ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಆರ್‌ ಡಿ ಪಾಟೀಲ್‌ ವಿರುದ್ಧದ 11 ಪ್ರಕರಣಗಳಿಗೂ ತಡೆಯಾಜ್ಞೆ ವಿಧಿಸಿದ ಹೈಕೋರ್ಟ್‌

ನಾಲ್ಕು ಜಿಲ್ಲೆಗಳಲ್ಲಿ ದಾಖಲಾಗಿರುವ ಎಲ್ಲಾ 11 ಪ್ರಕರಣಗಳಿಗೂ ತಡೆ ನೀಡಿದ್ದು, ಪಾಟೀಲ್ ವಿರುದ್ಧ‌ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆಯೂ ಪೊಲೀಸರಿಗೆ ನಿರ್ದೇಶಿಸಿದ ನ್ಯಾಯಾಲಯ.
R D Patil and Karnataka HC (Kalburgi Bench)
R D Patil and Karnataka HC (Kalburgi Bench)
Published on

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಕಿಂಗ್‌ಪಿನ್‌ ಹಾಗೂ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ರುದ್ರಗೌಡ ಪಾಟೀಲ್‌ ಅಲಿಯಾಸ್‌ ಆರ್‌ ಡಿ ಪಾಟೀಲ್‌ ವಿರುದ್ಧ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ವಿವಿಧ ಕಡೆ ದಾಖಲಾಗಿರುವ 11 ಪ್ರಕರಣಗಳಿಗೂ ಸೋಮವಾರ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ತಡೆಯಾಜ್ಞೆ ನೀಡಿದೆ. ಅಲ್ಲದೇ, ಪಾಟೀಲ್ ವಿರುದ್ಧ‌ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮಕೈಗೊಳ್ಳದಂತೆಯೂ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಕಲಬುರ್ಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ಪ್ರತ್ಯೇಕವಾಗಿ ದಾಖಲಾಗಿರುವ 11 ಪ್ರಕರಣಗಳನ್ನು ಒಟ್ಟಾಗಿಸಿ ವಿಚಾರಣೆ ನಡೆಸಲು ಸಲ್ಲಿಸಿದ್ದ ಅರ್ಜಿ ಮತ್ತು ಈ ಎಲ್ಲಾ ಪ್ರಕರಣಗಳಲ್ಲೂ ತಡೆ ನೀಡಲು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌ ರಾಚಯ್ಯ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಆರ್‌ ಡಿ ಪಾಟೀಲ್‌ ವಿರುದ್ಧ ಕಲಬುರ್ಗಿ ವ್ಯಾಪ್ತಿಯಲ್ಲಿ ಎಂಟು ಪ್ರಕರಣ ದಾಖಲಿಸಲಾಗಿದೆ. ಉಳಿದ ಮೂರು ಪ್ರಕರಣಗಳು ಬೇರೆ ಜಿಲ್ಲೆಗಳ ಠಾಣೆಗಳಲ್ಲಿ ದಾಖಲಿಸಲಾಗಿದೆ. ಈ ನ್ಯಾಯಾಲಯದ ಮತ್ತೊಂದು ಪೀಠವು ಮಧ್ಯಂತರ ಆದೇಶ ಮಾಡಿರುವುದನ್ನು ಪರಿಗಣಿಸಿ, ಹಾಲಿ ಪ್ರಕರಣದಲ್ಲಿ ಅದೇ ಆದೇಶ ಮಾಡುವುದು ಸೂಕ್ತವಾಗಿದೆ. ಹೀಗಾಗಿ, ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅಲ್ಲದೇ, “ಕಲಬುರ್ಗಿಯ ಚೌಕ್‌ ಬಜಾರ್‌ ಠಾಣೆಯಲ್ಲಿ ದಾಖಲಾಗಿರುವ ಒಂದು ಪ್ರಕರಣ, ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣ, ಅಶೋಕ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಐದು ಪ್ರಕರಣ, ಬೆಂಗಳೂರಿನ ರಾಮಮೂರ್ತಿ ನಗರ, ತುಮಕೂರಿನ ಕ್ಯಾತಸಂದ್ರ ಹಾಗೂ ಧಾರವಾಡದ ಉಪ ನಗರ ಠಾಣೆಗಳಲ್ಲಿ ಪಾಟೀಲ್‌ ವಿರುದ್ಧ ದಾಖಲಾಗಿರುವ ತಲಾ ಒಂದೊಂದು ಪ್ರಕರಣಗಳಲ್ಲಿನ ಮುಂದಿನ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

“ಅರ್ಜಿದಾರ ಪಾಟೀಲ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರು ಮತ್ತದೇ ಅಪರಾಧಕ್ಕೆ ಸಂಬಂಧಿಸಿದಂತೆ ಬೇರೆ ಎಫ್‌ಐಆರ್‌ ದಾಖಲಿಸಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ್‌ ಬಜಾರ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಧಾನ ಪ್ರಕರಣದಲ್ಲಿ ಅರ್ಜಿದಾರ ಆರ್‌ ಡಿ ಪಾಟೀಲ್‌ ಅವರನ್ನು 14ನೇ ಆರೋಪಿಯನ್ನಾಗಿಸಲಾಗಿದೆ. ಅವರ ವಿರುದ್ಧ 11 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಎಂಟು ಕಲಬುರ್ಗಿಯ ವಿವಿಧ ಠಾಣೆಗಳಲ್ಲಿ, ಧಾರವಾಡ, ಬೆಂಗಳೂರು ಮತ್ತು ತುಮಕೂರಿನ ಬೇರೆ ಬೇರೆ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಿಸಲಾಗಿದೆ.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಈ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಆರ್‌ ಡಿ ಪಾಟೀಲ್‌ ಅವರು ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಲು ಕೋರಿದ್ದರು. ಈ ಪ್ರಕರಣ ಬಾಕಿ ಇರುವಾಗ ಅರ್ಜಿದಾರರ ಪರವಾಗಿ ಮಧ್ಯಂತರ ಆದೇಶವಾಯಿತು. ಅದಾಗ್ಯೂ, 2022ರ ಸೆಪ್ಟೆಂಬರ್‌ 27ರಂದು ಇದೇ ನ್ಯಾಯಾಲಯ ಮತ್ತೊಂದು ಪೀಠವು ಎಲ್ಲಾ ಪ್ರಕರಣಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ಕೋರಿ ಸಂಬಂಧಿತ ಜಿಲ್ಲಾ ಅಥವಾ ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಆರ್‌ ಡಿ ಪಾಟೀಲ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಸರ್ವೋಚ್ಚ ನ್ಯಾಯಾಲಯವು ವಿಭಿನ್ನ ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಕರಣಗಳನ್ನು ಒಟ್ಟಾಗಿಸಿ ವಿಚಾರಣೆ ನಡೆಸಲು ಆದೇಶಿಸುವ ಅಧಿಕಾರ ಜಿಲ್ಲಾ ನ್ಯಾಯಾಲಯಕ್ಕೆ ಇರುವುದಿಲ್ಲ. ಇದನ್ನು ಹೈಕೋರ್ಟ್‌ ಮಾಡಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಿಭಿನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಕರಣಗಳನ್ನು ಒಟ್ಟಾಗಿಸಲು ಆದೇಶಿಸುವಂತೆ ಕೋರಿ ಪಾಟೀಲ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಲಾಗಿದೆ.

ಹೈಕೋರ್ಟ್‌ನಲ್ಲಿ ಸರ್ಕಾರದ ವಕೀಲರಾಗಿರುವ ಶರಣಬಸಪ್ಪ ಎಂ. ಪಾಟೀಲ್‌ ಅವರು “ಮಧ್ಯಂತರ ಆದೇಶಕ್ಕೆ ಆಕ್ಷೇಪಿಸಿದ್ದು, ಎಲ್ಲಾ ಪ್ರಕರಣಗಳನ್ನು ಒಟ್ಟಾಗಿಸಿ, ನಿರ್ದಿಷ್ಟ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದರೆ ನಿರ್ದಿಷ್ಟ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಕರೆತರುವುದು ಕಷ್ಟವಾಗಲಿದೆ. ಆಡಳಿತಾತ್ಮಕ ಸಮಸ್ಯೆಯಾಗಲಿದೆ. ಹೀಗಾಗಿ, ಮಧ್ಯಂತರ ಆದೇಶ ಮಾಡಬಾರದು" ಎಂದು ಕೋರಿದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಲಿಲ್ಲ.

Kannada Bar & Bench
kannada.barandbench.com