ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಜೈಲು ಪಾಲಾಗಿರುವ ಬಿಕಾಂ ಪದವಿ ವಿದ್ಯಾರ್ಥಿಗೆ ಇದೇ 15ರಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ಹಲವು ಷರತ್ತುಗಳೊಂದಿಗೆ ಕರ್ನಾಟಕ ಹೈಕೋರ್ಟ್ ಅವಕಾಶ ಕಲ್ಪಿಸಿದೆ.
ಪರೀಕ್ಷೆ ಬರೆಯುವುದಕ್ಕಾಗಿ ಜಾಮೀನು ನೀಡುವಂತೆ ಕೋರಿ ಆರೋಪಿ ದರ್ಶನ್ ಸಲ್ಲಿಸಿದ್ದ ಮನವಿ ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕ ಸದಸ್ಯ ಪೀಠವು ಆದೇಶ ಮಾಡಿದೆ.
ಆರೋಪಿ ವಿದ್ಯಾರ್ಥಿಗೆ ಮಾರ್ಚ್ 15ರಿಂದ ಮಾರ್ಚ್ 31ರವರಗೆ ಬಿ ಕಾಂ ಪದವಿಯ ಮೂರನೇ ಸೆಮಿಸ್ಟರ್ ಪರೀಕ್ಷೆ ನಿಗದಿಯಾಗಿದ್ದು, ಜಾಮೀನು ಮಂಜೂರು ಮಾಡುವಂತೆ ಆತನ ಪರ ವಕೀಲರು ಕೋರಿದ್ದರು. ಮತ್ತೊಂದೆಡೆ ಪ್ರಕರಣ ತನಿಖಾ ಹಂತದಲ್ಲಿದೆ. ಆರೋಪಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಪ್ರಕರಣ ತನಿಖಾ ಹಂತದಲ್ಲಿರುವ ಮಾತ್ರಕ್ಕೆ ಆರೋಪಿಯ ಭವಿಷ್ಯವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪರೀಕ್ಷೆ ಬರೆಯಲು ಆರೋಪಿಗೆ ಸೂಕ್ತ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ ಎಂದು ಪೀಠವು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಪರೀಕ್ಷೆ ಬರೆಯುವುದಕ್ಕಾಗಿ ಇರುವ ತಾತ್ಕಾಲಿಕ ವ್ಯವಸ್ಥೆಯು ಆರೋಪಿಗೆ ಮುಂದೆ ಪ್ರಕರಣ ಸಂಬಂಧ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅರ್ಜಿದಾರ 19 ವರ್ಷದ ದರ್ಶನ್ ಅನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಈಚೆಗೆ ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದರಿಂದ ಆರೋಪಿಯು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿದ್ದಾನೆ.
ವೇಳಾಪಟ್ಟಿ ನಿಗದಿಯಾಗಿರುವ ದಿನಗಳಲ್ಲಿ ಆರೋಪಿಯು ಪರೀಕ್ಷೆ ಎದುರಿಸುವ ರಾಜಾಜಿನಗರದ ಕಾಲೇಜಿನಲ್ಲಿ ಅರ್ಜಿದಾರ ಪರೀಕ್ಷೆ ಬರೆಯಬಹುದು. ಪರೀಕ್ಷಾ ಕೇಂದ್ರ ಮುಖ್ಯಸ್ಥರು/ಮುಖ್ಯ ಪರಿವೀಕ್ಷಕರು ಪರೀಕ್ಷೆ ಬರೆಯಲು ಅರ್ಜಿದಾರನಿಗೆ ಪ್ರತ್ಯೇಕ ಕೋಠಡಿ ವ್ಯವಸ್ಥೆ ಮಾಡಬೇಕು. ಆರೋಪಿಯನ್ನು ಭದ್ರತಾ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಜೈಲಿನಿಂದಲೇ ಪರೀಕ್ಷಾ ಕೇಂದ್ರಕ್ಕೆ ಕರೆತರಬೇಕು. ಪರೀಕ್ಷೆ ಮುಗಿದ ನಂತರ ಜೈಲಿಗೆ ವಾಪಸ್ ಕರೆದೊಯ್ಯಬೇಕು. ಜೈಲು ಅಧಿಕಾರಿಗಳು ಆರೋಪಿ ಖರ್ಚಿನಲ್ಲಿಯೇ ಪರೀಕ್ಷಾ ಕೊಠಡಿಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.
ಅಲ್ಲದೆ, ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಮತ್ತು ಜೈಲಿಗೆ ಹಿಂದಿರುವಾಗ ಆರೋಪಿ ಕೈಗೆ ಬೇಡಿ ಹಾಕಬಾರದು. ಆರೋಪಿ ಘನತೆ ಮತ್ತು ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಬೆಂಗಾವಲು ಪಡೆಯ ಭದ್ರತಾ ಸಿಬ್ಬಂದಿ ಸಮವಸ್ತ್ರ ಧರಿಸಬಾರದು. ಭದ್ರತಾ ಸಿಬ್ಬಂದಿ ನಿಯೋಜನೆಗೆ ಆಗುವ ಖರ್ಚನ್ನು ಅರ್ಜಿದಾರ ಮುಂಚಿತವಾಗಿಯೇ ಜೈಲು ಪ್ರಾಧಿಕಾರಕ್ಕೆ ಪಾವತಿಸಬೇಕು. ಪರೀಕ್ಷೆ ಮುಗಿದ ನಂತರ ಮುಂದಿನ ಪರೀಕ್ಷಾ ದಿನಾಂಕದವರೆಗೆ ಅರ್ಜಿದಾರ ಕೇಂದ್ರ ಕಾರಾಗೃಹದಲ್ಲಿಯೇ ಇರಬೇಕು. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಪೋಷಕರು ಒದಗಿಸುವ ಅಗತ್ಯ ಪುಸ್ತಕಗಳನ್ನು ಜೈಲು ಅಧಿಕಾರಿಗಳು ಅರ್ಜಿದಾರರಿಗೆ ಪೂರೈಸಬೇಕು ಎಂದು ಪೀಠವು ನಿರ್ದೇಶಿಸಿದೆ.