ಬಿಜೆಪಿ ಮುಖಂಡ ಅನಂತ್‌ ಕುಮಾರ್‌ ಹೆಗಡೆ ವಿರುದ್ಧದ ಕೋಮು ದ್ವೇಷ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ತಾನು ಯಾವುದೇ ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಶಾಂತಿ ಭಂಗ ಉಂಟಾಗುವ ಕೆಲಸ ಮಾಡದೇ ಇರುವುದರಿಂದ ಕುಮಟಾ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಹುರುಳಿಲ್ಲ.
Ananth Kumar Hegde & Karnataka HC
Ananth Kumar Hegde & Karnataka HC
Published on

“ದೇಶ ಮತ್ತು ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಕ್ಕೀಡಾಗಿರುವ ಅನೇಕ ಸಂಕೇತಗಳಿದ್ದು, ಅವುಗಳನ್ನು ಕಿತ್ತು ಹಾಕುವ ತನಕ ಹಿಂದೂ ಸಮಾಜ ವಿರಮಿಸುವುದಿಲ್ಲ” ಎಂದು ಹೇಳುವ ಮೂಲಕ ದ್ವೇಷ ಭಾಷಣ ಮಾಡಿದ ಆರೋಪದ ಸಂಬಂಧ ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ.

ಕುಮಟಾ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಹೆಗಡೆ ಪರ ವಕೀಲ ಪವನ್‌ ಚಂದ್ರಶೆಟ್ಟಿ ಅವರು “ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕ್ರಮದ ಭಾಗವಾಗಿ ಮಂತ್ರಾಕ್ಷತೆ ಹಂಚಿದ್ದೇನೆ. ಇಲ್ಲಿ ತಾನು ಯಾವುದೇ ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಶಾಂತಿ ಭಂಗ ಉಂಟಾಗುವ ಕೆಲಸ ಮಾಡದೇ ಇರುವುದರಿಂದ ಕುಮಟಾ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಹುರುಳಿಲ್ಲ. ಹೀಗಾಗಿ, ಪ್ರಕ್ರಿಯೆ ರದ್ದುಪಡಿಸಬೇಕು” ಎಂದರು.

ರಾಜ್ಯ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಅವರು “ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ತಿದ್ದುಪಡಿ ಅರ್ಜಿ ಸಲ್ಲಿಕೆ ಮಾಡಬೇಕಿದೆ” ಎಂದರು.

ಆಗ ಪವನ್‌ ಅವರು “ಆರೋಪ ಪಟ್ಟಿಗೂ ತಡೆಯಾಜ್ಞೆ ಪಡೆಯಲಾಗಿದೆ” ಎಂದರು. ಇದಕ್ಕೆ ಪೀಠವು “ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ಎಫ್‌ಐಆರ್‌ ರದ್ದುಪಡಿಸಲಾಗಿದೆ” ಎಂದಿತು. ಇದರಿಂದ ಹೆಗಡೆ ಅವರಿಗೆ ಸಂಸತ್‌ನಲ್ಲಿ ತೊಂದರೆಯಾಗಿರಬೇಕು ಎಂದರು.

ಇದಕ್ಕೆ ಜಗದೀಶ್‌ ಅವರು “ಈ ಬಾರಿ ಅವರು ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ” ಎಂದರು. ಇದಕ್ಕೆ ಧ್ವನಿಗೂಡಿಸಿದ ಪವನ್‌ ಚಂದ್ರಶೆಟ್ಟಿ ಅವರು “ಏಳು ಬಾರಿ ಸಂಸತ್‌ ಸದಸ್ಯರಾಗಿದ್ದರು. ಈಗ ಸಾಕು ಎಂದು ನಿರ್ಧರಿಸಿದ್ದಾರೆ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಅದುವೇ ಧರ್ಮ” ಎಂದರು. ಆಗ ಪೀಠವು “ನಿಜವಾಗಲೂ, ಆಗಬಹುದು” ಎಂದು ಮೌಖಿಕವಾಗಿ ಹೇಳಿತು.

Also Read
ಟಿಪ್ಪು ಜಯಂತಿ ವಿವಾದ‌: ‌ಹೆಗ್ಡೆ, ರವಿ ವಿರುದ್ಧದ ದೂರನ್ನು ಮರುಪರಿಗಣಿಸಲು ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ

ಪ್ರಕರಣದ ಹಿನ್ನೆಲೆ: 2024ರ ಜನವರಿ 13ರಂದು ರಾಮ ಮಂದಿರ ಉದ್ಘಾಟನೆಯ ಭಾಗವಾಗಿ ಮಂತ್ರಾಕ್ಷತೆ ವಿತರಿಸುವ ಬಿಜೆಪಿ ಅಭಿಯಾನದ ಭಾಗವಾಗಿ ಕುಮಟಾ ಪ್ರವಾಸಿ ಮಂದಿರಕ್ಕೆ ಬಂದಿದ್ದ ಅನಂತ್‌ ಕುಮಾರ್‌ ಹೆಗಡೆ ಅವರು ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಿ ಕುಮಟಾ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಗೌಡರ್‌ ದೂರು ನೀಡಿದ್ದರು. ಇದರ ಆಧಾರದಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153,153A,505(2) ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಉಳಿದಂತೆ ಮುಂಡಗೋಡ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 153(1)(2), 505(3), 295A, 298 ಅಡಿ ಮತ್ತು ಭಟ್ಕಳ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 143, 447, 153A, 149 ಮತ್ತು ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ಕಾಯಿದೆ ಸೆಕ್ಷನ್‌ಗಳಾದ 3, 4, 5 ಅಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ನವೆಂಬರ್‌ 28ಕ್ಕೆ ಹೈಕೋರ್ಟ್‌ ಮುಂದೂಡಿದೆ.

Kannada Bar & Bench
kannada.barandbench.com