ಜೀವನಾಂಶ ಆದೇಶ ಕಾರ್ಯಗತಗೊಳಿಸಲು ಲುಕ್‌ಔಟ್‌ ಸುತ್ತೋಲೆ ಹೊರಡಿಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯಗಳಿಗಿಲ್ಲ: ಹೈಕೋರ್ಟ್‌

“ಕೋರ್ಟ್‌ ಆದೇಶದ ಹೊರತಾಗಿಯೂ ಎಲ್‌ಒಸಿ ಪ್ರಕ್ರಿಯೆ ಮುಂದುವರಿಸುವುದು ನ್ಯಾಯಾಂಗ ನಿಂದನೆಯಾಗಲಿದೆ. ಇದು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಖಾತರಿ ಹಕ್ಕಿನ ಉಲ್ಲಂಘನೆಯಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.
Divorce
Divorce
Published on

ಪತ್ನಿ, ಮಕ್ಕಳು ಮತ್ತು ಪೋಷಕರ ಜೀವನಾಂಶಕ್ಕೆ ಸಂಬಂಧಿಸಿದ ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 125ರ ಅಡಿ ಆದೇಶ ಕಾರ್ಯಗತಗೊಳಿಸುವಾಗ ಲುಕ್‌ಔಟ್‌ ಸುತ್ತೋಲೆ (ಎಲ್‌ಒಸಿ) ಹೊರಡಿಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯಗಳಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಪತ್ನಿಯ ಅರ್ಜಿ ಪುರಸ್ಕರಿಸಿ ಎಲ್‌ಒಸಿ ಹೊರಡಿಸಿದ್ದ ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು 30.10.2024ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮೊಹಮ್ಮದ್‌ ಅಜೀಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿ ಮೇಲಿನಂತೆ ಹೇಳಿದೆ.

“ಸಿಆರ್‌ಪಿಸಿ ಸೆಕ್ಷನ್‌ 125ರ ಅಡಿ ಜೀವನಾಂಶಕ್ಕೆ ಸಂಬಂಧಿಸಿದ ಆದೇಶಗಳು ನ್ಯಾಯಾಂಗ ಆದೇಶದ ಮೂಲಕ ಸಿವಿಲ್‌ ಹೊಣೆಗಾರಿಕೆ ಜಾರಿಗೆ ಆಸ್ಪದ ನೀಡುತ್ತವೆ. ಈ ಸಂದರ್ಭದಲ್ಲಿ ಪಕ್ಷಕಾರರು ಡಿಫಾಲ್ಟ್‌ ಆದರೆ ಆಸ್ತಿ ಜಫ್ತಿ, ಬಂಧನ ವಾರೆಂಟ್‌ ಅಥವಾ ಜೈಲು ಶಿಕ್ಷೆ ವಿಧಿಸುವ ಆದೇಶ ಕಾರ್ಯಗತಗೊಳಿಸುವುದು ಪರಿಹಾರವಾಗಿದೆ. ಕ್ರಿಮಿನಲ್‌ ಪ್ರಕ್ರಿಯೆಯಿಂದ ಆರೋಪಿಗಳು ತಪ್ಪಿಸಿಕೊಳ್ಳದಂತೆ ತಡೆಯುವುದು ಲುಕ್‌ಔಟ್‌ ಸುತ್ತೋಲೆಯ ಉದ್ದೇಶವಾಗಿದೆಯೇ ವಿನಾ ಅದನ್ನು ಜೀವನಾಂಶ ಬಾಕಿ ವಸೂಲಿ ಮಾಡಲು ಹೊರಡಿಸಲಾಗದು” ಎಂದು ಸ್ಪಷ್ಟಪಡಿಸಿದೆ.

“ಅರ್ಜಿದಾರ ಪತಿಯ ವಾದದಲ್ಲಿ ಮೆರಿಟ್‌ ಇದೆ. ಸಿಆರ್‌ಪಿಸಿ ಸೆಕ್ಷನ್‌ 125ರ ಅಡಿ ಆದೇಶ ಕಾರ್ಯಗತಗೊಳಿಸುವಾಗ ಲುಕ್‌ಔಟ್‌ ಸುತ್ತೋಲೆ ಹೊರಡಿಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕೆ ಇಲ್ಲ” ಎಂದು ಆದೇಶಿಸಿದೆ.

“ಎಲ್‌ಒಸಿ ಅಮಾನತುಗೊಳಿಸಿ ಆದೇಶ ಮಾಡಿದ ಮೇಲೆ ಅದನ್ನು ಹಿಂಪಡೆಯುವಂತೆ ಮಾಡುವುದು ಸಕ್ಷಮ ಪ್ರಾಧಿಕಾರದ ತುರ್ತು ಕೆಲಸವಾಗಿದೆ. ಅದಾಗ್ಯೂ, ನ್ಯಾಯಾಲಯದ ಆದೇಶಗಳ ಹೊರತಾಗಿಯೂ ಎಲ್‌ಒಸಿ ಜಾರಿ ಕೇಳುವ ಅಧಿಕಾರಿಗಳು ಅದಕ್ಕೆ ಮುಕ್ತಾಯ ಹಾಡಲು ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಹೀಗಾಗಿ, ಎಲ್‌ಒಸಿ ರದ್ದುಗೊಳಿಸಿದ ಆದೇಶವನ್ನು ವಲಸೆ ವಿಭಾಗಕ್ಕೆ ಮುಟ್ಟಿಸಿ, ಅದನ್ನು ಹಿಂಪಡೆಯುವ ಸಂಬಂಧ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶಗಳಿಗೆ ಪಾವಿತ್ರ್ಯ ಉಳಿಯುವುದಿಲ್ಲ” ಎಂದು ಪೀಠ ಹೇಳಿದೆ.

“ನ್ಯಾಯಾಲಯದ ಆದೇಶದ ಹೊರತಾಗಿಯೂ ಎಲ್‌ಒಸಿ ಪ್ರಕ್ರಿಯೆ ಮುಂದುವರಿಸುವುದು ಅಕ್ರಮ ಮತ್ತು ನ್ಯಾಯಾಂಗ ನಿಂದನೆಯಾಗಲಿದೆ. ಅಲ್ಲದೇ, ಇದು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಖಾತರಿ ಹಕ್ಕಿನ ಉಲ್ಲಂಘನೆಯಾಗಲಿದೆ” ಎಂದು ಹೇಳಿದೆ.

ಅರ್ಜಿದಾರರ ಪತಿ ಪರ ವಕೀಲ ಕೆ ರವಿಶಂಕರ್‌ ಅವರು “ಜೀವನಾಂಶ ಆದೇಶ ಕಾರ್ಯಗತಗೊಳಿಸುವಾಗ ಎಲ್‌ಒಸಿ ಹೊರಡಿಸುವ ವ್ಯಾಪ್ತಿ ಕೌಟುಂಬಿಕ ನ್ಯಾಯಾಲಯಕ್ಕೆ ಇಲ್ಲ. ಈ ಕುರಿತು ರಜನೀಶ್‌ ವರ್ಸಸ್‌ ನೇಹಾ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ” ಎಂದರು.

ಪತ್ನಿ ಪರ ವಕೀಲ ಚಂದ್ರನಾಥ್‌ ಅರಿಗ ಅವರು “ಜೀವನಾಂಶ ಆದೇಶ ಮಾಡಿದ ಮೇಲೆ ಅದನ್ನು ಪಾಲಿಸುವುದು ಪತಿಯ ಕರ್ತವ್ಯವಾಗಿದೆ. ಅರ್ಜಿದಾರ ಪತಿಯು ದೇಶದ ಹೊರಗೆ ನೆಲೆಸಿದ್ದು, ಆದೇಶ ಪಾಲಿಸಲು ವಿಫಲರಾಗಿದ್ದಾರೆ. ಇದರಿಂದ ಕೌಟುಂಬಿಕ ನ್ಯಾಯಾಲಯಕ್ಕೆ ಎಲ್‌ಒಸಿ ಹೊರಡಿಸುವುದು ಬಿಟ್ಟು ಬೇರೆ ದಾರಿ ಇರಲಿಲ್ಲ” ಎಂದಿದ್ದರು.

Attachment
PDF
Mohammed Azeem Vs Sabeeha
Preview
Kannada Bar & Bench
kannada.barandbench.com