ಆ್ಯಂಬುಲೆನ್ಸ್‌ ಸುಗಮ ಸಂಚಾರ: ವಿಶೇಷ ತುರ್ತು ಪ್ರತಿಕ್ರಿಯೆ ಸೇವೆ ಆರಂಭ; ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಕರ್ನಾಟಕ ರಸ್ತೆ ಸುರಕ್ಷತೆ ಪ್ರಾಧಿಕಾರದ ಜಂಟಿ ಆಯುಕ್ತ ಜೆ ಪುರುಷೋತ್ತಮ್ & ರಾಜ್ಯ ಆರೋಗ್ಯ ಹಾಗೂ ಕಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಉಪ ಕಾರ್ಯದರ್ಶಿ ನಾಗರಾಜ್ ಸಲ್ಲಿಸಿರುವ ಪ್ರತ್ಯೇಕ ಅಫಿಡವಿಡ್‌ಗಳನ್ನು ಪೀಠಕ್ಕೆ ಸಲ್ಲಿಸಿದ ಸರ್ಕಾರದ ವಕೀಲರು.
High Court of Karnataka
High Court of Karnataka
Published on

ಅಪಘಾತದ ವೇಳೆ ಅತ್ಯಂತ ಮಹತ್ವದ ಸಮಯವಾದ ಜೀವರಕ್ಷಣಾ ಅವಧಿ (ಗೋಲ್ಡನ್ ಅವರ್‌) ಸಂದರ್ಭದಲ್ಲಿ ರೋಗಿಗಳು ಅಥವಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ವಿಶೇಷ ತುರ್ತು ಪ್ರತಿಕ್ರಿಯೆ ಸೇವೆ (ಸ್ಪೆಷಲ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಡೆಸ್ಕ್‌ ಸರ್ವೀಸ್‌) ಆರಂಭಿಸಲಾಗಿದೆ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಬೆಂಗಳೂರಿನ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಅವರು ಕರ್ನಾಟಕ ರಸ್ತೆ ಸುರಕ್ಷತೆ ಪ್ರಾಧಿಕಾರದ ಜಂಟಿ ಆಯುಕ್ತ ಜೆ ಪುರುಷೋತ್ತಮ್ ಮತ್ತು ರಾಜ್ಯ ಆರೋಗ್ಯ ಹಾಗೂ ಕಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಉಪ ಕಾರ್ಯದರ್ಶಿ ನಾಗರಾಜ್ ಸಲ್ಲಿಸಿರುವ ಪ್ರತ್ಯೇಕ ಅಫಿಡವಿಡ್‌ಗಳನ್ನು ಪೀಠಕ್ಕೆ ಸಲ್ಲಿಸಿದರು. “ಹೊಸ ಆ್ಯಂಬುಲೆನ್ಸ್ ನೋಂದಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ವಾಹನ ಸಾಫ್ಟ್‌ವೇರ್ ಆ್ಯಂಬುಲೆನ್ಸ್‌ನಲ್ಲಿ ಜಿಪಿಎಸ್ ದತ್ತಾಂಶದ ಕುರಿತು ನಿರ್ವಹಣೆ ಮಾಡಲಾಗುವುದು ಮತ್ತು ಅದನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು. ಇನ್ನೂ 108 ಸೇವಾದಾರರನ್ನು ಆಯ್ಕೆ ಮಾಡಲು 21 ದಿನಗಳ ಅಲ್ಪಾವಧಿ ಟೆಂಡರ್ ಕರೆಯಲು ಸರ್ಕಾರ ಅನುಮತಿ ನೀಡಿದೆ. ಅದರಂತೆ ಜನವರಿ 9ರಂದು ಟೆಂಡರ್ ಆಹ್ವಾನಿಸಲಾಗುವುದು. ಫೆಬ್ರವರಿ 2ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಆ್ಯಂಬುಲೆನ್ಸ್‌ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಸಂಚಾರ ಪೊಲೀಸರ ವತಿಯಿಂದ ವಿಶೇಷ ತುರ್ತು ಪ್ರತಿಕ್ರಿಯೆ ಸೇವೆ ಮತ್ತು ಸ್ಥಿರ ದೂರವಾಣಿ ಸಂಖ್ಯೆಯ ವ್ಯವಸ್ಥೆ ಮಾಡಲಾಗಿದೆ. ಆ್ಯಂಬುಲೆನ್ಸ್‌ಗಳು ಸಂಚಾರ ಆರಂಭಿಸಿದಾಗ ಮತ್ತು ರೋಗಿಗಳನ್ನು ತುರ್ತು ಚಿಕಿತ್ಸೆಗೆ ರವಾನಿಸುತ್ತಿದ್ದಾಗ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದರೆ, ವಾಹನ ದಟ್ಟಣೆ ನಿವಾರಿಸಲು ಇಆರ್‌ಎಸ್‌ಎಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು. ಈ ಸಹಾಯವಾಣಿ ಸಂಖ್ಯೆಯನ್ನು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪರ ಮತ್ತು ಕೋಲಾರ ಜಿಲ್ಲೆಗಳ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳ ಆ್ಯಂಬುಲೆನ್ಸ್‌ಗಳಿಗೆ ನೀಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಇದನ್ನು ದಾಖಲಿಸಿಕೊಂಡ ನ್ಯಾಯಾಲಯವು ರಾಜ್ಯ ಸರ್ಕಾರವು ಅರ್ಜಿಯಲ್ಲಿ ಎತ್ತಲಾಗಿದ್ದ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದೆ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸರ್ಕಾರದ ಸ್ಪಂದನೆ ಮತ್ತು ಕೈಗೊಂಡ ಕ್ರಮಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿತು.

Also Read
ತಡೆ ರಹಿತ ಸಂಚಾರಕ್ಕಾಗಿ 3,368 ಆಂಬ್ಯುಲನ್ಸ್‌ಗಳಿಗೆ ಜಿಪಿಎಸ್ ಅಳವಡಿಕೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ವಿವರಣೆ

ಅಲ್ಲದೆ, ವೈದ್ಯಕೀಯ ತುರ್ತು ಸೇವೆಗಳನ್ನು ಸಾರ್ವಜನಿಕರಿಗೆ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಕ್ರಮಗಳನ್ನು ನಿಗದಿತ ಅವಧಿಯಲ್ಲಿ ರಾಜ್ಯ, ಜಿಲ್ಲೆ ಮತ್ತು ವಲಯ ಮಟ್ಟದಲ್ಲಿ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಲಿದೆ ಎಂದು ನಂಬಿಕೆ ವ್ಯಕ್ತಪಡಿಸಿದ ಪೀಠವು ಅರ್ಜಿ ಇತ್ಯರ್ಥಪಡಿಸಿತು. ಅರ್ಜಿದಾರರ ಪರವಾಗಿ ವಕೀಲ ವೆಂಕಟೇಶ್‌ ದಳವಾಯಿ ಹಾಜರಿದ್ದರು.

ಸಂಚಾರ ದಟ್ಟಣೆ ನಿವಾರಣೆಗೆ ಕೋರಿಕೆ: ರೋಗಿಯನ್ನು ತುರ್ತು ಸೇವೆಗಾಗಿ ರವಾನಿಸುತ್ತಿದ್ದಾಗ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರೆ, ರೋಗಿಗಳ ಕುಟುಂಬಸ್ಥರು, ಆ್ಯಂಬುಲೆನ್ಸ್ ಸಿಬ್ಬಂದಿ ವಿಶೇಷ ತುರ್ತು ಪ್ರತಿಕ್ರಿಯೆ ಸಂಖ್ಯೆ-112 ಅಥವಾ ಸ್ಥಿರ ದೂರವಾಣಿ ಸಂಖ್ಯೆಗಳು 080-22943131, 080-22943030, 080-22943663, 080-22943684ಗೆ ಕರೆ ಮಾಡಿ ಸಂಚಾರ ದಟ್ಟಣೆ ನಿವಾರಿಸಲು ಕೋರಬಹುದು.

Kannada Bar & Bench
kannada.barandbench.com