ಸಮನ್ಸ್ ಜಾರಿಯಲ್ಲಿ ಅನುಸರಿಸಿರುವ ಕಾರ್ಯ ವಿಧಾನ ಸರಿಯಲ್ಲ ಎಂದು ವಿಚ್ಛೇದನ ಆದೇಶ ರದ್ದುಪಡಿಸಿದ ಹೈಕೋರ್ಟ್‌

ರಿಜಿಸ್ಟರ್ಡ್ ಪೋಸ್ಟ್ ಮೂಲಕ ಸಮನ್ಸ್ ಜಾರಿ ಮಾಡಿದ್ದು, ಅದರ ಲಕೋಟೆಯ ಮೇಲಿದ್ದ ‘ಸ್ವೀಕರಿಸಿಲ್ಲ’ ಎಂಬ ಹಿಂಬರಹದ ಆಧಾರದ ಮೇಲೆ ನ್ಯಾಯಾಲಯ ಪ್ರಕರಣವನ್ನು ಏಕಪಕ್ಷೀಯವಾಗಿ ನಿರ್ಧರಿಸಿದೆ ಎಂದಿರುವ ನ್ಯಾಯಾಲಯ.
Justices Alok Aradhe and Vijaykumar A. Patil
Justices Alok Aradhe and Vijaykumar A. Patil

ಪತಿ-ಪತ್ನಿಯ ನಡುವಿನ ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಪತ್ನಿಗೆ ಸೂಕ್ತ ರೀತಿಯಲ್ಲಿ ಸಮನ್ಸ್ ಜಾರಿ ಮಾಡದೇ ಏಕಪಕ್ಷೀಯವಾಗಿ ವಿಚಾರಣೆ ನಡೆಸಿ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರಿನ ವಿನೋಬಾನಗರದ ಮಹಿಳೆಯೊಬ್ಬರು 2017ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

ನಾಗರಿಕ ಪ್ರಕ್ರಿಯಾ ಸಂಹಿತೆಯ ನಿಯಮ 17ರ ಪ್ರಕಾರ ಪ್ರತಿವಾದಿಯು ಸಮನ್ಸ್ ಸ್ವೀಕೃತಿಗೆ ಸಹಿ ಹಾಕದಿದ್ದರೆ ಅಥವಾ ಸಮನ್ಸ್ ನೀಡುವ ಸಂದರ್ಭದಲ್ಲಿ ಮನೆಯಲ್ಲಿರದಿದ್ದರೆ, ಅಲ್ಲಿಗೆ ತೆರಳಿದ್ದ ಅಧಿಕಾರಿ ಪ್ರತಿವಾದಿಯ ಮನೆಯ ಮುಂಬಾಗಿಲಿನ ಮೇಲೆ ಅಥವಾ ಮನೆಯ ಯಾವುದಾದರೂ ಒಂದು ಎದ್ದು ಕಾಣಬಹುದಾದ ಜಾಗದಲ್ಲಿ ಸಮನ್ಸ್ ಪ್ರತಿಯನ್ನು ಅಂಟಿಸಿ, ಮೂಲ ಪ್ರತಿಯನ್ನು ನ್ಯಾಯಾಲಯಕ್ಕೆ ಹಿಂದಿರುಗಿಸಬೇಕು. ಯಾವ ಕಾರಣಕ್ಕೆ ಆ ರೀತಿ ಮಾಡಲಾಗಿದೆ ಎಂಬ ಕಾರಣದ ಜತೆಗೆ, ಮನೆಯನ್ನು ಗುರುತಿಸಿದ ವ್ಯಕ್ತಿಯ ಹೆಸರು ಹಾಗೂ ವಿಳಾಸ ಮತ್ತು ಯಾರ ಉಪಸ್ಥಿತಿಯಲ್ಲಿ ಸಮನ್ಸ್ ಪ್ರತಿಯನ್ನು ಅಂಟಿಸಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು. ಪ್ರಕರಣದಲ್ಲಿ ಈ ಪ್ರಕ್ರಿಯೆ ಪಾಲನೆಯಾಗಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ರಿಜಿಸ್ಟರ್ಡ್ ಪೋಸ್ಟ್ ಮೂಲಕ ಸಮನ್ಸ್ ಜಾರಿ ಮಾಡಿದ್ದು, ಅದರ ಲಕೋಟೆಯ ಮೇಲಿದ್ದ ‘ಸ್ವೀಕರಿಸಿಲ್ಲ’ ಎಂಬ ಹಿಂಬರಹದ ಆಧಾರದ ಮೇಲೆ ನ್ಯಾಯಾಲಯ ಪ್ರಕರಣವನ್ನು ಏಕಪಕ್ಷೀಯವಾಗಿ ನಿರ್ಧರಿಸಿದೆ. ಸಮನ್ಸ್ ನೀಡುವ ವಿಚಾರದಲ್ಲಿ ಕೌಟುಂಬಿಕ ನ್ಯಾಯಾಲಯ ಅನುಸರಿಸಿರುವ ಕಾರ್ಯ ವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ದಂಪತಿಗೆ ವಿಚ್ಛೇದನ ನೀಡಿ 2017ರ ಏಪ್ರಿಲ್‌ 28ರಂದು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ. ಜತೆಗೆ, ಪ್ರಕರಣವನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದ್ದು, ಉಭಯ ಪಕ್ಷಕಾರರಿಗೆ ಅವಕಾಶ ನೀಡಿ 6 ತಿಂಗಳ ಒಳಗೆ ಪ್ರಕರಣವನ್ನು ಕಾನೂನು ಪ್ರಕಾರ ನಿರ್ಧರಿಸಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ತುಮಕೂರಿನ ದಂಪತಿ 2006ರಲ್ಲಿ ಇಸ್ಲಾಂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯದು ಕೂಡು ಕುಟುಂಬವಾಗಿದ್ದು, ಆತನ ಪಾಲಕರು ಹಾಗೂ ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ, ಸಣ್ಣ ಪುಟ್ಟ ವಿಷಯಗಳಿಗೂ ಕುಟುಂಬ ಸದಸ್ಯರೊಡನೆ ಜಗಳ ಮಾಡುತ್ತಿದ್ದ ಪತ್ನಿ ಕಾರಣವೇ ಇಲ್ಲದೆ ಮನೆ ತೊರೆದು ಹೋಗಿದ್ದಾಳೆ. ಮನೆಗೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಪತ್ನಿಗೆ ಬೇರೊಬ್ಬರ ಜತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದ ಪತಿ, ವಿಚ್ಛೇದನ ಕೋರಿ ತುಮಕೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸಮನ್ಸ್ ನೀಡಿದ್ದರೂ ಪತ್ನಿ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣ ನೀಡಿ, ನ್ಯಾಯಾಲಯ ಪತ್ನಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯವಾಗಿ ವಿಚ್ಛೇದನ ನೀಡಿ ಆದೇಶಿಸಿತ್ತು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಪತ್ನಿಯು ಕೌಟುಂಬಿಕ ನ್ಯಾಯಾಲಯದಿಂದ ಯಾವುದೇ ಸಮನ್ಸ್ ಅಥವಾ ನೋಟಿಸ್ ಅನ್ನು ಸ್ವೀಕರಿಸಿಲ್ಲ. ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೇ ಕೌಟುಂಬಿಕ ನ್ಯಾಯಾಲಯ ಏಕಪಕ್ಷೀಯ ಆದೇಶ ನೀಡಿದೆ. ಆದ್ದರಿಂದ, ವಿಚ್ಛೇದನ ಮಂಜೂರು ಮಾಡಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಹಾಗೂ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಹಿಂದಿರುಗಿಸಿ ಹೊಸದಾಗಿ ಪರಿಗಣಿಸಲು ಆದೇಶಿಸಬೇಕು ಎಂದು ಕೋರಿದ್ದರು. ಇದನ್ನು ಹೈಕೋರ್ಟ್‌ ಪುರಸ್ಕರಿಸಿದೆ.

Kannada Bar & Bench
kannada.barandbench.com