
ಭಾರತೀಯ ಪಾಸ್‌ಪೋರ್ಟ್ ಮತ್ತು ಪೌರತ್ವ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಪಾಕಿಸ್ತಾನದ ತಂದೆ ಮತ್ತು ಭಾರತೀಯ ತಾಯಿಗೆ ದುಬೈನಲ್ಲಿ ಜನಿಸಿದ ಮಕ್ಕಳಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ತಿರಸ್ಕರಿಸಿದೆ.
ತಮ್ಮ ಇಬ್ಬರು ಮಕ್ಕಳಿಗೆ ಭಾರತೀಯ ಪೌರತ್ವ ಮತ್ತು ಪಾಸ್‌ಪೋರ್ಟ್ ನೀಡಲು ಕೋರಿ 2022ರ ಮೇ 5ರಂದು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿದ್ದ ಮನವಿ ಪರಿಗಣಿಸಲು ನಿರ್ದೇಶಿಸುವಂತೆ ಕೋರಿ ಅರ್ಜಿದಾರ ಮಕ್ಕಳ ತಾಯಿ ಅಮೀನಾ ರಹೀಲ್ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಲು ನಿರಾಕರಿಸಿದೆ.
“ಅರ್ಜಿದಾರ ಮಕ್ಕಳು ಪಾಕಿಸ್ತಾನ ಕಾನೂನಿನ ಅನ್ವಯ ತಮ್ಮ ಪೌರತ್ವ ತ್ಯಜಿಸಿಲ್ಲ. ಇಂದಿಗೂ ಅವರು ಪಾಕ್ ಪ್ರಜೆಗಳಾಗಿದ್ದಾರೆ. ಪಾಕಿಸ್ತಾನದ ಪೌರತ್ವ ತ್ಯಜಿಸದ ಹೊರತು ಅವರು ಭಾರತದ ಪ್ರಜೆಗಳಾಗಲಾಗದು. ಮಕ್ಕಳಿಗೆ ಪೌರತ್ವ ಇಲ್ಲದಿರುವುದು ಅಥವಾ ಭೂರಹಿತ ಅಥವಾ ರಾಜ್ಯರಹಿತವಾದ ಪ್ರಕರಣ ಇದಲ್ಲ. 21 ವರ್ಷ ದಾಟುವವರೆಗೆ ಪೌರತ್ವ ತ್ಯಜಿಸಲಾಗದು ಎಂದು ಪಾಕಿಸ್ತಾನದ ಕಾನೂನು ಹೇಳುತ್ತದೆ. ಹೀಗಾಗಿ, ಪಾಕಿಸ್ತಾನದ ಪೌರತ್ವ ತ್ಯಜಿಸದ ಹೊರತು ಪೌರತ್ವ ಕಾಯಿದೆ 1955 ಅಡಿ ಈಗಾಗಲೇ ಬೇರೊಂದು ದೇಶದ ಪ್ರಜೆಗಳಾಗಿರುವವರೆಗೆ ಭಾರತದ ಪೌರತ್ವ ನೀಡಲು ಅನುಮತಿಸಲಾಗದು. ಅವರು ವಯಸ್ಕರು ಅಥವಾ ಮಕ್ಕಳೇ ಆಗಿರಲಿ ಬೇರೊಂದು ದೇಶದ ಪಾಸ್‌ಪೋರ್ಟ್ ಹೊಂದಿದ್ದಾರೆ. ಇಂಥ ಪರಿಸ್ಥಿತಿಯಲ್ಲಿಯೂ ಪಾಕಿಸ್ತಾನದ ಕಾನೂನು ಹೊಂದಿಕೊಳ್ಳುವ ರೀತಿಯಲ್ಲಿ ಇಲ್ಲ ಎಂದಾದರೆ ಈ ದೇಶದ ಕಾನೂನು ಸಹ ಅದೇ ರೀತಿ ಇರುತ್ತದೆ. ಇಂಥ ವಿಶೇಷ ಸಂದರ್ಭದಲ್ಲೂ ಕಾನೂನನ್ನು ಬದಲಾಯಿಸಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಅಲ್ಲದೇ, “ಅರ್ಜಿದಾರ ಮಕ್ಕಳ ತಂದೆಯು ಪಾಕಿಸ್ತಾನ ಪ್ರಜೆಯಾಗಿದ್ದು, ಪಾಕಿಸ್ತಾನದ ಪೌರತ್ವ ತ್ಯಜಿಸಿದ ಬಳಿಕ ಅವರು ಭಾರತದ ಪೌರತ್ವ ಕೋರಬಹುದಾಗಿದೆ. ತಾಯಿ ಭಾರತೀಯಳಾಗಿದ್ದರೂ ಮಕ್ಕಳು ಪಾಕಿಸ್ತಾನ ಪ್ರಜೆಗಳಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆ 1955ರ ಭಾಷೆಯ ಮೇಲಿನ ದಾಳಿ ಮಾಡದ ಹೊರತು (ತಪ್ಪಾಗಿ ಅರ್ಥೈಸದ ಹೊರತು) ಮಕ್ಕಳಿಗೆ ಭಾರತದ ಪೌರತ್ವ ಕಲ್ಪಿಸಲಾಗದು. ಕಾಯಿದೆಯ ಭಾಷೆಯ ಮೇಲೆ ದಾಳಿ ಮಾಡುವ ಇರಾದೆಯನ್ನು ನ್ಯಾಯಾಲಯ ಹೊಂದಿಲ್ಲ” ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
“ಅಪ್ರಾಪ್ತರಿಗೆ ಪೌರತ್ವ ನೀಡಲು ಕಾಯಿದೆಯ ಸೆಕ್ಷನ್ 5(1)(ಡಿ) ಅಡಿ ಮಕ್ಕಳ ತಂದೆ-ತಾಯಿ ಇಬ್ಬರೂ ಭಾರತೀಯ ಪ್ರಜೆಗಳಾಗಿರಬೇಕು. ಪೌರತ್ವ ಕಲ್ಪಿಸಲು ಅಗತ್ಯವಾದ ಎಲ್ಲಾ ದಾಖಲೆಗಳನ್ನು ಸಂಬಂಧಿತ ಪ್ರಾಧಿಕಾರದ ಮುಂದೆ ಇಡಬೇಕು. ಅಪ್ರಾಪ್ತರಿಗೆ ಪೌರತ್ವ ತ್ಯಜಿಸಲು ಪಾಕಿಸ್ತಾನದ ಕಾನೂನು ಅನುಮತಿ ನೀಡದಿದ್ದಾಗ ಅಂಥವರಿಗೆ ಪೌರತ್ವ ಕಲ್ಪಿಸಲು ಈ ದೇಶದ ಕಾನೂನು ಸಮ್ಮತಿಸುವುದಿಲ್ಲ. ಹೀಗಾಗಿ, ಅರ್ಜಿದಾರ ಮಕ್ಕಳ ತಾಯಿಯು ಕಾನೂನಿನ ಅಡಿ ಪೌರತ್ವ ಪಡೆಯಲು ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಮಕ್ಕಳು ಪಾಕಿಸ್ತಾನದ ಪಾಸ್‌ಪೋರ್ಟ್ ನೀಡಿದ್ದು, ಪೌರತ್ವ ತ್ಯಜಿಸಿಲ್ಲ. ಹೀಗಾಗಿ, ಅವರು ಇಂದಿಗೂ ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ. ಪಾಕ್ ಪೌರತ್ವ ತ್ಯಜಿಸದ ಹೊರತು ಮಕ್ಕಳಿಗೆ ಪೌರತ್ವ ಕಲ್ಪಿಸುವಂತೆ ಕೋರಿರುವ ತಾಯಿಯ ಮನವಿ ಪರಿಗಣಿಸುವಂತೆ ವಿದೇಶಾಂಗ ಇಲಾಖೆಗೆ ನಿರ್ದೇಶಿಸಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಅಮೀನಾ ರಹೀಲ್ ಮತ್ತು ಪಾಕಿಸ್ತಾನದ ಅಸ್ಸಾದ್ ಮಲಿಕ್ 2002ರ ಏಪ್ರಿಲ್‌ನಲ್ಲಿ ದುಬೈನಲ್ಲಿ ವಿವಾಹವಾಗಿದ್ದರು. ದಂಪತಿಗೆ 2004ರಲ್ಲಿ ಐಷಾ ಮಲಿಕ್ (17 ವರ್ಷ) ಮತ್ತು 2008ರಲ್ಲಿ ಅಹ್ಮದ್ ಮಲಿಕ್ (14 ವರ್ಷ) ಜನಿಸಿದ್ದರು.
12 ವರ್ಷಗಳ ಆನಂತರ ಸಂಸಾರದಲ್ಲಿ ಬಿರುಕು ಉಂಟಾಗಿ 2014ರ ಸೆಪ್ಟೆಂಬರ್‌ನಲ್ಲಿ ಅಮೀನಾ ಮತ್ತು ಅಸ್ಸಾದ್ ಅವರು ದುಬೈನ ನ್ಯಾಯಾಲಯದಲ್ಲಿ ವೈಯಕ್ತಿಕ ಕಾನೂನಿನ ಅಡಿ ವಿಚ್ಚೇದನ ಪಡೆದಿದ್ದು, ಅಪ್ರಾಪ್ತ ಮಕ್ಕಳನ್ನು ಅಮೀನಾ ಅವರ ವಶಕ್ಕೆ ನೀಡಲಾಗಿತ್ತು.
ಆನಂತರ ಅರ್ಜಿದಾರ ಮಕ್ಕಳು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತೆರಳಿ ಭಾರತೀಯ ಪೌರತ್ವ ನೀಡುವಂತೆ ಮನವಿ ಸಲ್ಲಿಸಿದ್ದರು. ಪಾಕಿಸ್ತಾನ ಪ್ರಜೆಯ ಮಕ್ಕಳಾಗಿರುವುದರಿಂದ ಪಾಸ್‌ಪೋರ್ಟ್ ಅನ್ನು ತಮ್ಮ ವಶಕ್ಕೆ ನೀಡುವಂತೆ ಭಾರತೀಯ ರಾಯಭಾರ ಕಚೇರಿಯು ಮಕ್ಕಳಿಗೆ ಸೂಚಿಸಿತ್ತು. ಹೀಗಾಗಿ, ಅರ್ಜಿದಾರರು ತಮ್ಮ ಪಾಸ್‌ಪೋರ್ಟ್‌ಗಳನ್ನು ದುಬೈನಲ್ಲಿನ ಭಾರತೀಯ ರಾಯಭಾರ ಕಚೇರಿಯ ವಶಕ್ಕೆ ನೀಡಿದ್ದರು. ಇದಕ್ಕೆ ಪಾಕಿಸ್ತಾನ ರಾಯಭಾರ ಕಚೇರಿಯು ನಿರಾಪೇಕ್ಷಣ ಪತ್ರ ನೀಡಿತ್ತು.
ಆನಂತರ ಅರ್ಜಿದಾರರು ಭಾರತಕ್ಕೆ ಬರಲು ಭಾರತೀಯ ಪಾಸ್‌ಪೋರ್ಟ್ ಬೇಕಿತ್ತು. ಅರ್ಜಿದಾರರು ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅರ್ಜಿದಾರರ ಪೌರತ್ವವು ಗೃಹ ಸಚಿವಾಲಯದಲ್ಲಿ ಬಾಕಿ ಇದೆ ಎಂದು ಹೇಳಿ ಮಾನವೀಯತೆಯ ಆಧಾರದಲ್ಲಿ ಅವರಿಗೆ 2021ರ ಮೇನಲ್ಲಿ ತಾತ್ಕಾಲಿಕ ಭಾರತೀಯ ಪಾಸ್‌ಪೋರ್ಟ್ ನೀಡಲಾಗಿತ್ತು. ಇದರ ಆಧಾರದಲ್ಲಿ ಭಾರತಕ್ಕೆ ಬಂದಿರುವ ಅರ್ಜಿದಾರರು ತಾಯಿಯ ಜೊತೆ ಇಲ್ಲೇ ನೆಲೆಸಿದ್ದಾರೆ. ಪಾಸ್‌ಪೋರ್ಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಮನವಿ ಸಲ್ಲಿಸುತ್ತಾ ಬರಲಾಗಿದ್ದು, ಸರ್ಕಾರವು ಅದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಈಗ ನ್ಯಾಯಾಲಯವು ಅವರ ಕೋರಿಕೆಯನ್ನು ತಿರಸ್ಕರಿಸಿದೆ.