ಮಗಳ ಮದುವೆ ನಿಶ್ವಯ ಮಾಡಲು ಕೊಲೆ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಏಳು ವರ್ಷಗಳಿಂದ ಜೈಲಿನಲ್ಲಿರುವ ವ್ಯಕ್ತಿಯೊಬ್ಬರಿಗೆ 60 ದಿನಗಳ ಪೆರೋಲ್ ನೀಡಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಮಗಳ ಮದುವೆ ನಿಶ್ಚಯ ಮಾಡಬೇಕಿರುವ ಹಿನ್ನೆಲೆಯಲ್ಲಿ ಪತಿ ಫಹಾದ್‌ಗೆ 90 ದಿನಗಳ ಪೆರೋಲ್ ಮಂಜೂರು ಮಾಡುವಂತೆ ಕೋರಿ ಪತ್ನಿ ಅಪ್ಸಾನಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಫಹಾದ್ ಪೆರೋಲ್ ಅವಧಿಯಲ್ಲಿ ವಾರಕ್ಕೆ ಒಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಪೆರೋಲ್ ಅವಧಿ ಮುಗದಿ ಬಳಿಕ ಆತ ಜೈಲಿಗೆ ಹಿಂದಿರುಗುವಂತೆ ನೋಡಿಕೊಳ್ಳುವುದು ಸ್ಥಳೀಯ ಪೊಲೀಸರ ಜವಾಬ್ದಾರಿ. ಜೈಲಿಗೆ ಹಿಂದಿರುಗುವುದನ್ನು ಖಾತರಿಪಡಿಸಿಕೊಳ್ಳಲು ಜೈಲು ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬೇಕು. ಪೆರೋಲ್ ಅವಧಿಯಲ್ಲಿ ಫಹಾದ್ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಿಸಿಕೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಕೊಲೆ, ಸಾಕ್ಷ್ಯ ನಾಶ ಮತ್ತು ಪ್ರಚೋದನೆ ಪ್ರಕರಣದಲ್ಲಿ ಫಹಾದ್ ವಿರುದ್ಧ 2017ರಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಆತನಿಗೆ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇದರಿಂದ ಕಳೆದ 7 ವರ್ಷಗಳಿಂದ ಫಹಾದ್ ಜೈಲಿನಲ್ಲಿದ್ದಾರೆ. ಈವರೆಗೂ ಒಮ್ಮೆಯೂ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿಲ್ಲ. ಸದ್ಯ ಮಗಳಿಗೆ ಮದುವೆ ನಿಗದಿಯಾಗುವ ಹಿನ್ನೆಲೆಯಲ್ಲಿ ಪೆರೋಲ್ ನೀಡಬೇಕು ಎಂದು ಅರ್ಜಿದಾರೆ ಕೋರಿದ್ದರು. ಸರ್ಕಾರಿ ವಕೀಲರು ಸಹ, ಪೆರೋಲ್ ಮಂಜೂರಾತಿಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ.
ವಾದ-ಪ್ರತಿವಾದ ಆಲಿಸಿದ ಪೀಠವು ಫಹಾದ್‌ಗೆ 60 ದಿನಗಳ ಕಾಲ ಪೆರೋಲ್ ನೀಡಿ ಬಿಡುಗಡೆ ಮಾಡುವಂತೆ ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ನಿರ್ದೇಶಿಸಿದೆ.