
ಬೆಂಗಳೂರು ನಗರದ ಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ಸುಪರ್ದಿಗೆ ಪಡೆದು ರಾಜ್ಯ ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎನ್ನುವ ಮನವಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಸರ್ಕಾರದ ಆದೇಶ ರದ್ದು ಕೋರಿ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿ ಮಂಡಳಿ ಸಲ್ಲಿಸಿದ್ದ ಅರ್ಜಿಯ ಮಧ್ಯಂತರ ಕೋರಿಕೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಪೀಠವು ತಿರಸ್ಕರಿಸಿದೆ.
“ದೇವಸ್ಥಾನದ ಆಡಳಿತವನ್ನು ನಿಯಂತ್ರಣಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾಕ್ಷ್ಯದ ರೂಪದಲ್ಲಿ ಮೆಮೊ ಜೊತೆಗೆ ರಾಜ್ಯ ಸರ್ಕಾರ ಸಲ್ಲಿಸಿದೆ. ಮಹಜರ್, ಇನ್‌ವೆಂಟ್ರಿ ದಾಖಲಿಸಿದ್ದು, ದೇವಸ್ಥಾನವನ್ನು ವಶಕ್ಕೆ ಪಡೆಯುವ ಕೆಲಸ ಪೂರ್ಣಗೊಂಡಿದೆ. ಕಾಯಿದೆಯ ಪ್ರಕಾರ ಸರ್ಕಾರ ಅಧಿಕಾರ ಚಲಾಯಿಸಿದೆ. ಈ ಹಂತದಲ್ಲಿ ಆದೇಶಕ್ಕೆ ತಡೆ ನೀಡುವ ಮೂಲಕ ಮಧ್ಯಪ್ರವೇಶ ಮಾಡಲು ಯಾವುದೇ ಆಧಾರವಿಲ್ಲ. ಹೀಗಾಗಿ, ಮಧ್ಯಂತರ ಕೋರಿಕೆಯನ್ನು ತಿರಸ್ಕರಿಸಲಾಗಿದೆ. ರಾಜ್ಯ ಸರ್ಕಾರವು ಹತ್ತು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಪ್ರಕ್ರಿಯೆಯ ದಾಖಲೆಗಳನ್ನು ಈ ನ್ಯಾಯಾಲಯದ ಮುಂದೆ ಇಡಬೇಕು. ಎರಡು ವಾರಗಳ ಬಳಿಕ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
“ಸರ್ಕಾರವು ಸಂಬಂಧಿತರಿಗೆ ಷೋಕಾಸ್ ನೋಟಿಸ್ ನೀಡಿದ್ದು, ತನಿಖೆ ನಡೆಸಿದೆ. ಅರ್ಜಿದಾರರಿಗೆ ತಮ್ಮ ವಾದ ಮಂಡಿಸಲು ಸೂಕ್ತ ಕಾಲಾವಕಾಶ ನೀಡಲಾಗಿದೆ. ತನಿಖಾ ವರದಿಯನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಖಾತೆಯಲ್ಲಿ ವ್ಯತ್ಯಾಸಗಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದ್ದು, ದಾಖಲೆಗಳನ್ನು ಸೃಷ್ಟಿಸಲಾಗಿದೆ. ನೋಟಿಸ್ ನೀಡಿದ ಬಳಿಕ ವರದಿ ಸಿದ್ಧಪಡಿಸಲಾಗಿದೆ ಎಂಬುದನ್ನೂ ತನಿಖಾ ವರದಿಯಲ್ಲಿ ವಿವರಿಸಲಾಗಿದೆ. ಹುಂಡಿಯ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಲಾಗಿದೆ. ಇದನ್ನು ಅಲ್ಲಗಳೆಯಲಾಗಿಲ್ಲ" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
ಮುಂದುವರೆದು, "ಕ್ರಿಮಿನಲ್ ಪ್ರಕರಣ ದಾಖಲಿಸಿ, ಕೆಲವು ಟ್ರಸ್ಟಿಗಳನ್ನು ತೆಗೆಯಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರೂ ಹುಂಡಿಯ ಹಣವನ್ನು ದುರ್ಬಳಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ವಿಡಿಯೊಗಳನ್ನು ನ್ಯಾಯಾಲಯಕ್ಕೆ ತೋರಿಸಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳ ಕಾಯಿದೆ ಸೆಕ್ಷನ್ 43ರ ಅಡಿ ಪ್ರಕ್ರಿಯೆ ಮೇಲ್ನೋಟಕ್ಕೆ ಅನುಸರಿಸಲಾಗಿದೆ. ಇಡೀ ಪ್ರಕ್ರಿಯೆಯು ಪ್ರಾಥಮಿಕ ಹಂತದಲ್ಲಿದ್ದು, ಆಯುಕ್ತರು ಸಂಸ್ಥೆಯ ಆಡಳಿತ ನಿರ್ವಹಣೆಯನ್ನು ಸರ್ಕಾರ ತೆಗೆದುಕೊಳ್ಳುವುದಕ್ಕೆ ಶಿಫಾರಸ್ಸು ಮಾಡಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪಿ ಪ್ರಸನ್ನಕುಮಾರ್ ಅವರು “ಆಯುಕ್ತರ ತೃಪ್ತಿಯನ್ನು ಆಕ್ಷೇಪಾರ್ಹ ಆದೇಶ ಬಿಂಬಿಸುವುದಿಲ್ಲ. ಎಫ್‌ಐಆರ್ ದಾಖಲಿಸಲಾಗಿದ್ದು, ಟ್ರಸ್ಟಿಗಳನ್ನು ತೆಗೆದುಹಾಕಲಾಗಿದೆ. ಸರ್ಕಾರವು ಆವೇಗದಲ್ಲಿ ದಾಖಲೆಯನ್ನು ಕೋರಿದ್ದು, ಅವುಗಳನ್ನು ಒದಗಿಸಲಾಗಿದೆ” ಎಂದು ಆಕ್ಷೇಪಿಸಿದ್ದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್ ದೇವದಾಸ್ ಅವರು “ತನಿಖೆ ನಡೆಸಿ, ಅದರ ವರದಿಯನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಸಲ್ಲಿಸಲಾಗಿದೆ. ವರದಿಯಲ್ಲಿ ದೇವಸ್ಥಾನ ನಿರ್ವಹಣೆ ಸಮಸ್ಯೆ ಪತ್ತೆಯಾಗಿದ್ದು, ಗುಂಪುಗಳ ನಡುವಿನ ಸಂಘರ್ಷ ಸಾಬೀತಾಗಿದೆ. ಹುಂಡಿಯ ಹಣವನ್ನು ದುರ್ಬಳಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ತುಣುಕುಗಳನ್ನು ವ್ಯಾಪಕವಾಗಿ ಹರಿಯಬಿಡಲಾಗಿದೆ” ಎಂದಿದ್ದರು.
ಹಿಂದೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ ಸೆಕ್ಷನ್ 42, 43ರ ಅಡಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಘೋಷಿತ ಸಂಸ್ಥೆ ಎಂದು ಹೇಳಲಾಗಿದೆ. ಇದನ್ನು ಸರ್ಕಾರ ತನ್ನ ವಶಕ್ಕೆ ಪಡೆದಿರುವ ಕಾನೂನು ಬದ್ಧತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.