ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಆರೋಪಿಯಾಗಿರುವ ಮಹಿಳೆಗೆ ಥಳಿಸಿದ ಪ್ರಕರಣವನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ಬದಿಗೆ ಸರಿಸಿದೆ.
ದೂರುದಾರೆ ಮಮತಾ ಸಿಂಗ್ ಅವರು ಸಲ್ಲಿಸಿದ್ದ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ತರಬೇತಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ರಿಟ್ ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ಬೆಂಗಳೂರಿನ 39ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ವಜಾ ಮಾಡಲಾಗಿದೆ” ಎಂದು ಪೀಠ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಅಲೋಕ್ ಕುಮಾರ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಪ್ರಾಸಿಕ್ಯೂಷನ್‌ಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಇಲ್ಲದೇ ವಿಚಾರಣಾಧೀನ ನ್ಯಾಯಾಲಯವು ಸಂಜ್ಞೇ ಪರಿಗಣಿಸಲು ಸಿಆರ್‌ಪಿಸಿ ಸೆಕ್ಷನ್ 195ರ ಅಡಿ ಅವಕಾಶವಿಲ್ಲ. ಅಲ್ಲದೇ, ಈಚೆಗೆ ದೂರುದಾರೆ ಮಮತಾ ಸಿಂಗ್ ತೀರಿಕೊಂಡಿದ್ದಾರೆ” ಎಂದು ಪೀಠದ ಗಮನಸೆಳೆದಿದ್ದರು.
ಇದೇ ದೂರುದಾರೆ ಮಮತಾ ಸಿಂಗ್ ಅವರು ತಮ್ಮ ಪುತ್ರಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಸಿಐಡಿ ಪೊಲೀಸರು ಆರೋಪ ಪಟ್ಟಿಯನ್ನು ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದನ್ನು ವಜಾ ಮಾಡುವಂತೆ ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದು ವಿಚಾರಣಾ ಹಂತದಲ್ಲಿದೆ ಎಂಬುದನ್ನು ಇಲ್ಲಿ ನೆನೆಯಬಹುದು.
ಪ್ರಕರಣದ ಹಿನ್ನೆಲೆ: ತಮ್ಮ ಪುತ್ರಿಗೆ ಸಂಬಂಧಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ಮಮತಾ ಸಿಂಗ್ ಅವರು ನೀಡಿದ ದೂರು ಆಧರಿಸಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ದೂರು ಹಿಂಪಡೆಯುವಂತೆ ಸಂಬಂಧಿಕರ ಪರವಾಗಿ ಕ್ರಿಶ್ಚಿಯನ್ ಮಿಷನರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿಸ್ಟರ್ ಶಾಲಿನಿ ಅವರು ಬೆದರಿಕೆ ಹಾಕಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರಿಗೆ ದೂರು ನೀಡಲಾಗಿತ್ತು ಎಂದು ಮಮತಾ ವಿವರಿಸಿದ್ದರು.
ಆದರೆ, ಸಾಕಷ್ಟು ಬಾರಿ ಸಂಪರ್ಕಿಸಿದ್ದರೂ ಅಲೋಕ್ ಕುಮಾರ್ ಅವರು ಸಂಬಂಧಿತ ಪೊಲೀಸರಿಗೆ ದೂರು ದಾಖಲಿಸಲು ಆದೇಶಿಸಿರಲಿಲ್ಲ. ಬದಲಿಗೆ ತಮ್ಮ ಮೇಲೆ ದಾಳಿ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಲ್ಲಿಯೇ ಇದ್ದ ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ತಮ್ಮ ಮೇಲೆ ಹಲ್ಲೆ ಮಾಡಿಸಿದ್ದರು ಎಂದು ಆಕ್ಷೇಪಿಸಿ ಮಮತಾ ಸಿಂಗ್ ಅವರು ಖಾಸಗಿ ದೂರು ದಾಖಲಿಸಿದ್ದರು.
ಇದರ ಸಂಜ್ಞೇ ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಅಲೋಕ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 34, 120ಎ, 166ಎ, 323, 325, 351 ಮತ್ತು 506 ಅಡಿ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ವಿಚಾರಣಾಧೀನ ನ್ಯಾಯಾಲಯದ ಈ ಆದೇಶವನ್ನು ಹೈಕೋರ್ಟ್ ಇಂದು ಬದಿಗೆ ಸರಿಸಿದೆ.