

ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿ, ಜನವರಿ 9ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.
ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಂಬಂಧ ಆಧರಿಸಲಾದ ಎಲ್ಲ ವಾದಗಳನ್ನು ಮುಕ್ತವಾಗಿರಿಸಲಾಗಿದೆ. ಅರ್ಜಿದಾರರ ಮನವಿ ಕುರಿತಂತೆ ವಿಚಾರಣಾರ್ಹತೆಯ ಮೇಲೆ ಯಾವುದೇ ತೀರ್ಮಾನವನ್ನು ನ್ಯಾಯಾಲಯ ದಾಖಲಿಸಿಲ್ಲ. ಅರ್ಜಿದಾರರು ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕಿದೆ ಎಂಬ ಕಾರಣಕ್ಕೆ ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದೆ.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ವಿನಯ್ ಕುಲಕರ್ಣಿ ಅವರು ನೇರ ಅಥವಾ ಪರೋಕ್ಷವಾಗಿ ಸಾಕ್ಷಿಗಳನ್ನು ಪ್ರಭಾವಿಸಬಾರದು ಎಂಬ ಷರತ್ತು ವಿಧಿಸಿತ್ತು. ಇದನ್ನು ವಿನಯ್ ಕುಲಕರ್ಣಿ ಉಲ್ಲಂಘಿಸಿದ್ದಾರೆ. ಇಬ್ಬರು ಸಾಕ್ಷಿಗಳನ್ನು ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿ ಸಾಕ್ಷಿ ನುಡಿಯಲು ವಿನಯ್ ಕುಲಕರ್ಣಿ ಮತ್ತು ಇನ್ನೊಬ್ಬ ಆರೋಪಿ 2024ರ ನವೆಂಬರ್‌ನಲ್ಲಿ ಪ್ರಯತ್ನಿಸಿರುವುದರಿಂದ ಅವರ ಜಾಮೀನು ರದ್ದುಪಡಿಸಬೇಕು ಎಂದು 2024 ಡಿಸೆಂಬರ್‌ನಲ್ಲಿ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತ್ತು” ಎಂದಿದ್ದರು.
“ಕೆಲವು ಸಾಕ್ಷಿಗಳನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ ಎಂಬ ಕಾರಣಕ್ಕೆ ಜಾಮೀನು ನೀಡಬೇಕು ಎಂದು ವಿನಯ್ ಕುಲಕರ್ಣಿ ಕೇಳಿದ್ದಾರೆ. ಸಾಕ್ಷಿಗಳ ವಿಚಾರಣೆ ಮುಗಿದಿರುವುದು ಪರಿಸ್ಥಿತಿಯ ಬದಲಾವಣೆಯಾಗಿದೆ ಎಂದಿದ್ದಾರೆ. ಜಾಮೀನು ನೀಡಿದರೆ, ಸಾಕ್ಷಿ ನುಡಿದಿರುವವರು ಸುರಕ್ಷಿತವಾಗಿರಲಿದ್ದಾರೆಯೇ ಎಂಬುದನ್ನೂ ನೋಡಬೇಕಿದೆ. ಒಮ್ಮೆ ಷರತ್ತು ಉಲ್ಲಂಘಿಸಿದರೆ ಮತ್ತೊಮ್ಮೆ ಜಾಮೀನು ಕೋರುವ ಹಕ್ಕನ್ನು ಆರೋಪಿ ಕಳೆದುಕೊಳ್ಳುತ್ತಾರೆ” ಎಂದಿದ್ದರು.
“ಪ್ರಕರಣದಲ್ಲಿ 2, 4, 5,10, 11 & 40 ನೇ ಸಾಕ್ಷಿಗಳು ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷಿ ನುಡಿದಿದ್ದಾರೆ. ಆ ಸಾಕ್ಷಿಗಳು ಏನು ನುಡಿದಿದ್ದಾರೆ ಎಂಬುದನ್ನು ಪರಿಶೀಲಿಸದೇ, ಪರಿಸ್ಥಿತಿ ಬದಲಾಗಿದೆ ಎಂಬ ಕಾರಣಕ್ಕೆ ವಿನಯ್‌ಗೆ ಜಾಮೀನು ನೀಡಲಾಗದು” ಎಂದು ಆಕ್ಷೇಪಿಸಿದ್ದರು.
2016ರ ಜೂನ್ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯೋಗೀಶ್ ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(B) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯುದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 13(2) ಜೊತೆಗೆ 13(1)(d) ಅಡಿ ಆರೋಪ ಪಟ್ಟಿ ಸಲ್ಲಿಸಿದೆ.