ಸೌಜನ್ಯ ಪ್ರಕರಣ: ಶಾಂತಿಯುತ ಪ್ರತಿಭಟನೆ ನಡೆಸಲು ಹೈಕೋರ್ಟ್‌ ಅನುಮತಿ

ಸೌಜನ್ಯ ಕೊಲೆ ಪ್ರಕರಣದ ಸಂಬಂಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಎರಡು ಸಂಸ್ಥೆಗಳು ಪ್ರತ್ಯೇಕ ಅರ್ಜಿ ಸಲ್ಲಿಸಿವೆ. ಅರ್ಜಿದಾರರು ಕಡ್ಡಾಯವಾಗಿ ಕಾನೂನಿನ ಅನ್ವಯ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿಸಲಾಗಿದೆ ಎಂದು ಪೀಠ ಆದೇಶಿಸಿದೆ.
Soujanya & Karnataka HC
Soujanya & Karnataka HC
Published on

ಬೆಳ್ತಂಗಡಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂಬಂಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ಅನುಮತಿಸಿದೆ.

ಕರ್ನಾಟಕ ಕಾರ್ಮಿಕರ ವೇದಿಕೆಯು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೌಜನ್ಯ ಸಾವಿಗೆ ನ್ಯಾಯ ಕೋರಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿಸಬೇಕು ಎಂದು ಸಲ್ಲಿಸಿದ್ದ ಹಾಗೂ ಸ್ಥಳೀಯರ ಸಶಕ್ತೀಕರಣದಲ್ಲಿ ತೊಡಗಿಕೊಂಡಿರುವ 'ನೇಟಿವ್‌ ಎಂಪವರಿಂಗ್‌ ಅಂಡ್‌ ಎಕ್ವಿಪಿಂಗ್‌ ಟೀಮ್‌ ಫಾರ್‌ ಹೋಪ್‌ ಅಂಡ್‌ ಇಂಟರಾಕ್ಷನ್‌' ಸಂಘಟನೆಯು ಕಡಬಾ ತಹಶೀಲ್ದಾರ್‌ ಅನುಮತಿ ನೀಡಿ ಹಿಂಪಡೆದಿರುವ ಆದೇಶವನ್ನು ವಜಾಗೊಳಿಸಿ, ಸೌಜನ್ಯ ಪ್ರಕರಣದ ಸಂಬಂಧ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ.

Justice M Nagaprasanna
Justice M Nagaprasanna

“ಒಂದೇ ವಿಚಾರಕ್ಕಾಗಿ (ಸೌಜನ್ಯಗೆ ನ್ಯಾಯ) ಶಾಂತಿಯುತ ಪ್ರತಿಭಟನೆ ನಡೆಸುವ ಉದ್ದೇಶದಿಂದ ಎರಡು ಸಂಸ್ಥೆಗಳು ಪ್ರತ್ಯೇಕ ಅರ್ಜಿ ಸಲ್ಲಿಸಿವೆ. ಅರ್ಜಿದಾರರು ಕಡ್ಡಾಯವಾಗಿ ಕಾನೂನಿನ ಅನ್ವಯ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿಸಲಾಗಿದ್ದು, ಸಮನ್ವಯ ಪೀಠಗಳಲ್ಲಿನ (ಅಸೋಸಿಯೇನ್‌ ಫಾರ್‌ ಡೆಮಾಕ್ರಿಟ್‌ ರೀಫಾರ್ಮ್ಸ್‌ ವರ್ಸಸ್‌ ಚುನಾವಣಾ ಆಯೋಗ; ಶೀನಪ್ಪ ಮತ್ತು ಇತರರು ಹಾಗೂ ಕರ್ನಾಟಕ ಸರ್ಕಾರ) ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡರೆ ರಾಜ್ಯ ಸರ್ಕಾರವು ಕಾನೂನಿನ ಅನ್ವಯ ಕ್ರಮಕೈಗೊಳ್ಳಬಹುದಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎ ವೇಲನ್‌ ಅವರು “ಪ್ರತಿಭಟಿಸುವ ಹಕ್ಕನ್ನು ನಿರ್ಬಂಧ ಆದೇಶದ ಮೂಲಕ ರಾಜ್ಯ ಸರ್ಕಾರ ಹತ್ತಿಕ್ಕಲಾಗದು. ಸೌಜನ್ಯ ಕೊಲೆ ಪ್ರಕರಣದ ಸಂಬಂಧ ಯಾರೂ ಪ್ರತಿಭಟಿಸಬಾರದು ಎಂದು ಸರ್ಕಾರ ಆದೇಶ ಮಾಡಿದೆ. ವಕೀಲರೊಬ್ಬರು (ವೀರೇಂದ್ರ ಹೆಗ್ಗಡೆ ಕುಟುಂಬ ಪ್ರತಿನಿಧಿಸುವವರು) ಆಕ್ಷೇಪಿಸಿದ್ದರಿಂದ ಕಡಬಾ ತಹಶೀಲ್ದಾರ್‌ ಅನುಮತಿ ಹಿಂಪಡೆದಿದ್ದಾರೆ ಮತ್ತು ಸಮನ್ವಯ ಪೀಠದ ಆದೇಶ ಉಲ್ಲೇಖಿಸಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಆದರೆ, ಸಮನ್ವಯ ಪೀಠದ ಆದೇಶವು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಪ್ರತಿಭಟನೆಯು ಶಾಂತಿಯುತವಾಗಿ ನಡೆಯಲಿದ್ದು, ಕಾನೂನು ಉಲ್ಲಂಘನೆಯಾದರೆ ಪೊಲೀಸರು ಕ್ರಮಕೈಗೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಮೊಹಮ್ಮದ್‌ ಜಾಫರ್‌ ಅವರು “ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಉದ್ಯೋಗಿ ಶೀನಪ್ಪ ಮತ್ತು ವೀರೇಂದ್ರ ಹೆಗ್ಗಡೆ ಕುಟುಂಬದ ನಂದೀಶ್‌ ಕುಮಾರ್‌ ಜೈನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠವು ಮಹೇಶ್‌ ತಿಮ್ಮರೋಡಿ ಮತ್ತು ಅವರ ಬೆಂಬಲಿಗರು ಸಾರ್ವಜನಿಕವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಯಾವುದೇ ತೆರನಾದ ಮಾನಹಾನಿ/ನಿಂದನಾತ್ಮಕ ಹೇಳಿಕೆ ನೀಡಬಾರದು. ಇಂಥ ಮಾಹಿತಿಯನ್ನು ಪೊಲೀಸರ ಮುಂದೆ ಇಟ್ಟರೆ ತಕ್ಷಣ ಕ್ರಮಕೈಗೊಳ್ಳುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಈ ನಿಟ್ಟಿನಲ್ಲಿ ಸಮನ್ವಯ ಪೀಠದ ಆದೇಶ ಉಲ್ಲಂಘಿಸಿದರೆ ಕ್ರಮಕೈಗೊಳ್ಳುವ ಸ್ವಾತಂತ್ರ್ಯವನ್ನು ಸರ್ಕಾರಕ್ಕೆ ನೀಡಬೇಕು” ಎಂದು ಕೋರಿದರು.

Also Read
ಸೌಜನ್ಯ ಕೊಲೆ ಪ್ರಕರಣ: ಯೂಟ್ಯೂಬರ್‌ ಸಮೀರ್‌ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಂಸ್ಥೆಗಳು 11.3.2025ರಂದು ಖುಲಾಸೆ ಮರುಪರಿಶೀಲನಾ ಸಮಿತಿಯು (ಅಕ್ವಿಟಲ್‌ ರಿವ್ಯು ಕಮಿಟಿಯು) 2012ರಲ್ಲಿ ನಡೆದಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿರುವ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಸೌಜನ್ಯ ಪ್ರಕರಣ ಪುನರ್‌ ತನಿಖೆಯಾಗಬೇಕು ಎಂದು ಆಗ್ರಹಿಸಲು ವ್ಯಾಪ್ತಿ ಹೊಂದಿರುವ ಪೊಲೀಸರಿಂದ ಅನುಮತಿ ಕೋರಿದ್ದವು. ಈ ಸಂಬಂಧ ದಕ್ಷಿಣ ಕನ್ನಡದ ಕಡಪ ತಾಲ್ಲೂಕಿನ ಪೊಲೀಸರಿಗೆ ಮನವಿ ನೀಡಲಾಗಿತ್ತು. 14.3.2025ರಂದು ಕಡಪಾ ತಹಶೀಲ್ದಾರ್‌ ಮೊದಲಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದರು. ಇದಕ್ಕೆ ವಕೀಲರೊಬ್ಬರು ಆಕ್ಷೇಪಿಸಿದ್ದರಿಂದ 15.3.2025ರಂದು ಅನುಮತಿಯನ್ನು ಹಿಂಬರಹ ನೀಡುವ ಮೂಲಕ ತಹಶೀಲ್ದಾರ್‌ ಹಿಂಪಡೆದಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com