Ambulance
AmbulanceImage for representative purposes

ಅನುಮತಿ ಇಲ್ಲದೆ ಆಂಬುಲೆನ್ಸ್‌ ಸೇವೆ ಗುತ್ತಿಗೆ ಅಂತಿಮಗೊಳಿಸದಂತೆ ಆರೋಗ್ಯ ಇಲಾಖೆಗೆ ಹೈಕೋರ್ಟ್ ಮಧ್ಯಂತರ ಆದೇಶ

ನ್ಯಾಯಾಲಯವು 2017ರಲ್ಲೇ ಮಧ್ಯಂತರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜನವರಿ 9ರಂದು ಹೊರಡಿಸಿರುವ ಪ್ರಸ್ತಾವನೆಯನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಅಂತಿಮಗೊಳಿಸಬಾರದು ಎಂದು ಪೀಠವು ಮಧ್ಯಂತರ ಆದೇಶ ನೀಡಿತು.
Published on

ನ್ಯಾಯಾಲಯದ ಅನುಮತಿ ಇಲ್ಲದೆ 108 ತುರ್ತು ವೈದ್ಯಕೀಯ ಸೇವೆಯ (ಆಂಬುಲೆನ್ಸ್‌ ಸೇವೆ) ಗುತ್ತಿಗೆ ಅಂತಿಮಗೊಳಿಸದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಜಿವಿಕೆ ತುರ್ತು ನಿರ್ವಹಣಾ ಸಂಶೋಧನಾ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು ಜಿವಿಕೆ ಸಂಸ್ಥೆ ಸಲ್ಲಿಸಿರುವ ಅರ್ಜಿ ಕುರಿತು 2017ರ ಆಗಸ್ಟ್‌ 21ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದ್ದು, ಗುತ್ತಿಗೆ ನೀಡುವ ಮುನ್ನ ನ್ಯಾಯಾಲಯದಿಂದ ಸೂಕ್ತ ಅನುಮತಿ ಪಡೆಯಬೇಕು ಎಂದು ಹೇಳಿದೆ. ಆ ಅರ್ಜಿ ವಿಚಾರಣೆಗೆ ಬಾಕಿ ಇರುವಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು 2023ರ ಜನವರಿ 9ರಂದು 108 ಆಂಬುಲೆನ್ಸ್‌ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಸೇವೆ ಒದಗಿಸುವವರ ಆಯ್ಕೆಗೆ ಪ್ರಸ್ತಾವನೆ ಕೋರಿಕೆ ಹೊರಡಿಸಿದೆ. ಅದನ್ನು ಜಾರಿಗೊಳಿಸದಂತೆ ತಡೆ ನೀಡಬೇಕು ಎಂದು ಕೋರಿದರು.

ಅರ್ಜಿದಾರರ ವಾದ ಪರಿಗಣಿಸಿದ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲೇ ನ್ಯಾಯಾಲಯ ಮಧ್ಯಂತರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜನವರಿ 9ರಂದು ಹೊರಡಿಸಿರುವ ಪ್ರಸ್ತಾವನೆಯನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಅಂತಿಮಗೊಳಿಸಬಾರದು ಎಂದು ಮಧ್ಯಂತರ ಆದೇಶ ನೀಡಿತು. ಜತೆಗೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದ ಪೀಠವು ವಿಚಾರಣೆಯನ್ನು ಒಂದು ವಾರ ಮುಂದೂಡಿತು.

Also Read
ಆ್ಯಂಬುಲೆನ್ಸ್‌ ಸುಗಮ ಸಂಚಾರ: ವಿಶೇಷ ತುರ್ತು ಪ್ರತಿಕ್ರಿಯೆ ಸೇವೆ ಆರಂಭ; ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: 108 ಆಂಬುಲೆನ್ಸ್‌ ಸೇವೆ ಕಲ್ಪಿಸುವ ಸಂಬಂಧ ತಮಗೆ ನೀಡಲಾಗಿದ್ದ ಟೆಂಡರ್ ರದ್ದುಪಡಿಸಿ, ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಸರ್ಕಾರ 2017ರಲ್ಲಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಜಿವಿಕೆ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್, ನ್ಯಾಯಾಲಯದ ಅನುಮತಿ ಪಡೆದ ನಂತರವಷ್ಟೇ ಗುತ್ತಿಗೆ ನೀಡಬೇಕು ಎಂದು 2017ರ ಆಗಸ್ಟ್‌ 21ರಂದು ಮಧ್ಯಂತರ ಆದೇಶ ಮಾಡಿತ್ತು. ಆ ಅರ್ಜಿ ವಿಚಾರಣೆಗೆ ಬಾಕಿ ಇರುವಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು 108 ಆಂಬುಲೆನ್ಸ್‌ ಸೇವಾದಾರರ ಆಯ್ಕೆಗಾಗಿ 2023ರ ಜನವರಿ 9ರಂದು ಪ್ರಸ್ತಾವನೆ ಹೊರಡಿಸಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಜಿವಿಕೆ ಸಂಸ್ಥೆ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

Kannada Bar & Bench
kannada.barandbench.com