

ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷಿಯೊಬ್ಬರಿಗೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇಲೆ 19ನೇ ಆರೋಪಿ ಚನ್ನಕೇಶವ ಟಿಂಗರಿಕರ್‌ಗೆ ಜಾಮೀನು ರದ್ದುಪಡಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಅಧೀನ ನ್ಯಾಯಾಲಯ ಆದೇಶ ಪ್ರಶ್ನಿಸಿ ಚನ್ನಕೇಶವ ಟಿಂಗರಿಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಅರ್ಜಿದಾರ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದ ಆದೇಶ ರದ್ದುಪಡಿಸಿ 2025ರ ಸೆಪ್ಟೆಂಬರ್ 15ರಂದು ನಗರದ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಬದಿಗೆ ಸರಿಸಲಾಗಿದೆ. ಹಿಂದಿನ ಜಾಮೀನು ಮಂಜೂರಾತಿ ಆದೇಶದಲ್ಲಿ ವಿಧಿಸಲಾಗಿರುವ ಷರತ್ತುಗಳ ಮೇಲೆ ಅರ್ಜಿದಾರರನ್ನು ಜಾಮೀನು ಮೇಲೆ ಬಿಡುಗಡೆ ಮಾಡಬೇಕು. ಅರ್ಜಿದಾರರು ಜಾಮೀನು ಷರತ್ತುಗಳ ಉಲ್ಲಂಘನೆ ಮಾಡಿದರೆ, ಜಾಮೀನು ರದ್ದತಿಗಾಗಿ ಪ್ರಾಸಿಕ್ಯೂಷನ್ (ಸಿಬಿಐ) ಮತ್ತೆ ಕೋರಬಹುದು ಎಂದು ಆದೇಶದಲ್ಲಿ ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಜಿಮ್ ನಿಂದ ಹೊರ ಬರುವ ವೇಳೆ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಅದರಂತೆ ತನಿಖೆ ನಡೆಸಿದ್ದ ಸಿಬಿಐ ಆರೋಪಿ ಧಾರವಾಡ ಶಾಸಕ ವಿನಯ ಕುಲಕರ್ಣಿ ಸೇರಿದ ಹಲವು ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.
ಈ ಪ್ರಕರಣದಲ್ಲಿ 19ನೇ ಆರೋಪಿಯಾಗಿರುವ ಅರ್ಜಿದಾರರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಆತನಿಗೆ ಜಾಮೀನು ನೀಡಿ 2021ರ ಅಕ್ಟೋಬರ್ 22ರಂದು ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಜಾಮೀನು ಮಂಜೂರಾತಿ ವೇಳೆ, ಪ್ರಕರಣದ ವಾಸ್ತವಾಂಶಗಳನ್ನು ತಿಳಿದಿರುವ ಯಾವುದೇ ವ್ಯಕ್ತಿಗೆ ನ್ಯಾಯಾಲಯಕ್ಕೆ ಅಥವಾ ತನಿಖಾ ಸಂಸ್ಥೆಗೆ ಅಂತಹ ಸಂಗತಿಗಳನ್ನು ಬಹಿರಂಗಪಡಿಸದಂತೆ ತಡೆಯಲು ಅರ್ಜಿದಾರರು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಚೋದನೆ, ಬೆದರಿಕೆ ಅಥವಾ ಭರವಸೆ ನೀಡಬಾರದು ಎಂದು ಷರತ್ತು ವಿಧಿಸಿತ್ತು.
ಆದರೆ, 2025ರ ಜೂನ್ 25ರಂದು ಪ್ರಕರಣದ 42ನೇ ಸಾಕ್ಷಿ ಶಿವಾನಂದ ಸಲಗತ್ತಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು, ಚನ್ನಕೇಶವ ಟಿಂಗರಿಕರ್ ತಮ್ಮ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಪ್ರಕರಣದಿಂದ ತಾನು ಖುಲಾಸೆಯಾಗಲು ಸಹಾಯವಾಗುವಂತಹ ಕೆಲವೊಂದು ದಾಖಲೆಗಳ ಮೇಲೆ ಸಹಿ ಮಾಡುವಂತೆ ಕೇಳುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದರು.
ಈ ಅಂಶ ಆಧರಿಸಿ ಸಿಬಿಐ ಅಧಿಕಾರಿಗಳು ಮಾಡಿದ್ದ ಮನವಿ ಮೇರೆಗೆ ಚನ್ನಕೇಶವ ಟಿಂಗರಿಕರ್‌ಗೆ ಮಂಜೂರು ಮಾಡಲಾಗಿದ್ದ ಜಾಮೀನನ್ನು ರದ್ದುಪಡಿಸಿ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ರದ್ದುಪಡಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಚನ್ನಕೇಶವ ಟಿಂಗರಿಕರ್ ಹೈಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸಿದ್ದರು.