ತಂದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭೂಗತ ಪಾತಕಿ ಬನ್ನಂಜೆ ರಾಜನಿಗೆ 15 ದಿನಗಳ ಪೆರೋಲ್‌

ರಾಜನಿಗೆ ನಾಲ್ವರು ಪೊಲೀಸರು ಮತ್ತು ವಾಹನ ಒಳಗೊಂಡ ಎಸ್ಕಾರ್ಟ್‌ ಕಲ್ಪಿಸಲಾಗಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಬನ್ನಂಜೆ ರಾಜನೇ ಪಾವತಿಸಬೇಕು ಎಂದಿರುವ ನ್ಯಾಯಾಲಯ.
ತಂದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭೂಗತ ಪಾತಕಿ ಬನ್ನಂಜೆ ರಾಜನಿಗೆ 15 ದಿನಗಳ ಪೆರೋಲ್‌
Published on

ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ಬನ್ನಂಜೆ ರಾಜನಿಗೆ ಅವರ ತಂದೆ ಉಡುಪಿಯ ಸುಂದರ ಶೆಟ್ಟಿಗಾರ್‌ ನಿಧನರಾದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮತ್ತು ಆನಂತರದ ವಿಧಿವಿಧಾನದಲ್ಲಿ ಪಾಲ್ಗೊಳ್ಳಲು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಠಿಣ ಷರತ್ತುಗಳನ್ನು ವಿಧಿಸಿ 15 ದಿನಗಳ ಪೆರೋಲ್‌ ಮಂಜೂರು ಮಾಡಿದೆ.

ಬನ್ನಂಜೆ ರಾಜನನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದ ಅವರ ತಂದೆ 86 ವರ್ಷದ ಮಲ್ಪೆಯ ಬಾಪುತೋಟದ ಸುಂದರ ಶೆಟ್ಟಿಗಾರ್‌ ಅವರು ನಿಧನರಾದ ಹಿನ್ನೆಲೆಯಲ್ಲಿ ಅರ್ಜಿದಾರರ ಕೋರಿಕೆಯಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು.

“ಬನ್ನಂಜೆ ರಾಜನಿಗೆ ಅವರು ಬಿಡುಗಡೆಯಾಗುವ ದಿನದಿಂದ ಅನ್ವಯಿಸಿ ಕಠಿಣ ಷರತ್ತುಗಳನ್ನು ವಿಧಿಸಿ ಪೆರೋಲ್‌ ಮಂಜೂರು ಮಾಡಲಾಗಿದೆ. ರಾಜನಿಗೆ ನಾಲ್ವರು ಪೊಲೀಸರು ಮತ್ತು ವಾಹನ ಒಳಗೊಂಡ ಎಸ್ಕಾರ್ಟ್‌ ಕಲ್ಪಿಸಲಾಗಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಬನ್ನಂಜೆ ರಾಜನೇ ಪಾವತಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲ ರಾಹುಲ್‌ ಕಾರ್ಯಪ್ಪ ಅವರು “ಕೋಕಾ ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣಗಳೂ ಸೇರಿದಂತೆ ಬನ್ನಂಜೆ ರಾಜನ ವಿರುದ್ಧ 23 ಪ್ರಕರಣಗಳು ಬಾಕಿ ಇವೆ. ಹಲವು ಪ್ರಕರಣಗಳಲ್ಲಿ ಬನ್ನಂಜೆ ರಾಜ ದೋಷಿ ಎಂದು ಸಾಬೀತಾಗಿದ್ದು, ಉದ್ಯಮಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ನಾಲ್ವರು ಎಸ್ಕಾರ್ಟ್‌ ಪೊಲೀಸ್‌ ಮತ್ತು ವಾಹನಕ್ಕೆ ವೆಚ್ಚ ಪಾವತಿಸಲು ಆದೇಶಿಸಬೇಕು” ಎಂದು ಕೋರಿದರು.

Also Read
ಉದ್ಯಮಿ ಹತ್ಯೆ ಪ್ರಕರಣ: ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬೆಳಗಾವಿಯ ಕೋಕಾ ನ್ಯಾಯಾಲಯ

ಬನ್ನಂಜೆ ರಾಜ ಪರ ವಕೀಲ ಸಿರಾಜುದ್ದೀನ್‌ ಅಹ್ಮದ್‌ ಅವರು “24 ತಾಸಿಗೆ ಮೂವರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುತ್ತಾರೆ. ಇದು ನಮ್ಮ ಮಿತಿಗಿಂತ ಹೆಚ್ಚಿನ ವೆಚ್ಚವಾಗುತ್ತದೆ. ಇದಕ್ಕೆ 50 ಸಾವಿರ ಅಥವಾ ಒಂದು ಲಕ್ಷ ರೂಪಾಯಿ ಪಾವತಿಸುತ್ತೇನೆ. ಬನ್ನಂಜೆ ರಾಜ ಅವರು 15 ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ” ಎಂದರು.

ಆಗ ಪೀಠವು “ಸರ್ಕಾರದ ನಿಯಮದ ಪರ ಎಸ್ಕಾರ್ಟ್‌ಗೆ ಹಣ ಪಾವತಿಸಲೇಬೇಕು. ನಿಮ್ಮ ಇತಿಹಾಸವೇ ಹಾಗಿದೆ. ಏನೂ ಮಾಡಲಾಗದು” ಎಂದು ಮೌಖಿಕವಾಗಿ ಹೇಳಿತು.

Kannada Bar & Bench
kannada.barandbench.com