

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ಕಾಯ್ದಿರಿಸಿದೆ.
ಸುದೀರ್ಘವಾಗಿ ಮೂರು ದಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ಇಂದು ಆದೇಶ ಕಾಯ್ದಿರಿಸಿತು.
ಪ್ರಕರಣದಲ್ಲಿ ಹದಿನೈದನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ನ್ಯಾಯದಾನ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿರುವ ಆಧಾರದಲ್ಲಿ ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತೇ ವಿನಾ ಮೆರಿಟ್ ಮೇಲಲ್ಲ. ಜಾಮೀನು ಕೋರುವುದು ಅರ್ಜಿದಾರರ ಹಕ್ಕಾಗಿದೆ. ಸುಪ್ರೀಂ ಕೋರ್ಟ್ ಮತ್ತೆ ಜಾಮೀನು ಕೋರುವಂತಿಲ್ಲ ಎಂದು ಹೇಳಿಲ್ಲ. ಜಾಮೀನು ರದ್ದತಿಯೇ ಬೇರೆ, ಜಾಮೀನು ಆದೇಶ ಬದಿಗೆ ಸೇರಿಸುವುದೇ ಬೇರೆ. ವಿನಯ್‌ಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ಆಧರಿಸಿರುವ ಪಪ್ಪು ಯಾದವ್ ಪ್ರಕರಣದ ತೀರ್ಪು ಸೇರಿ ಯಾವುದೂ ಹಾಲಿ ಪ್ರಕರಣಕ್ಕೆ ಅನ್ವಯಿಸುವುದಿಲ್ಲ” ಎಂದು ವಿವರಿಸಿದರು.
“ವಿನಯ್ ಒಂಭತ್ತು ತಿಂಗಳಿಂದ ಜೈಲಿನಲ್ಲಿದ್ದಾರೆ. ತನ್ನ ಆದೇಶ ಸರಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿಲ್ಲ. ವಿಚಾರಣೆಯಲ್ಲಿ ಹಸ್ತಕ್ಷೇಪದ ಆಧಾರದಲ್ಲಿ ಜಾಮೀನು ರದ್ದುಪಡಿಸಿದೆ. ಈಗ ಎಲ್ಲಾ ಸಾಕ್ಷಿಗಳ ದಾಖಲು ಮುಗಿದಿದೆ. ಇಬ್ಬರು ತನಿಖಾಧಿಕಾರಿಗಳ ಹೇಳಿಕೆ ದಾಖಲು ಮಾತ್ರ ಬಾಕಿ ಇದೆ. ಈಗ ಯಾವ ಕಾರಣಕ್ಕಾಗಿ ವಿನಯ್ ಕುಲಕರ್ಣಿ ಜೈಲಿನಲ್ಲಿರಬೇಕು? ನ್ಯಾಯದಾನ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎನ್ನಲಾದ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ” ಎಂದರು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ಎರಡು ಸಾಕ್ಷಿಗಳ ಜೊತೆ ಸಿಬಿಐ ಅಧಿಕಾರಿಗಳು ಇನ್ನೆರಡು ಹೆಚ್ಚುವರಿ ಸಾಕ್ಷಿಗಳ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಪೀಠದ ಗಮನಕ್ಕೆ ತರಬಯಸುತ್ತೇನೆ. ವಿನಯ್ ಹೊಸದಾಗಿ ಜಾಮೀನು ಕೋರುತ್ತಿಲ್ಲ. ಸಾಕ್ಷಿಗಳ ದಾಖಲು ಮುಗಿದಿದೆ, ಪರಿಸ್ಥಿತಿ ಬದಲಾಗಿದೆ ಜಾಮೀನು ನೀಡಬೇಕು ಎಂದು ಕೋರಿದ್ದಾರೆ. ಇದು ಸಾಧ್ಯವಿಲ್ಲ” ಎಂದರು.
2020ರ ನವೆಂಬರ್ 5ರಂದು ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. 2021ರ ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. 2025ರ ಜೂನ್ 7ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಯುತ್ತಿರುವಾಗ ವಿನಯ್ ಕುಲಕರ್ಣಿ ಅವರು ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಹೇಳಿ, ಜಾಮೀನು ರದ್ದುಗೊಳಿಸಿತ್ತು. 2025ರ ಜೂನ್ 13ರಿಂದ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
2016ರ ಜೂನ್ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯೋಗೀಶ್ ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(B) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯುದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 13(2) ಜೊತೆಗೆ 13(1)(d) ಅಡಿ ಆರೋಪ ಪಟ್ಟಿ ಸಲ್ಲಿಸಿದೆ.