ಜೋಡಿ ಕೊಲೆ ಪ್ರಕರಣವೊಂದರಲ್ಲಿ 17 ವರ್ಷದ ಆರೋಪಿಯನ್ನು ಗರಿಷ್ಠ ಮೂರು ವರ್ಷದ ಸಜೆಯಾಗುವ ಆರೋಪಕ್ಕೆ ಗುರಿಪಡಿಸಲಾಗಿದ್ದು, ಆತ ಈಗಾಗಲೇ ಎರಡೂವರೆ ವರ್ಷ ಜೈಲಿನಲ್ಲಿ ಕಳೆದಿರುವುದನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಎರಡು ವರ್ಷಗಳ ಹಿಂದೆ ಬಾಲ ನ್ಯಾಯ ಮಂಡಳಿ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಸೆಕ್ಷನ್ 12(1)ರ ಅಡಿ ಆರೋಪಿಗೆ ಬಾಲ ನ್ಯಾಯ ಮಂಡಳಿಯು ಜಾಮೀನು ನಿರಾಕರಿಸಿತ್ತು. ಇದನ್ನು ಸಲ್ಲಿಸಲಾಗಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ಆದೇಶ ಮಾಡಿದೆ.
ಅಪ್ರಾಪ್ತ ವಯಸ್ಕರು ತಪ್ಪಿತಸ್ಥರೆಂದು ಸಾಬೀತಾದರೂ ಗರಿಷ್ಠ 3 ವರ್ಷ ಶಿಕ್ಷೆಯನ್ನಷ್ಟೇ ವಿಧಿಸಬಹುದಾಗಿದೆ. ಅರ್ಜಿದಾರ 17 ವರ್ಷದವನಾಗಿದ್ದ ಸಂದರ್ಭದಲ್ಲಿ ಆತನ ವಿರುದ್ಧ ಕೊಲೆ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೇ ಎರಡೂವರೆ ವರ್ಷ ಸೆರೆವಾಸ ಅನುಭವಿಸಿದ್ದಾನೆ. ಮೇಲಾಗಿ ಪ್ರಕರಣದ ಮೊದಲ ಆರೋಪಿಯೂ ಸೇರಿ ಇತರ ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿದೆ. ಪರಿಸ್ಥಿತಿ ಹೀಗಿರುವಾಗ ಅರ್ಜಿದಾರನಿಗೆ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಬಹುದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆರೋಪಿಯು ಎರಡು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷ್ಯ ನಾಶಪಡಿಸಬಾರದು, ಪೂರ್ವಾನುಮತಿ ಇಲ್ಲದೆ ಬಾಲ ನ್ಯಾಯ ಮಂಡಳಿಯ ವ್ಯಾಪ್ತಿ ಬಿಟ್ಟು ತೆರಳಬಾರದು. ಇಂಥದೇ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ: ಇಬ್ಬರು ವ್ಯಕ್ತಿಗಳ ಕೊಲೆಗೆ ಸಂಬಂಧಿಸಿದಂತೆ ಅರ್ಜಿದಾರನೂ ಸೇರಿ ಒಟ್ಟು 21 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೃತ್ಯ ನಡೆದ ಸಂದರ್ಭದಲ್ಲಿ ಅರ್ಜಿದಾರನಿಗೆ 17 ವರ್ಷ ವಯಸ್ಸಾಗಿತ್ತು. ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಾಲ ನ್ಯಾಯ ಮಂಡಳಿ 2019ರ ಜನವರಿ 4ರಂದು ಆರೋಪಿಯ ಜಾಮೀನು ಮನವಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ನ್ಯಾಯಾಲಯದ ಮುಂದೆ ಆರೋಪಿ ಸಲ್ಲಿಸಿದ್ದ ಅರ್ಜಿಯೂ 2020ರ ಜನವರಿ 31ರಂದು ವಜಾಗೊಂಡಿತ್ತು. ಇದರಿಂದ, ಆರೋಪಿ ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈಗ ಹೈಕೋರ್ಟ್ ಅದನ್ನು ಮಾನ್ಯ ಮಾಡಿದೆ.