ಮಾಪ್‌ ಅಪ್‌ ಸುತ್ತಿನಲ್ಲಿ ಎಂಬಿಬಿಎಸ್‌ ಸೀಟು ಬಯಸಿದ್ದ ಕಲಬುರ್ಗಿ ವಿದ್ಯಾರ್ಥಿಯ ಮನವಿ ವಜಾ ಮಾಡಿದ ಹೈಕೋರ್ಟ್‌

ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಸೀಟು ಹಂಚಿಕೆಯಾಗಿರುವುದರಿಂದ ಮುಂದಿನ ಸುತ್ತುಗಳ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವಂತಿಲ್ಲ ಎಂದು ಕೆಇಎ ಮಾಹಿತಿ ಮುಖ್ಯಾಂಶದಲ್ಲಿನ ಷರತ್ತುಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದ ಪೀಠ.
Karnataka High Court
Karnataka High Court

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ತಿದ್ದುಪಡಿ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲೇಖಿಸಿ ಕೌನ್ಸೆಲಿಂಗ್‌ನ ಮಾಪ್‌-ಅಪ್‌ ಸುತ್ತಿನಲ್ಲಿ ಭಾಗವಹಿಸಲು ಅನುಮತಿ ಕೋರಿದ್ದ 19 ವರ್ಷದ ಎಂಬಿಬಿಎಸ್‌ ಕೋರ್ಸ್‌ ಆಕಾಂಕ್ಷಿಯ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ (ಕಾಳಲಿಂಗ ಪೊಲೀಸ್‌ ಪಾಟೀಲ್‌ ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು).

ಕಲಬುರ್ಗಿಯ ವಿದ್ಯಾರ್ಥಿ ಕಾಳಲಿಂಗ ಪೊಲೀಸ್‌ ಪಾಟೀಲ್‌ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ಎಸ್‌ ವಿಶ್ವಜಿತ್‌ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠವು ಅರ್ಜಿಯನ್ನು ವಜಾಮಾಡಿ ಆದೇಶಿಸಿತು.

“ಅರ್ಜಿದಾರ ವಿದ್ಯಾರ್ಥಿಗೆ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಸೀಟು ಹಂಚಿಕೆಯಾಗಿತ್ತು. ಕೆಇಎ ಮಾಹಿತಿ ಮುಖ್ಯಾಂಶದಲ್ಲಿನ ಷರತ್ತುಗಳ ಪ್ರಕಾರ ಅವರು ಮುಂದಿನ ಸುತ್ತುಗಳ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮಾಹಿತಿ ಮುಖ್ಯಾಂಶವನ್ನು ಪ್ರಶ್ನಿಸದ ಹಿನ್ನೆಲೆಯಲ್ಲಿ ಅದು ಅರ್ಜಿದಾರರನ್ನು ನಿರ್ಬಂಧಿಸಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಕಾಳಲಿಂಗ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು “ಈಗಾಗಲೇ ಸೀಟನ್ನು ಮರಳಿಸಿರುವುದರಿಂದ ಮತ್ತು ಪದವಿಗೆ ಪ್ರವೇಶ ಪಡೆಯದಿರುವುದರಿಂದ 2006ರ ನಿಯಮ 10(6)ರಲ್ಲಿ ಮಾಪ್‌ ಅಪ್‌ ಮತ್ತು ಆನಂತರದ ಕೌನ್ಸೆಲಿಂಗ್‌ ಸುತ್ತಿನಲ್ಲಿ ಭಾಗವಹಿಸಲು ತಮಗೆ ಅವಕಾಶವಿದೆ. ಮಾಹಿತಿ ಮುಖ್ಯಾಂಶವು ನಿಯಮಗಳಿಗೆ ಪೂರಕವಾಗಿಲ್ಲ. ಎಂಸಿಐ ನಿಯಂತ್ರಣಗಳ ಪ್ರಕಾರ ಆನಂತರದ ಕೌನ್ಸೆಲಿಂಗ್‌ ಸುತ್ತಿನಲ್ಲಿ ಭಾಗವಹಿಸಲು ತಮಗೆ ಅವಕಾಶವಿದೆ” ಎಂದು ವಾದಿಸಿದ್ದರು.

ಕೆಇಎ ಪ್ರತಿನಿಧಿಸಿದ್ದ ವಕೀಲ ಎನ್‌ ಕೆ ರಮೇಶ್‌ ಅವರು “2012ರ ಜುಲೈ 12ರ ಅಧಿಸೂಚನೆಯ ಪ್ರಕಾರ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇದರ ಪ್ರಕಾರ ಕೌನ್ಸೆಲಿಂಗ್‌ನ ಮುಂದಿನ ಸುತ್ತಿನಲ್ಲಿ ಭಾಗವಹಿಸಲು ಅಭ್ಯರ್ಥಿಗೆ ಯಾವುದೇ ಅವಕಾಶವಿಲ್ಲ” ಎಂದಿದ್ದರು.

ಕರ್ನಾಟಕ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶಕ್ಕೆ ಅಭ್ಯರ್ಥಿಗಳ ಆಯ್ಕೆ ನಿಯಮಗಳು 2006ರ ನೀತಿ 10ರಡಿ ಸರ್ಕಾರವು ಆದೇಶದ ಮೂಲಕ ಸೀಟು ಆಯ್ಕೆ ಮತ್ತು ರದ್ದತಿ ಮಾಡಬಹುದಾಗಿದೆ. ಯಾವುದೇ ವೈದ್ಯಕೀಯ ಸೀಟುಗಳನ್ನು ಮೊದಲು (ಮೊದಲ ಮತ್ತು ಎರಡನೇ ಆಯ್ಕೆ) ಮತ್ತು ಎರಡನೇ ಸುತ್ತಿನಲ್ಲಿ ಪಡೆದ ಅಭ್ಯರ್ಥಿಗಳು ಮತ್ತೆ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಮುಖ್ಯಾಂಶದಲ್ಲಿ ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕಾಳಗಿ ಗ್ರಾಮದ ಕಾಳಲಿಂಗ ಅವರಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರಲಿಲ್ಲ. 2022ರ ಮಾರ್ಚ್‌ 8ರಂದು ಎರಡನೇ ಸುತ್ತಿನಲ್ಲಿ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎನ್‌ಆರ್‌ಐ ವಿಭಾಗದಲ್ಲಿ ಸೀಟು ಹಂಚಿಕೆಯಾಗಿತ್ತು. ಮಾರ್ಚ್‌ 12ರಂದು ಆ ಸೀಟನ್ನು ಹಿಂದಿರುಗಿಸಲು ಕಾಳಲಿಂಗ ಅವರಿಗೆ ಅನುಮತಿಸಲಾಗಿತ್ತು.

“ತಾಂತ್ರಿಕ ಸಮಸ್ಯೆ ಮತ್ತು ತನ್ನ ತಪ್ಪಿನಿಂದಾಗಿ ಸಪ್ತಗಿರಿ ಕಾಲೇಜಿನಲ್ಲಿ ಸೀಟು ಬ್ಲಾಕ್‌ ಆಗಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ ಆ ಸಂಸ್ಥೆಯಲ್ಲಿ ದಾಖಲಾಗಲಿಲ್ಲ. ಕೌನ್ಸೆಲಿಂಗ್‌ನ ಮುಂದಿನ ಸುತ್ತುಗಳಲ್ಲಿ ಭಾಗವಹಿಸುವ ಆಯ್ಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ಭರವಸೆಯ ಮೇಲೆ ಸೀಟು ಆಯ್ಕೆ ಮಾಡಿದ್ದೆ. ಕಲಬುರ್ಗಿಯ ಕೆಬಿಎನ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್‌ ಕೋರ್ಸ್‌ಗೆ ಸೇರಲು ಅನುಮತಿಸಬೇಕು” ಎಂದು ಕಾಳಲಿಂಗ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯಲ್ಲಿ ಕೋರಿದ್ದರು.

ಮಾರ್ಚ್‌ 17ರಂದು ಮಾಹಿತಿ ಮುಖ್ಯಾಂಶದಲ್ಲಿ ಅರ್ಹತೆ ಮತ್ತು ಷರತ್ತುಗಳನ್ನು ಉಲೇಖಿಸಿ ಕೆಇಎಯು ಕಾಳಲಿಂಗ ಅವರ ಮನವಿಯನ್ನು ತಿರಸ್ಕರಿಸಿತ್ತು. ಕಾಳಲಿಂಗ ಅವರಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವುದರಿಂದ ಅವರು ಮಾಪ್‌ ಅಪ್‌ ಸುತ್ತಿಗೆ ಅರ್ಹವಾಗಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ಕಾಳಲಿಂಗ ಸಲ್ಲಿಸಿದ್ದ ಮನವಿಯನ್ನು ಈಗ ಹೈಕೋರ್ಟ್‌ ವಜಾ ಮಾಡಿದೆ.

Attachment
PDF
Kalaling Police Patil V. State of Karnataka.pdf
Preview

Related Stories

No stories found.
Kannada Bar & Bench
kannada.barandbench.com