳನ್ನು ವೆಬ್‌ವೋಸ್ಟ್‌ ಮಾಡುತ್ತಿವೆ. ಇದೇ ಮಾದರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಜೊತೆಗೂಡಿ ವೆಬ್‌ಹೋಸ್ಟ್‌ ಮಾಡಲು ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಈ ಆದೇಶ ತಲುಪಿದ ದಿನದಿಂದ ನಾಲ್ಕು ವಾರಗಳಲ್ಲಿ ಈ ಸಂಬಂಧ ವಿಸ್ತೃತ ಯೋಜನಾ ವರದಿ ಹಾಗೂ ಜಾರಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್‌ ಗಡುವು ವಿಧಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮಧುಕರ್‌ ಎಂ. ದೇಶಪಾಂಡೆ ಅವರು ತಮ್ಮ ಕಕ್ಷಿದಾರರಿಗೆ ಮಾಹಿತಿ ನೀಡದೇ ಅರೆ ನ್ಯಾಯಿಕ ಅಧಿಕಾರಿಯು ಪ್ರಕರಣದ ವಿಚಾರಣೆ ನಡೆಸಿ, ಆದೇಶ ಮಾಡಿದ್ದಾರೆ. 2023ರ ಮೇ 26ರಂದು ತಮ್ಮ ಕಕ್ಷಿದಾರರಿಗೆ ಪ್ರಕರಣದ ವಿಚಾರಣೆ ಇದೆ ಎಂದು ತಿಳಿದಿದ್ದರೆ ಅವರು ವಾದಿಸುತ್ತಿದ್ದರು. ಇದರಿಂದ ಸೂಕ್ತ ರೀತಿಯಲ್ಲಿ ಪ್ರಕರಣ ನಿರ್ಧರಿಸಲು ಪೀಠಾಸೀನ (ಪ್ರಿಸೈಡಿಂಗ್‌ ಆಫೀಸರ್)‌ ಅಧಿಕಾರಿಗೆ ನೆರವಾಗುತ್ತಿತ್ತು. ಈ ಹೀಗಾಗಿ, ಅರೆ ನ್ಯಾಯಿಕ ಪ್ರಾಧಿಕಾರ ಮಾಡಿರುವ ಆದೇಶವನ್ನು ರದ್ದು ಮಾಡಬೇಕು ಎಂದು ಅವರು ಕೋರಿದ್ದರು.

ಅರೆನ್ಯಾಯಿಕ ಅಧಿಕಾರಿಯು ಪ್ರಕರಣದ ವಿಚಾರಣೆಯನ್ನು ಮುಂದೂಡಿದರೆ ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಬೇಕು. ಮುಂದಿನ ವಿಚಾರಣೆಯ ದಿನಾಂಕ ನಿಗದಿ ಮಾಡದಿದ್ದರೆ, ಎಲ್ಲಾ ಪಕ್ಷಕಾರರಿಗೂ ಮುಂದಿನ ವಿಚಾರಣೆಯ ದಿನಾಂಕದ ಮಾಹಿತಿಯನ್ನು ರಿಜಿಸ್ಟರ್‌ ಪೋಸ್ಟ್‌ ಮೂಲಕ ತಿಳಿಸಬೇಕು. ಇದನ್ನು ಮಾಡದೇ ಇರುವುದರಿಂದ ಆದೇಶ ಬದಿಗೆ ಸರಿಸಲು ಅರ್ಹವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Attachment
PDF
Umadevi M Vs BBMP.pdf
Preview
Kannada Bar & Bench
kannada.barandbench.com