13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಕೆಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಹಸಿರು ನಿಶಾನೆ

ರಾಜ್ಯದಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಇದರಿಂದ ಶಿಕ್ಷಕರ ಕೊರತೆ ಉಂಟಾಗಿ, 6 ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದಿರುವ ನ್ಯಾಯಾಲಯ.
Chief Justice P B Varale and Justice M G S Kamal
Chief Justice P B Varale and Justice M G S Kamal

ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ 13,352 ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ಹಸಿರು ನಿಶಾನೆ ತೋರಿದೆ.

ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂಬಂಧ 2022ರ ನವೆಂಬರ್‌ 18ರಂದು ಪ್ರಕಟಿಸಿದ್ದ 1:1 ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸಿ ಹೈಕೋರ್ಟ್‌ ಏಕಸದಸ್ಯ ಪೀಠದ ತೀರ್ಪನ್ನು ರದ್ದುಪಡಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

ರಾಜ್ಯ ಸರ್ಕಾರವು 2023ರ ಜೂನ್‌ 8ರಂದು ಸಿದ್ಧಪಡಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 13,352 ಮಂದಿ ಆಯ್ಕೆ ಅಭ್ಯರ್ಥಿಗಳಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು ಎಂದಿದೆ.

ರಾಜ್ಯದಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಇದರಿಂದ ಶಿಕ್ಷಕರ ಕೊರತೆ ಉಂಟಾಗಿ, 6 ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಹುದ್ದೆಗಳ ಭರ್ತಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅಗತ್ಯತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿ ಪರಿಗಣಿಸಿ, 2023ರ ಜೂನ್‌ 8ರಂದು ಸಿದ್ಧಪಡಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಾರ 13,352 ಮಂದಿ ಆಯ್ಕೆಯಾದ ಅಭ್ಯರ್ಥಿಗಳಿಂದ ಶಿಕ್ಷಕರನ್ನು ನೇಮಕಾತಿಯನ್ನು ರಾಜ್ಯ ಸರ್ಕಾರ ಮಾಡಬಹುದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ಪತಿ ಮತ್ತು ಪೋಷಕರ ಆದಾಯ ಪ್ರಮಾಣ ಪತ್ರವನ್ನು ಮತ್ತು ಮೆರಿಟ್‌/ರೋಸ್ಟರ್ ಅನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆಪಟ್ಟಿ ಸಿದ್ಧಪಡಿಸಿ 2023ರ ಜೂನ್‌ 6ರಂದು ಪ್ರಕಟಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ. ಅದರಂತೆ ನೇಮಕಾತಿಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿದವರ ಆಯ್ಕೆ ಅಂತಿಮಗೊಳಿಸಬಹುದಾಗಿದೆ. ಆದರೆ, ಸರ್ಕಾರದ ಅಧಿಸೂಚನೆಯಲ್ಲಿ ಹೇಳಿದಂತೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ. ನೊಂದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆ ಅರ್ಜಿ ದಾವೆ ಇತ್ಯರ್ಥವಾಗುವವರೆಗೆ ವಿವಾದಿತ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಹಾಗೆಯೇ, 2023ರ ಜೂನ್‌ 8ರಂದು ಪ್ರಕಟಿಸಿದ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ 451 ಅಭ್ಯರ್ಥಿಗಳನ್ನು ಹೊರಗಿಡಲಾಗಿದೆ. ಅದು ಕೇವಲ ಅರ್ಹತೆಯ ಆಧಾರದ ಮೇಲೆ 451 ಅಭ್ಯರ್ಥಿಗಳ ಹೆಸರನ್ನು ಹೊರಗಿಡಲಾಗಿದೆ ಎಂದು ಹೇಳಲಾಗಿದೆ. ಅದರಂತೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒದಗಿಸದ ಅಭ್ಯರ್ಥಿಗಳ ಅರ್ಹತೆ ಅಮಾನ್ಯವಾಗಲಿದೆ. ಅಂತಹ ಹುದ್ದೆಗಳನ್ನು ಅರ್ಹತೆಯ ಮೇಲೆ ಹೊರಗಿಡಲಾದ ಅಭ್ಯರ್ಥಿಗಳು ಮತ್ತು ನಿಗದಿತ ನಮೂನೆಯಲ್ಲಿ ಜಾತಿ-ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಂದ ಭರ್ತಿ ಮಾಡಬಹುದು. ಪ್ರಸ್ತುತ ವ್ಯಾಜ್ಯದಿಂದ ರಾಜ್ಯದಾದ್ಯಂತ 6 ರಿಂದ 8 ನೇ ತರಗತಿಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇಂತಹ ವಿಚಿತ್ರವಾದ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿಬಂಧನೆಯೊಂದಿಗೆ ನೇಮಕ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

Also Read
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಶಿಕ್ಷಣ ಇಲಾಖೆ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ ಖಾಲಿಯಿದ್ದ ಸುಮಾರು 15 ಸಾವಿರ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ(6-8 ತರಗತಿ) ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಫೆಬ್ರವರಿ 22ರಂದು ಅಧಿಸೂಚನೆ ಪ್ರಕಟಿಸಿತ್ತು. ಉಡುಪಿಯ ಯಡತಾಡಿ ಗ್ರಾಮದ ಅನಿತಾ ಸೇರಿ 40ಕ್ಕೂ ಅಧಿಕ ಮಹಿಳಾ ಹುದ್ದೆ ಆಕಾಂಕ್ಷಿಗಳು ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ಲಿಖಿತ ಪರೀಕ್ಷೆಗೆ ಹಾಜರಾಗಿ ಉತ್ತಮ ರ್ಯಾಂಕ್‌ ಗಳಿಸಿದ್ದರು. ಅಲ್ಲದೇ, 1:3 ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ದಾಖಲೆಗಳ ಪರಿಶೀಲನೆಗೆ ಅವರು ಅರ್ಹರಾಗಿದ್ದರು. 2022ರ ನವೆಂಬರ್‌ 18ರಂದು ಪ್ರಕಟವಾದ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿರಲಿಲ್ಲ. ಇದರಿಂದ ಆ ಪಟ್ಟಿಯನ್ನು ಪ್ರಶ್ನಿಸಿ ಅನಿತಾ ಸೇರಿ 40 ಮಂದಿ ಅಧಿಕ ಮಹಿಳಾ ಆಕಾಂಕ್ಷಿಗಳು ತಾತ್ಕಾಲಿಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅವರ ಅರ್ಜಿಗಳನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ತಾತ್ಕಾಲಿಕ ಪಟ್ಟಿಯನ್ನು ರದ್ದುಪಡಿತ್ತು. ಅರ್ಜಿದಾರ ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸುವಂತೆ ನಿರ್ದೇಶಿಸಿತ್ತು. ಈ ಆದೇಶದಿಂದ ನೇಮಕಾತಿಯ ಪರಿಗಣನೆಗೆ ಒಳಪಡದ ಹಾಲಿ ಮೇಲ್ಮನವಿದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

Also Read
ವಿಶೇಷ ಕಲಾಪ: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕರಣದ ವಿಚಾರಣೆ ಸೆ. 8ಕ್ಕೆ ಮುಂದೂಡಿಕೆ

ಹಿಂದುಳಿದ ವರ್ಗಕ್ಕೆ ಪರಿಗಣಿಸುವಾಗ ಪತಿಯ ಆದಾಯ ಆಧಾರವಾಗಿತ್ತು. ಮಹಿಳೆ ಆದಾಯ ಪ್ರಮಾಣಪತ್ರಕ್ಕೆ ಪತಿಯ ಆದಾಯ ಪರಿಗಣಿಸಲಾಗುತ್ತಿತ್ತು. ರಾಜ್ಯ ಸರ್ಕಾರದ ಈ ನೀತಿಯನ್ನು ಏಕಸದಸ್ಯ ಪೀಠ ಅಮಾನ್ಯಗೊಳಿಸಿ, ಅಭ್ಯರ್ಥಿ ತಂದೆಯ ಜಾತಿ-ಆದಾಯ ಪ್ರಮಾಣಪತ್ರ ಪರಿಗಣಿಸಿ ಹೊಸದಾಗಿ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಸೂಚಿಸಿರುವುದು ಸರಿಯಿಲ್ಲ. ಹೀಗಾಗಿ, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ ಹುಯಿಲಗೋಳ, ಮೇಲ್ಮನವಿದಾರರ ಪರವಾಗಿ ಹಿರಿಯ ವಕೀಲರಾದ ವಿ ಲಕ್ಷ್ಮಿನಾರಾಯಣ, ಕೆ ಎನ್‌ ಫಣೀಂದ್ರ, ವಕೀಲರಾದ ಎಲ್‌ ಅನುಷಾ, ಕೆ ಆನಂದ್‌, ಲತಾ ಶೆಟ್ಟಿ, ಮಮತಾ ಶೆಟ್ಟಿ, ಬಿ ರಮೇಶ ವಾದಿಸಿದ್ದರು.

ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲ ಪಿ ಎಸ್‌ ರಾಜಗೋಪಾಲ, ವಕೀಲ ಮಿಥುನ್‌ ಜಿ ಎ ವಾದ ಮಂಡಿಸಿದ್ದರು.

Attachment
PDF
Narendra Babu G V & others Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com