ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸಿ, ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ರಜಾದಿನವಾದ ಭಾನುವಾರ ವಿಶೇಷ ಕಲಾಪದಲ್ಲಿ ವಿಚಾರಣೆ ನಡೆಸಿತು.
2023ರ ಜನವರಿ 30ರಂದು ಏಕ ಸದಸ್ಯ ಪೀಠವು ಪ್ರಕಟಿಸಿದ್ದ ಆದೇಶ ಪ್ರಶ್ನಿಸಿ ಜಿ ವಿ ನರೇಂದ್ರ ಬಾಬು ಸೇರಿದಂತೆ 130ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಭಾನುವಾರ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ವಿಶೇಷ ಪೀಠ ವಿಚಾರಣೆ ನಡೆಸಿತು.
ಮೇಲ್ಮನವಿಯನ್ನು ಬೆಳಗ್ಗೆ 11.30ರ ಸುಮಾರಿಗೆ ವಿಚಾರಣೆ ಆರಂಭಿಸಿದ ಪೀಠವು ಎರಡೂವರೆಗೂ ತಾಸಿಗೂ ಅಧಿಕ ಕಾಲ ಮೇಲ್ಮನವಿದಾರರ ಪರ ವಕೀಲರ ಸುಧೀರ್ಘ ವಾದ ಆಲಿಸಿದ ನಂತರ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿತು.