Traffic & Road Safety ADGP Alok Kumar
Traffic & Road Safety ADGP Alok KumarTwitter

ಲಂಚದ ಆರೋಪ: ಎಡಿಜಿಪಿ ಅಲೋಕ್‌ ಕುಮಾರ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

“ಅರ್ಜಿದಾರರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ಬಳಿಕ ವಿಚಾರಣೆಗೆ ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯ ಸ್ವಾತಂತ್ರ್ಯವಾಗಿದೆ” ಎಂದಿರುವ ಹೈಕೋರ್ಟ್‌.

ಬೆಂಗಳೂರಿನ ವಯ್ಯಾಲಿಕಾವಲ್‌ನ ಬಾರ್‌ ಮತ್ತು ರೆಸ್ಟೊರೆಂಟ್‌ನಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ವಿಚಾರವಾಗಿ ಸಂಚಾರ ಮತ್ತು ರಸ್ತೆ ಸುರಕ್ಷೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರ ವಿರುದ್ಧ ಫೈಟರ್‌ ರವಿ ದಾಖಲಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ತಮ್ಮ ವಿರುದ್ಧದ ಪ್ರಕರಣ ಮತ್ತು ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದು ಕೋರಿ ಅಲೋಕ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಅರ್ಜಿದಾರ ಐಪಿಎಸ್ ಅಧಿಕಾರಿಯ ವಿರುದ್ಧ ವಿಚಾರಣೆಗೆ ಪರಿಗಣಿಸುವುದಕ್ಕಾಗಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಲೋಕಾಯುಕ್ತ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇಯ ಪರಿಗಣಿಸಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದ್ದು, “ಅರ್ಜಿದಾರರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ಬಳಿಕ ವಿಚಾರಣೆಗೆ ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯ ಸ್ವತಂತ್ರವಾಗಿದೆ” ಎಂದಿದೆ.

Also Read
ಲಂಚ ಬೇಡಿಕೆ: ಫೈಟರ್‌ ರವಿ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅಲೋಕ್‌ ಕುಮಾರ್‌

“ಆರೋಪ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಅರ್ಜಿದಾರ ಅಲೋಕ್ ಕುಮಾರ್ ಹೆಸರು ಉಲ್ಲೇಖವಾಗಿಲ್ಲ. ಅಲ್ಲದೇ, ಬಾರ್‌ನಲ್ಲಿ ನಡೆದ ಗಲಾಟೆ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ʼಬಿʼ ವರದಿ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಪ್ರಕರಣ ರದ್ದುಪಡಿಸಲಾಗಿದೆ” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

Also Read
ಎಡಿಜಿಪಿ ಅಲೋಕ್‌ ಕುಮಾರ್‌ರಿಂದ ₹1 ಕೋಟಿ ಲಂಚ ಬೇಡಿಕೆ: ಲೋಕಾಯುಕ್ತ ಪೊಲೀಸರ ʼಬಿʼ ವರದಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ಪ್ರಕರಣದ ಹಿನ್ನೆಲೆ: ಒಂದು ಕೋಟಿ ರೂಪಾಯಿ ಲಂಚಕ್ಕೆ ಅಲೋಕ್‌ ಕುಮಾರ್‌ ಬೇಡಿಕೆ ಇಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಮುಖ್ರಮ್‌ ಅವರು 2015ರ ಜೂನ್‌ 15ರಂದು ವಯ್ಯಾಲಿಕಾವಲ್‌ ಠಾಣೆಯ ಕಾನ್‌ಸ್ಟೆಬಲ್‌ ಚಂದ್ರು ಅಲಿಯಾಸ್‌ ಚಂದ್ರಶೇಖರ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 7, 13 (1) (ಡಿ) ಜೊತೆಗೆ 13 (2)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಫೈಟರ್‌ ರವಿ ಅಲಿಯಾಸ್‌ ಮಲ್ಲಿಕಾರ್ಜುನ್‌ ಅವರು 2022ರ ಜೂನ್‌ 10ರಂದು ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಲೋಕ್‌ ಕುಮಾರ್‌ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರವಾಗಿ ವಕೀಲ ಎಸ್‌ ಸುನೀಲ್‌ ಕುಮಾರ್‌ ವಕಾಲತ್ತು ಹಾಕಿದ್ದು, ಹಿರಿಯ ವಕೀಲ ಸಂದೇಶ್‌ ಚೌಟ ವಾದಿಸಿದ್ದರು. ಪ್ರತಿವಾದಿ ರವಿ ಪರವಾಗಿ ವಕೀಲ ಸಂಚನ್‌ ಜೈ ನಂದನ್‌ ವಾದಿಸಿದ್ದರು.

Attachment
PDF
Alok Kumar Vs Mallikarjun B M @ Ravi.pdf
Preview

Related Stories

No stories found.
Kannada Bar & Bench
kannada.barandbench.com