
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಯಾವ ವಿಧಾನ ಪಾಲಿಸಲಾಗುತ್ತಿದೆ ಎಂಬುದೂ ಸೇರಿ ನ್ಯಾಯಾಲಯವು ಈ ಹಿಂದೆ ಮಾಡಿರುವ ಎಲ್ಲಾ ನಿರ್ದೇಶನಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳಲ್ಲಿ ಅನುಪಾಲನಾ ಅಫಿಡವಿಟ್ ಸಲ್ಲಿಸಲು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಕೊನೆಯ ಅವಕಾಶ ಕಲ್ಪಿಸಿದೆ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲರು “ಉಸ್ತುವಾರಿಯಲ್ಲಿದ್ದ ಅಧಿಕಾರಿಗಳು ವರ್ಗಾವಣೆಯಾಗಿದ್ದು, ಹೊಸ ಅಧಿಕಾರಿಗಳು ಬಂದಿದ್ದಾರೆ. ಒಂದು ವಾರದಲ್ಲಿ ವರದಿ ಸಲ್ಲಿಸಲಾಗುವುದು. 30.9.2022ರಲ್ಲಿ ಮಾಡಿರುವ ನಿರ್ದೇಶನಕ್ಕೂ ಅನುಪಾಲನಾ ವರದಿ ಸಲ್ಲಿಸಲಾಗುವುದು” ಎಂದರು.
ಆಗ ಪೀಠವು “ಈ ವಿಚಾರಗಳನ್ನು ಬಿಬಿಎಂಪಿ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕಿತ್ತು. ಇದು ಮುಂದುವರಿಯುತ್ತಲೇ ಇದೆಯಲ್ಲಾ. ದಿನನಿತ್ಯ ಎಷ್ಟು ವರದಿ ಬಂದಿದೆ ಎಂದು ನಾವು ಮಾಧ್ಯಮಗಳಿಂದ ತಿಳಿದುಕೊಳ್ಳುವಂತಾಗಿದೆ. 2022 ಅಥವಾ 23ರ ಆದೇಶ ಮಾತ್ರ ಅಲ್ಲ, ಹಲವು ನಿರ್ದೇಶನಗಳು ನಮಗೆ ಕಾಣುತ್ತಿವೆ” ಎಂದಿತು.
ಹಿರಿಯ ವಕೀಲೆ ಎಸ್ ಆರ್ ಅನುರಾಧಾ ಅವರು “21.1.2024ರ ಆದೇಶವನ್ನು ಸೇರಿಸಬೇಕು. ಯಾವ ವಿಧಾನದಲ್ಲಿ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದೆ ಎಂಬುದನ್ನು ವರದಿಯಲ್ಲಿ ಸೇರ್ಪಡೆ ಮಾಡಬೇಕು” ಎಂದರು.
ಇದನ್ನು ಆಲಿಸಿದ ಪೀಠವು “ಹಿಂದಿನ ನಿರ್ದೇಶನಗಳನ್ನು ಪಾಲಿಸಲು ಬಿಬಿಎಂಪಿಗೆ ಕೊನೆಯ ಅವಕಾಶ ನೀಡಲಾಗಿದೆ. ಮುಂದಿನ ವಿಚಾರಣೆ ವೇಳೆಗೆ ಎಲ್ಲಾ ನಿರ್ದೇಶನಗಳಿಗೂ ಅನುಪಾಲನಾ ಅಫಿಡವಿಟ್ ಸಲ್ಲಿಸಬೇಕು” ಎಂದು ಆದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿತು.