[ಧರ್ಮಸ್ಥಳ ಪ್ರಕರಣ] ಎಸ್‌ಐಟಿ ತನಿಖೆಗೆ ನೀಡಿದ್ದ ತಡೆ ತೆರವು; ಮಟ್ಟಣ್ಣನವರ್‌, ತಿಮರೋಡಿ ವಿಚಾರಣೆಗೆ ಹಾದಿ ಸುಗಮ

ತನಿಖೆಗೆ ತಡೆ ನೀಡಿದ್ದನ್ನು ಹೈಕೋರ್ಟ್‌ ತೆರವುಗೊಳಿಸಿರುವುದರಿಂದ ಎಸ್‌ಐಟಿ ತನಿಖೆ ಮುಂದುವರಿಯಲಿದೆ. ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ಮಟ್ಟಣ್ಣನವರ್, ತಿಮರೋಡಿ ಮುಂತಾದವರು ಎಸ್‌ಐಟಿ ವಿಚಾರಣೆಗೆ ಹಾಜರಾಗಬೇಕಾಗಲಿದೆ.
[ಧರ್ಮಸ್ಥಳ ಪ್ರಕರಣ] ಎಸ್‌ಐಟಿ ತನಿಖೆಗೆ ನೀಡಿದ್ದ ತಡೆ ತೆರವು; ಮಟ್ಟಣ್ಣನವರ್‌, ತಿಮರೋಡಿ ವಿಚಾರಣೆಗೆ ಹಾದಿ ಸುಗಮ
Published on

ಧರ್ಮಸ್ಥಳದಲ್ಲಿ ಅಸಹಜ ಸಾವುಗಳಿಗೆ ಸಂಬಂಧಿಸಿದ ಹಲವಾರು ಶವಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ತೆರವುಗೊಳಿಸಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ಶವಗಳನ್ನು ಹೂತಿರುವ ಪ್ರಕರಣದ ಎಫ್‌ಐಆರ್‌ನಲ್ಲಿ ವಿಚಾರಣೆಗೆ ಹಾಜರಾಗಲು ಪೊಲೀಸರು ‌ನೀಡಿರುವ ನೋಟಿಸ್ ಹಾಗೂ ಬೆಳ್ತಂಗಡಿ ‌ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ ಜಯಂತ್ ಮತ್ತು ವಿಠಲ್‌ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Mohammad Nawaz
Justice Mohammad Nawaz

“ಎಫ್‌ಐಆರ್‌ಗೆ ತಡೆ ನೀಡಿ ಅಕ್ಟೋಬರ್ 30ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿಲಾಗಿದ್ದು, ಅರ್ಜಿಯನ್ನು ವಿಚಾರಣಾರ್ಹತೆಯ ಆಧಾರದಲ್ಲಿ ಆಲಿಸಲಾಗುವುದು” ಎಂದ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿತು.

ತನಿಖೆಗೆ ತಡೆ ನೀಡಿದ್ದನ್ನು ಹೈಕೋರ್ಟ್‌ ತೆರವುಗೊಳಿಸಿರುವುದರಿಂದ ಎಸ್‌ಐಟಿ ತನಿಖೆ ಮುಂದುವರಿಯಲಿದ್ದು, ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ವಿಠಲ್‌ಗೌಡ ಅವರು ಎಸ್‌ಐಟಿ ವಿಚಾರಣೆಗೆ ಹಾಜರಾಗಬೇಕಾಗಲಿದೆ.

ಇದಕ್ಕೂ ಮುನ್ನ ಎಸ್‌ಐಟಿ ಪರ ವಕೀಲ ಜಗದೀಶ್ ಅವರು “ಮ್ಯಾಜಿಸ್ಟ್ರೇಟ್ ಅನುಮತಿ‌ ಪಡೆದಿಲ್ಲ ಎಂದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಅರ್ಜಿದಾರರು ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಲಾಗಿದೆ. ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪೀಠ ಪರಿಶೀಲಿಸಬಹುದು” ಎಂದು ಆದೇಶ ಒದಗಿಸಿದರು.

“ಈ ಹಿಂದೆ ಎಸ್‌ಐಟಿ ತನಿಖೆಯನ್ನು ಶ್ಲಾಘಿಸಿದ್ದ ಅರ್ಜಿದಾರರು, ಈಗ ಅವರಿಗೇ ನೋಟಿಸ್ ನೀಡುತ್ತಿದ್ದಂತೆಯೇ ಕಿರುಕುಳ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಬಂದಿದ್ದಾರೆ. ಈ ಹಿಂದೆ ನೀಡಿದ್ದ ನೋಟಿಸ್‌ಗಳಿಗೂ, ಈಗ ನೀಡಿರುವ ನೋಟಿಸ್‌ಗಳಿಗೂ ಸಂಬಂಧವಿಲ್ಲ. ಆಗ ಅರ್ಜಿದಾರರನ್ನು ಸಾಕ್ಷಿಗಳಾಗಿ ವಿವರಣೆ ಕೇಳಲು ನೋಟಿಸ್ ನೀಡಲಾಗಿತ್ತು. ಈಗ ಅವರನ್ನು ಆರೋಪಿಗಳನ್ನಾಗಿಸಲಾಗಿದ್ದು, ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಇದರಲ್ಲಿ ಕಿರುಕುಳದ ಪ್ರಶ್ನೆಯೇ ಇಲ್ಲ. ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿರುವುದರಿಂದ ತನಿಖೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ, ಈ ಹಿಂದೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು” ಎಂದು ಕೋರಿದರು.

Kannada Bar & Bench
kannada.barandbench.com