

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಮೇಲುಕೋಟೆ ನಿವಾಸಿ ಹಾಗೂ ದೇವಸ್ಥಾನದ ಭಕ್ತರಾದ ವಿದ್ವಾನ್ ಡಾ. ಎಂ ಪಿ ನರಸಿಂಹನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಾದ ಆಲಿಸಿದ ಪೀಠವು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟಂಬರ್ 2ಕ್ಕೆ ಮುಂದೂಡಿತು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಕಾಯಿದೆ-1977ರ ಪ್ರಕಾರ ಚೆಲುವ ನಾರಾಯಣಸ್ವಾಮಿ ದೇವಸ್ಥಾನ ಎ ದರ್ಜೆ ದೇವಸ್ಥಾನವಾಗಿದ್ದು, ವಾರ್ಷಿಕ 25 ಲಕ್ಷ ರೂಪಾಯಿ ಆದಾಯ ಹೊಂದಿದೆ. ಕಾಯಿದೆಯ ಸೆಕ್ಷನ್ 25ರ ಪ್ರಕಾರ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಬೇಕು. ಕೊನೆಯ ಬಾರಿಗೆ ರಚಿಸಲಾಗಿದ್ದ ಸಮಿತಿಯ ಅವಧಿಯು 2013-14ನೇ ಸಾಲಿಗೆ ಮುಗಿದಿದೆ. ಕಳೆದ 12-13 ವರ್ಷಗಳಿಂದ ಆಡಳಿತಾಧಿಕಾರಿಯೇ ದೇವಸ್ಥಾನದ ನಿರ್ವಹಣೆ ಮಾಡುತ್ತಿದ್ದಾರೆ. 2023ರಲ್ಲಿ ವ್ಯವಸ್ಥಾಪನಾ ಸಮಿತಿ ರಚನೆಗೆ ಅಧಿಸೂಚನೆ ಹೊರಡಿಸಲಾಗಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ವ್ಯವಸ್ಥಾಪನಾ ಸಮಿತಿಗೆ ತಮ್ಮನ್ನು ಪರಿಗಣಿಸುವಂತೆ ಮತ್ತು 2023ರ ಅಧಿಸೂಚನೆಯಂತೆ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಗಣಿಸಲಾಗಿಲ್ಲ. ಆದ್ದರಿಂದ ತಕ್ಷಣ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.