ಆಸ್ತಿ ತೆರಿಗೆ ಹೆಚ್ಚಿಸಲು ಪುರಸಭೆ, ನಗರಸಭೆ ಕಾಯಿದೆಗಳಿಗೆ ತಿದ್ದುಪಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ತಿದ್ದುಪಡಿ ಮಾಡಲಾಗಿರುವ ಕರ್ನಾಟಕ ಪುರಸಭೆಗಳ ಕಾಯಿದೆಯ ಸೆಕ್ಷನ್‌ಗಳಾದ 101 ಮತ್ತು 102ಎ ಮತ್ತು ಕರ್ನಾಟಕ ನಗರ ಪಾಲಿಕೆ ಕಾಯಿದೆ ಸೆಕ್ಷನ್‌ 108 ಹಾಗೂ ಫೆ.19ರಂದು ಹೊರಡಿಸಲಾಗಿರುವ ಸುತ್ತೋಲೆಯನ್ನು ರದ್ದುಪಡಿಸುವಂತೆ ಪಿಐಎಲ್‌ನಲ್ಲಿ ಕೋರಲಾಗಿದೆ.
Karnataka High Court
Karnataka High Court
Published on

ಕರ್ನಾಟಕ ಪುರಸಭೆಗಳ ಕಾಯಿದೆ ಮತ್ತು ಕರ್ನಾಟಕ ನಗರ ಪಾಲಿಕೆ ಕಾಯಿದೆಗಳಿಗೆ ತಿದ್ದುಪಡಿ ಮಾಡಿರುವ ಆಸ್ತಿ ತೆರಿಗೆ ಹೆಚ್ಚಿಸುವ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ‌ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್‌) ಸಂಬಂಧಿಸಿದಂತೆ ಸೋಮವಾರ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ರಾಜ್ಯದಲ್ಲಿ ಜನಸ್ನೇಹಿ ತೆರಿಗೆ ವ್ಯವಸ್ಥೆ ಜಾರಿ ಮಾಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ನಾಗರಾಜ್‌ ಹೊಂಗಲ್‌ ಸಲ್ಲಿಸಿದ್ದ ಪಿಐಎಲ್‌ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ಪೀಠವು ವಿಚಾರಣೆ ನಡೆಸಿತು.

ತಿದ್ದುಪಡಿ ಮಾಡಲಾಗಿರುವ ಕರ್ನಾಟಕ ಪುರಸಭೆಗಳ ಕಾಯಿದೆಯ ಸೆಕ್ಷನ್‌ಗಳಾದ 101 ಮತ್ತು 102ಎ ಮತ್ತು ಕರ್ನಾಟಕ ನಗರ ಪಾಲಿಕೆ ಕಾಯಿದೆ ಸೆಕ್ಷನ್‌ 108 ಹಾಗೂ ಫೆಬ್ರವರಿ 19ರಂದು ಹೊರಡಿಸಲಾಗಿರುವ ಸುತ್ತೋಲೆಯನ್ನು ರದ್ದುಪಡಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಸುತ್ತೋಲೆಯು 2021-22ನೇ ಸಾಲಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿದ್ದಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ತೆಲಂಗಾಣ, ದೆಹಲಿ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಗುಜರಾತ್‌ ಸರ್ಕಾರಗಳು ಹಾಲಿ ಇರುವ ಆಸ್ತಿ ತೆರಿಗೆಯಲ್ಲಿ ಶೇ. 30 ರಿಂದ ಶೇ. 50ರ ವರೆಗೆ ವಾಪಸ್‌ ಮಾಡಿವೆ. ಅಲ್ಲದೇ, ಬಾಕಿ ಆಸ್ತಿ ತೆರಿಗೆಯ ಬಡ್ಡಿಯನ್ನು ಮನ್ನಾ ಮಾಡಿವೆ. ಇದಕ್ಕೆ ವಿರುದ್ಧವಾಗಿ ಕರ್ನಾಟಕ ಸರ್ಕಾರವು ಶೇ. 20 ರಿಂದ ಶೇ. 30ರಷ್ಟು ಆಸ್ತಿ ತೆರಿಗೆ ಹೆಚ್ಚಿಸಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

Also Read
ಲಂಚ ಪ್ರಕರಣ: ನಿವೃತ್ತ ನ್ಯಾ. ಇಂದ್ರಕಲಾ ವಿರುದ್ಧದ ತನಿಖೆಗೆ ಮನವಿ - ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಆಸ್ತಿ ತೆರಿಗೆ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಅಳವಡಿಸಿಕೊಳ್ಳಲಾಗಿರುವ ಪ್ರಮಾಣಗಳು ಸ್ವೇಚ್ಛೆಯಿಂದ ಕೂಡಿವೆ. ಸಣ್ಣ ಪುಟ್ಟ ನಗರ ಪ್ರದೇಶಗಳು ಮತ್ತು ನಗರ ಪಾಲಿಕೆಗಳಲ್ಲಿರುವ ಬಹುತೇಕ ಆಸ್ತಿಗಳು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಸೇರಿದ್ದಾಗಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ (ಯುಎಲ್‌ಬಿ) ಆಸ್ತಿ ತೆರಿಗೆ ಬಾಕಿ ಸಂಗ್ರಹಿಸುವಾಗ ಅಧಿಕಾರಿಗಳು ವಾರ್ಷಿಕ ಶೇ.24ರಷ್ಟು ಬಡ್ಡಿಯನ್ನು ವಿಧಿಸುತ್ತಿದ್ದಾರೆ ಎಂದು ಮನವಿಯಲ್ಲಿ ಗಮನಸೆಳೆದಿದ್ದಾರೆ.

ಇದರ ಜೊತೆಗೆ, ನಗರ ಸ್ಥಳೀಯ ಸಂಸ್ಥೆಗಳು ಆರೋಗ್ಯ ಸೆಸ್‌, ಗ್ರಂಥಾಲಯ ಸೆಸ್‌ ಮುಂತಾದವನ್ನು ವಿಧಿಸಲಾಗುತ್ತಿದ್ದು, ಸಣ್ಣ ನಗರ/ಪಟ್ಟಣಗಳಲ್ಲಿ ನಗರ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಸಾರಿಗೆ ಸೆಸ್‌ ವಿಧಿಸಲಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಇನ್ನು ಆಸ್ತಿ ತೆರಿಗೆ ಪರಿಷ್ಕರಣೆಗೆ ಆಧಾರವಾಗಿರುವ 2005ರ ಸ್ವಯಂ ಮೌಲ್ಯಮಾಪನ ಯೋಜನೆಗೆ (ಎಸ್‌ಎಎಸ್‌) ಯಾವುದೇ ವೈಜ್ಞಾನಿಕ ಪ್ರಮಾಣಗಳಿಲ್ಲ ಎಂದು ಸಹ ಅರ್ಜಿದಾರರು ಮನವಿಯಲ್ಲಿ ಹೇಳಿದ್ದಾರೆ.

Kannada Bar & Bench
kannada.barandbench.com