ಸೌಜನ್ಯ ಕೊಲೆ ಪ್ರಕರಣ: ಯೂಟ್ಯೂಬರ್‌ ಸಮೀರ್‌ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

ಧಾರ್ಮಿಕ ವ್ಯಕ್ತಿಯ ಹೇಳಿಕೆ ಧರ್ಮದ ವಿರುದ್ಧ ಹೇಳಿಕೆ ಆಗುವುದಿಲ್ಲ. ಅದರ ವ್ಯಾಪ್ತಿ ಸೀಮಿತವಾದುದು. ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಆರೋಪಗಳು ಈ ಪ್ರಕರಣದಲ್ಲಿ ಅನ್ವಯ ಆಗುವುದಿಲ್ಲ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು.
Sameer M D and Karnataka HC
Sameer M D and Karnataka HC
Published on

ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಬಿತ್ತರಿಸಿದ್ದ ಯೂಟ್ಯೂಬರ್ ಎಂ ಡಿ ಸಮೀರ್ ವಿರುದ್ಧ ಬಳ್ಳಾರಿಯ ಕೌಲ್‌ ಬಜಾರ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಸಮೀರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಮೀರ್‌ ಪರ ವಕೀಲರಾದ ಎ ವೇಲನ್‌ ಮತ್ತು ಕೆ ವಿ ಧನಂಜಯ ಅವರು “ಎಫ್‌ಐಆರ್‌ ದಾಖಲಿಸಿರುವುದು ಕಾನೂನು ಬಾಹಿರವಾಗಿದೆ. ಇದು ನಾಗರಿಕರಿಗೆ ಸಾಂವಿಧಾನಿಕವಾಗಿ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು 19(1) ಮತ್ತು 21ನೇ ವಿಧಿಗೆ ವಿರುದ್ಧವಾಗಿದೆ” ಎಂದು ಪ್ರತಿಪಾದಿಸಿದರು.

“ಧಾರ್ಮಿಕ ವ್ಯಕ್ತಿಯ ಹೇಳಿಕೆ ಧರ್ಮದ ವಿರುದ್ಧ ಹೇಳಿಕೆ ಆಗುವುದಿಲ್ಲ. ಅದರ ವ್ಯಾಪ್ತಿ ಸೀಮಿತವಾದುದು. ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಆರೋಪಗಳು ಈ ಪ್ರಕರಣದಲ್ಲಿ ಅನ್ವಯ ಆಗುವುದಿಲ್ಲ. ಹಾಗೇನಾದರೂ ಇದ್ದರೆ ನಿತ್ಯಾನಂದ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸುವುದಕ್ಕೇ ಸಾಧ್ಯವಿರುತ್ತಿರಲಿಲ್ಲ” ಎಂದರು.

ವಾದ ಅಲಿಸಿದ ಪೀಠವು “ಬಂಧನ ತಡೆದರೆ ಸಾಕಾ ಅಥವಾ ಎಫ್‌ಐಆರ್‌ಗೇ ತಡೆ ನೀಡಬೇಕಾ” ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಅರ್ಜಿದಾರರ ಪರ ವಕೀಲರು, “ಕೇವಲ ಬಂಧನಕ್ಕೆ ತಡೆ ನೀಡಿದರೆ ಸಾಲದು. ಸಂಪೂರ್ಣ ಎಫ್‌ಐಆರ್‌ಗೆ ತಡೆ ನೀಡಬೇಕು” ಎಂದು ಮನವಿ ಮಾಡಿದರು.

Also Read
ಯೂಟ್ಯೂಬರ್‌ ಸಮೀರ್‌ಗೆ ಬಳ್ಳಾರಿ ಪೊಲೀಸರು ನೀಡಿದ್ದ ನೋಟಿಸ್‌ಗೆ ತಡೆ; ತನಿಖಾಧಿಕಾರಿ ವಿರುದ್ಧ ಹೈಕೋರ್ಟ್‌ ಕಿಡಿ

ಇದನ್ನು ಮಾನ್ಯ ಮಾಡಿದ ಪೀಠವು ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿತು. ಅಂತೆಯೇ, ರಾಜ್ಯ ಪ್ರಾಸಿಕ್ಯೂಷನ್‌ ಮತ್ತು ತನಿಖಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು. ವಕೀಲ ಎ ಪವನ್‌ ಶ್ಯಾಮ್‌ ವಕಾಲತ್ತು ವಹಿಸಿದ್ದಾರೆ.

ಈಚೆಗೆ ಬಳ್ಳಾರಿ ಪೊಲೀಸರು ಸಮೀರ್‌ಗೆ ತಡರಾತ್ರಿ ನೋಟಿಸ್‌ ಜಾರಿ ಮಾಡಿ, ಬೆಳ್ಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3) ಅಡಿ ಜಾರಿ ಮಾಡಿದ್ದ ನೋಟಿಸ್‌ಗೆ ತಡೆ ನೀಡಿತ್ತು. ಇದೇ ವೇಳೆ ತನಿಖಾಧಿಕಾರಿಯ ನಡೆಯನ್ನು ಕಟುವಾಗಿ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Kannada Bar & Bench
kannada.barandbench.com